ಸೋಮವಾರ, ಸೆಪ್ಟೆಂಬರ್ 27, 2021
22 °C

ಮಹಿಳಾ ಹಾಕಿ: ಮಿಂಚಿದ ಗುರ್ಜಿತ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹಿರೋಷಿಮಾ: ಗುರ್ಜಿತ್‌ ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ತಂಡ, ಎಫ್‌ಐಎಚ್‌ ಮಹಿಳಾ  ಸಿರೀಸ್‌ ಫೈನಲ್ಸ್‌ನ ತನ್ನ ಎರಡನೇ ಪಂದ್ಯದಲ್ಲಿ ಭಾನುವಾರ ಪೋಲೆಂಡ್‌ ತಂಡವನ್ನು 5–0 ಗೋಲುಗಳಿಂದ ಸುಲಭವಾಗಿ ಸೋಲಿಸಿತು.

ಪಂದ್ಯದ ಆರಂಭದಿಂದಲೇ ಭಾರತ ಎದುರಾಳಿ ತಂಡದ ಮೇಲೆ ಒತ್ತಡ ಹೇರಿತು. ಸುನಿತಾ ಲಾಕ್ರಾ ನೇತೃತ್ವದಲ್ಲಿ ಎಡಭಾಗದಿಂದ ಪೋಲೆಂಡ್‌ನ ರಕ್ಷಣಾ ವಿಭಾಗದ ಮೇಲೆ ಭಾರತ ನಿಯಮಿತವಾಗಿ ದಾಳಿ ನಡೆಸಿತು. ಸುನೀಲಾ ಲಾಕ್ರಾ ಪಾಸ್‌ನಲ್ಲಿ ನವಜೋತ್‌ ಕೌರ್‌ ಗೋಲಿನತ್ತ ನಿರ್ದೇಶಿಸಿದ ಚೆಂಡನ್ನು ಜ್ಯೋತಿ ಗೋಲುಪೆಟ್ಟಿಗೆಗೆ ತಳ್ಳಿ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು.

ಎರಡನೇ ಕ್ವಾರ್ಟರ್‌ನ ಕೊನೆಯ ಐದು ನಿಮಿಷಗಳಲ್ಲಿ ಭಾರತಕ್ಕೆ ಸರಣಿ ಪೆನಾಲ್ಟಿ ಕಾರ್ನರ್‌ಗಳು ಒದಗಿದವು. ಇಂಥ ಒಂದು ಅವಕಾಶದಲ್ಲಿ ಗುರ್ಜಿತ್‌ ಡ್ರ್ಯಾಗ್‌ಫ್ಲಿಕ್‌ಅನ್ನು ಎದು ರಾಳಿ ಗೋಲ್‌ಕೀಪರ್‌ ಗಬಾರಾ ಮುಂದಕ್ಕೆ ತಳ್ಳಿದರು. ಅದನ್ನು ವಂದನಾ ಕಟಾರಿಯಾ ಗೋಲಿನತ್ತ ನಿರ್ದೇಶಿಸಿದರು. ಕೆಲವೇ ಹೊತ್ತಿನಲ್ಲಿ ಗುರ್ಜಿತ್‌ ಮುನ್ನಡೆಯನ್ನು 3–0ಗೆ ಹಿಗ್ಗಿಸಿದರು.

ಭಾರತಕ್ಕೆ 35ನೇ ನಿಮಿಷ ದೊರೆತ ‘ಸ್ಟ್ರೋಕ್‌’ ಅವಕಾಶವನ್ನು ಗುರ್ಜಿತ್‌ ಗೋಲಾಗಿ ಪರಿವರ್ತಿಸಿ ವೈಯಕ್ತಿಕ ಎರಡನೇ ಗೋಲು ದಾಖಲಿಸಿದರು. 4–0 ಮುನ್ನಡೆಯೊಂದಿಗೆ ಭಾರತ ಅಂತಿಮ ಕ್ವಾರ್ಟರ್‌ ಮುಂಚಿನ ವಿರಾಮಕ್ಕೆ ಹೋಯಿತು. ಅ‌ಂತಿಮ ಕ್ವಾರ್ಟರ್‌ನಲ್ಲಿ ಒರಟಾಟ ಕಂಡುಬಂತು.

ಒಂದು ಹಂತದಲ್ಲಿ ಎರಡೂ ತಂಡಗಳು ಹತ್ತು ಆಟಗಾರ್ತಿಯರಿಗೆ ಸೀಮಿತಗೊಂಡವು. ಆದರೂ ಆಟ ಭಾರತದ ನಿಯಂತ್ರಣದಲ್ಲೇ ಇತ್ತು. 56ನೇ ನಿಮಿಷ ಎದುರಾಳಿ ಗೋಲಿನತ್ತ ಮುನ್ನುಗ್ಗಿದ ನವನೀತ್‌ ಕೌರ್‌, ತಡೆಯಲು ಬಂದಿದ್ದ ಎದುರಾಳಿ ರಕ್ಷಣಾ ಆಟಗಾರ್ತಿಯರನ್ನು ವಂಚಿಸಿ ಆಕರ್ಷಕ ರೀತಿಯಲ್ಲಿ ತಂಡದ ಐದನೇ ಗೋಲನ್ನು ಗಳಿಸಿದರು.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು