ಭಾನುವಾರ, ಅಕ್ಟೋಬರ್ 25, 2020
21 °C
2022ರಲ್ಲಿ ಚೀನಾದಲ್ಲಿ ನಡೆಯಲಿರುವ ವಿಂಟರ್‌ ಒಲಿಂಪಿಕ್‌ನಲ್ಲಿ ಸ್ಪರ್ಧಿಸಲು ಸಿದ್ಧತೆ

PV Web Exclusive | ಐಸ್‌ ಸ್ಕೇಟಿಂಗ್‌: ಆಕಾಶ್‌ಗೆ ಒಲಿಂಪಿಕ್‌ ಗುರಿ

ಎನ್. ನವೀನ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಅಂತರರಾಷ್ಟ್ರೀಯ ಐಸ್ ಸ್ಕೇಟಿಂಗ್‌ ಸ್ಪರ್ಧೆಗಳಲ್ಲಿ 2015ರಿಂದ ಭಾರತವನ್ನು ಪ್ರತಿನಿಧಿಸುತ್ತಿರುವ ಮೈಸೂರಿನ ಪ್ರತಿಭೆ ಆಕಾಶ್‌ ಆರಾಧ್ಯ ಅವರು 2022ರಲ್ಲಿ ಚೀನಾದಲ್ಲಿ ನಡೆಯಲಿರುವ ವಿಂಟರ್‌ ಒಲಿಂಪಿಕ್‌ನಲ್ಲಿ ಸ್ಪರ್ಧಿಸುವ ಗುರಿ ಹೊಂದಿದ್ದು, ಅದಕ್ಕೆ ಅಗತ್ಯ ಇರುವ ತರಬೇತಿಯನ್ನು ಕೆನಡಾದಲ್ಲಿ ಪಡೆಯುತ್ತಿದ್ದಾರೆ.

ರೋಲರ್‌ ಸ್ಕೇಟಿಂಗ್‌ ಹಾಗೂ ಐಸ್‌ ಸ್ಕೇಟಿಂಗ್‌ನಲ್ಲಿ ಮೇರು ಸಾಧನೆ ಮಾಡುವ ಅಭಿಲಾಷೆ ಆಕಾಶ್‌ ಅವರದ್ದು. ಒಲಿಂಪಿಕ್‌ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲೇಬೇಕೆಂಬ ಹಟಕ್ಕೆ ಬಿದ್ದಿರುವ ಅವರು, ಅದಕ್ಕಾಗಿ ತಮ್ಮ ರ‍್ಯಾಂಕಿಂಗ್‌ ಮಟ್ಟವನ್ನು ವೃದ್ಧಿಸಿಕೊಳ್ಳುವ ಕಡೆಗೆ ಗಮನ ಹರಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಬೇಕಾದರೆ ಕನಿಷ್ಠ 36 ರ‍್ಯಾಂಕಿಂಗ್‌ ಪಡೆಯಬೇಕು. ಸದ್ಯ ಆಕಾಶ್‌ ಅವರ ರ್‍ಯಾಂಕಿಂಗ್‌ 46 ಇದೆ. ಕಳೆದ ನಾಲ್ಕು ವರ್ಷಗಳಿಂದ ಕೆನಡಾದಲ್ಲಿ ಕಠಿಣ ಅಭ್ಯಾಸ ಹಾಗೂ ತರಬೇತಿ ಪಡೆಯುತ್ತಿದ್ದಾರೆ.

ಭಾರತದಲ್ಲಿ ರೋಲರ್‌ ಸ್ಕೇಟಿಂಗ್‌ನಲ್ಲಿ ಸಾಧನೆ ಮಾಡಿರುವ ಅನೇಕ ಕ್ರೀಡಾಪಟುಗಳು ಸಿಗುತ್ತಾರೆ. ಆದರೆ, ಐಸ್‌ ಸ್ಕೇಟಿಂಗ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದವರು ವಿರಳ. ಅದರಲ್ಲಿ ಆಕಾಶ್‌ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಅಂತರರಾಷ್ಟ್ರೀಯ ಐಸ್‌ ಸ್ಕೇಟಿಂಗ್‌ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ 2015ರಿಂದ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಕ್ರೀಡಾಪಟು ಆಕಾಶ್‌.

