ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ ಆಟಗಾರ್ತಿ ತೇಜಸ್ವಿನಿ ಬಾಯಿಗೆ ₹ 2 ಲಕ್ಷ ನೆರವು

Last Updated 21 ಮೇ 2021, 12:41 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ನಿಂದಾಗಿ ಪತಿಯನ್ನು ಕಳೆದುಕೊಂಡಿರುವ ಕಬಡ್ಡಿ ಆಟಗಾರ್ತಿ ಕರ್ನಾಟಕದ ತೇಜಸ್ವಿನಿ ಬಾಯಿ ಅವರ ನೆರವಿಗೆ ಕೇಂದ್ರ ಕ್ರೀಡಾ ಸಚಿವಾಲಯ ಧಾವಿಸಿದ್ದು, ₹ 2 ಲಕ್ಷ ಸಹಾಯ ಒದಗಿಸಿದೆ.

ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದಿರುವ ತೇಜಸ್ವಿನಿ ಅವರ ಪತಿ ನವೀನ್ ಮೇ 11ರಂದು ಸೋಂಕಿನಿಂದ ಮೃತಪಟ್ಟಿದ್ದರು. ಮೇ 1ರಂದು ಅವರಿಗೆ ಕೋವಿಡ್‌ ಇರುವುದು ದೃಢಪಟ್ಟಿತ್ತು.

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಜಿ ಅಥ್ಲೀಟ್‌ಗಳು ಹಾಗೂ ಕೋಚ್‌ಗಳಿಗೆ ನೆರವು ನೀಡುವ ಕಾರ್ಯಕ್ರಮದಡಿ ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಸಹಭಾಗಿತ್ವದಲ್ಲಿ ಕ್ರೀಡಾ ಸಚಿವಾಲಯ ಈ ಧನಸಹಾಯ ಮಂಜೂರು ಮಾಡಿದೆ.

‘ನನ್ನ ಪತಿಗೆ ಕೇವಲ 30 ವರ್ಷ ವಯಸ್ಸಾಗಿತ್ತು. ಆದರೆ ತಮ್ಮ ತಂದೆಯ ನಿಧನದಿಂದಾಗಿ ಅವರು ಎದೆಗುಂದಿದ್ದರು. ಇದೇ ಆತಂಕ ಹಾಗೂ ಒತ್ತಡ ಅವರ ಜೀವ ತೆಗೆದುಕೊಂಡಿತು‘ ಎಂದು ತೇಜಸ್ವಿನಿ ಹೇಳಿದ್ದಾಗಿ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ತಿಳಿಸಿದೆ.

‘ನಾನು ನೆರವು ನಿರೀಕ್ಷಿಸಿರಲಿಲ್ಲ. ಆದರೆ ಕ್ರೀಡಾ ಸಚಿವಾಲಯ, ಸಾಯ್ ಹಾಗೂ ಐಒಎ ಈ ಕುರಿತು ಕ್ಷಿಪ್ರ ನಿರ್ಧಾರ ತೆಗೆದುಕೊಂಡಿವೆ. ಇಂತಹ ನೆರವು ಇದೇ ಮೊದಲ ಬಾರಿ ನಮಗೆ ಸಿಗುತ್ತಿದೆ. ನನಗೆ ಐದು ತಿಂಗಳ ಮಗುವಿದ್ದು, ಅದರ ಭವಿಷ್ಯಕ್ಕೆ ಈ ಹಣವನ್ನು ವಿನಿಯೋಗಿಸುವೆ‘ ಎಂದು ತೇಜಸ್ವಿನಿ ಹೇಳಿದ್ದಾರೆ.

ತೇಜಸ್ವಿನಿ ಅವರಿಗೆ 2011ರಲ್ಲಿ ಅರ್ಜುನ ಪುರಸ್ಕಾರ ಸಂದಿದೆ. 2010 ಹಾಗೂ 2014ರ ಏಷ್ಯನ್ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದ ಭಾರತ ಕಬಡ್ಡಿ ತಂಡದಲ್ಲಿ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT