ಹಾಕಿ ವಿಶ್ವಕಪ್: ಎಂಟರಘಟ್ಟ ತಲುಪಿದ ಆಸ್ಟ್ರೇಲಿಯಾ

ರೂರ್ಕೆಲಾ: ಬ್ಲೇಕ್ ಗೋವರ್ಸ್ ಗಳಿಸಿದ ಅಮೋಘ ನಾಲ್ಕು ಗೋಲುಗಳ ಬಲದಿಂದ ಆಸ್ಟ್ರೇಲಿಯಾ ತಂಡವು ಪುರುಷರ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ನೇರ ಪ್ರವೇಶ ಪಡೆಯಿತು.
ಇಲ್ಲಿ ಶುಕ್ರವಾರ ನಡೆದ ‘ಎ’ ಗುಂಪಿನ ಅಂತಿಮ ಹಣಾಹಣಿಯಲ್ಲಿ ಕಾಂಗರೂ ನಾಡಿನ ಬಳಗ 9–2ರಿಂದ ದಕ್ಷಿಣ ಆಫ್ರಿಕಾ ತಂಡವನ್ನು ಪರಾಭವಗೊಳಿಸಿತು. ಆಸ್ಟ್ರೇಲಿಯಾ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿ, ಮಲೇಷ್ಯಾ ಮತ್ತು ಸ್ಪೇನ್ ನಡುವಣ ಕ್ರಾಸ್‌ಓವರ್ ಪಂದ್ಯದಲ್ಲಿ ಜಯಿಸುವ ತಂಡವನ್ನು ಎದುರಿಸಲಿದೆ. ಜನವರಿ 24ರಂದು ಈ ಪಂದ್ಯ ನಡೆಯಲಿದೆ.
ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಗೋವರ್ಸ್ 4, 15, 19 ಮತ್ತು 20ನೇ ನಿಮಿಷಗಳಲ್ಲಿ ಕೈಚಳಕ ತೋರಿದರು. ಆರಂಭದಿಂದಲೇ ಪಾರೆಮ್ಯ ಮೆರೆದ ಆಸ್ಟ್ರೇಲಿಯಾ ಮೊದಲಾರ್ಧದ ವೇಳೆಗೆ 7–1ರಿಂದ ಮುಂದಿತ್ತು. ಅದೇ ಲಯದೊಂದಿಗೆ ಗೆಲುವು ತನ್ನದಾಗಿಸಿಕೊಂಡಿತು.
ಟಾಮ್ ಕ್ರೇಗ್ (10ನೇ ನಿ.), ಜೇಕ್ ಹಾರ್ವಿ (22ನೇ ನಿ.), ಡೇನಿಯಲ್ ಬೀಲ್ (28ನೇ ನಿ.), ಜೆರೆಮಿ ಹೇಯ್‌ವರ್ಡ್ (32ನೇ ನಿ.) ಮತ್ತು ಟಿಮ್ ಬ್ರ್ಯಾಂಡ್ (47ನೇ ನಿ.) ವಿಜೇತ ತಂಡದ ಪರ ಗೋಲು ಗಳಿಸಿದರು.
ದಕ್ಷಿಣ ಆಫ್ರಿಕಾ ತಂಡದ ಎರಡು ಗೋಲುಗಳನ್ನು ಟುಲಿ ಕೊಬಿಲೆ (8ನೇ ನಿ.) ಮತ್ತು ಕೊಕ್ ತೆವಿನ್ (58ನೇ ನಿ.) ದಾಖಲಿಸಿದರು.
ಡ್ರಾ ಪಂದ್ಯದಲ್ಲಿ ಅರ್ಜೆಂಟೀನಾ– ಫ್ರಾನ್ಸ್: ಎ ಗುಂಪಿನ ಇನ್ನೊಂದು ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ತಂಡಗಳು 5–5ರಿಂದ ಡ್ರಾ ಸಾಧಿಸಿದವು.
ಎರಡೂ ತಂಡಗಳು ಕ್ರಾಸ್‌ಓವರ್ ಪಂದ್ಯಗಳಲ್ಲಿ ಆಡಲಿವೆ.
ಬೆಲ್ಜಿಯಂಗೆ ಭರ್ಜರಿ ಗೆಲುವು: ಬಿ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂ ತಂಡವು 7–1ರಿಂದ ಜಪಾನ್ ತಂಡಕ್ಕೆ ಸೋಲುಣಿಸಿತು. ಬೆಲ್ಜಿಯಂ ತಂಡಕ್ಕಾಗಿ ಬೂನ್ ಟಾಮ್ ಐದು ಗೋಲು (21, 26, 27, 50, 55ನೇ ನಿಮಿಷ) ದಾಖಲಿಸಿ ಮಿಂಚಿದರು. ಚಾರ್ಲಿಯರ್ ಸೆಡ್ರಿಕ್ (17ನೇ ನಿ.) ಮತ್ತು ಡಾಕಿಯರ್ ಸೆಬಾಸ್ಟಿಯನ್ (51ನೇ ನಿ.) ತಲಾ ಒಂದು ಗೋಲು ಹೊಡೆದರು.
ಜಪಾನ್ ಪರ ಫುಕುದಾ ಕೆಂಟಾರೊ (45ನೇ ನಿ.) ಗೋಲು ದಾಖಲಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.