ಐಸ್‌ ಸ್ಕೇಟಿಂಗ್‌ ತರಬೇತಿಗೆ ಭಾರತದಲ್ಲಿ ಪೂರಕ ವಾತಾವರಣ ಇಲ್ಲ. ತರಬೇತಿ ಪಡೆಯಬೇಕಾದರೆ ಅಂತರರಾಷ್ಟ್ರೀಯಮಟ್ಟದ ಐಸ್‌ ರಿಂಕ್‌ ಅಗತ್ಯ. ಕೋಲ್ಕತ್ತ, ಶಿಮ್ಲಾ ಹಾಗೂ ಜಮ್ಮು ಕಾಶ್ಮೀರದ ಗುಲ್ಮಾರ್ಗ್‌ ಎಂಬಲ್ಲಿ ಐಸ್‌ ರಿಂಕ್‌ಗಳು ಇದ್ದರೂ ಅವು ಚಿಕ್ಕದಾಗಿವೆ. ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಬೇಕಾದರೆ ಅದಕ್ಕೆ ತಕ್ಕಂತೆ ತರಬೇತಿಯೂ ಅಗತ್ಯ. ಹೀಗಾಗಿ, ಕೆನಡಾದ ಕ್ಯಾಲ್ಗರಿ ಎಂಬ ನಗರದಲ್ಲಿರುವ ‘ಒಲಿಂಪಿಕ್ ಒವೆಲ್’ ಎಂಬ ಅಂತರರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಆಕಾಶ್‌ ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿ ಬೇರೆ ಬೇರೆ ದೇಶಗಳಿಂದ ಬಂದ ಕ್ರೀಡಾಪಟುಗಳು ಅಭ್ಯಾಸ ಮಾಡುತ್ತಿದ್ದಾರೆ.

‘ವರ್ಲ್ಡ್‌ ಕಪ್‌ ಸ್ಪರ್ಧೆಯಲ್ಲಿ ಗೆಲುವು ಸಾಧಿಸಬೇಕಾದರೆ ನಿರಂತರ ಅಭ್ಯಾಸ ಅಗತ್ಯ. ಹೀಗಾಗಿ, ವಾರದ ಆರು ದಿನ, ಪ್ರತಿದಿನ 6 ಗಂಟೆ ತರಬೇತಿ ಪಡೆಯುತ್ತೇನೆ. ಕ್ಯಾಲ್ಗರಿ ನಗರದಲ್ಲಿ ಮನೆಯೊಂದರ ಕೊಠಡಿಯನ್ನು ಬಾಡಿಗೆ ಪಡೆದಿದ್ದೇನೆ. ಈ ಕೊಠಡಿಗೆ ₹22 ಸಾವಿರ ಬಾಡಿಗೆ ಇದೆ. ಅಲ್ಲದೆ, ಈ ನಗರ ಶೀತ ಪ್ರದೇಶವಾಗಿರುವುದರಿಂದ ನಿರ್ವಹಣಾ ವೆಚ್ಚವೂ ಹೆಚ್ಚು. ಪ್ರಯಾಣ ವೆಚ್ಚ, ಊಟ ಸೇರಿದಂತೆ ಎಲ್ಲ ಖರ್ಚುಗಳಿಗೆ ಪ್ರತಿ ತಿಂಗಳು ₹1.5 ಲಕ್ಷ ವೆಚ್ಚವಾಗುತ್ತದೆ’ ಎನ್ನುತ್ತಾರೆ ಆಕಾಶ್‌ ಆರಾಧ್ಯ.

‘ಕೊರೊನಾ ಸೋಂಕು ಜಗತ್ತಿನ ಎಲ್ಲೆಡೆ ಹಬ್ಬಿರುವುದರಿಂದ ಕಳೆದ ಮಾರ್ಚ್‌ನಲ್ಲಿ ಊರಿಗೆ ಬಂದೆ. ಮತ್ತೆ ಅಭ್ಯಾಸದಲ್ಲಿ ನಿರತವಾಗಬೇಕಿದ್ದು, ಶೀಘ್ರದಲ್ಲೇ ಕೆನಡಾಕ್ಕೆ ಹೊರಡುತ್ತೇನೆ’ ಎಂದು ಆಕಾಶ್‌ ಹೇಳುತ್ತಾರೆ.

27 ವರ್ಷ ಆಕಾಶ್‌ ಅವರಿಗೆ 2016ರಲ್ಲಿ ರಾಜ್ಯ ಸರ್ಕಾರ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. 2017ರಲ್ಲಿ ಏಷ್ಯನ್ ವಿಂಟರ್ ಗೇಮ್ಸ್‌ನಲ್ಲಿ ಭಾರತ ತಂಡಕ್ಕೆ ಫ್ಲಾಗ್ ಬೇರರ್ (ಧ್ವಜಧಾರಕ) ಆಗಿದ್ದರು. ಅಲ್ಲದೆ, ರಾಜ್ಯ, ರಾಷ್ಟ್ರೀಯ ಮಟ್ಟದ ರೋಲರ್‌ ಹಾಗೂ ಐಸ್‌ ಸ್ಕೇಟಿಂಗ್‌ನ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಏನಿದು ಐಸ್‌ ಸ್ಕೇಟಿಂಗ್‌?

ಐಸ್‌ ಸ್ಕೇಟ್‌‌ಗಳನ್ನು ಬಳಸಿಕೊಂಡು ಮಂಜುಗಡ್ಡೆಯ ಮೇಲೆ ಜಾರುವುದೇ ಐಸ್‌ ಸ್ಕೇಟಿಂಗ್‌. ಇದಕ್ಕಾಗಿ ವಿಶೇಷವಾಗಿ ರೂಪಿಸಿದ ಐಸ್‌ ರಿಂಕ್‌ಗಳ (ಟ್ರ್ಯಾಕ್‌) ಅಗತ್ಯವಿದೆ. ನೈಸರ್ಗಿಕವಾಗಿ ಕಂಡುಬರುವ ಸರೋವರ ಹಾಗೂ ನದಿಗಳಂತಹ ಹಿಮಗಡ್ಡೆಗಳ ಮೇಲೂ ಐಸ್‌–ಸ್ಕೇಟಿಂಗ್‌ ಮಾಡಬಹುದು.

ರೋಲರ್‌ ಸ್ಕೇಟಿಂಗ್‌ನಲ್ಲಿ ಚಕ್ರಗಳಿರುವ ಶೂ ಧರಿಸಿ ರಸ್ತೆ ಅಥವಾ ಟ್ರ್ಯಾಕ್‌ ಮೇಲೆ ಚಲಿಸುತ್ತಾರೆ. ಆದರೆ, ಐಸ್‌ ಸ್ಕೇಟಿಂಗ್‌ನಲ್ಲಿ ಬ್ಲೇಡ್‌ಗಳನ್ನು ಹೊಂದಿದ ಶೂಗಳನ್ನು ಧರಿಸಿ ಮಂಜುಗಡ್ಡೆ ಮೇಲೆ ಜಾರುತ್ತಾ ಸಾಗುತ್ತಾರೆ. ಈ ಎರಡೂ ಕ್ರೀಡೆಗಳಲ್ಲಿ ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ.

‘ರೋಲರ್ ಸ್ಕೇಟಿಂಗ್ ಹಾಗೂ ಐಸ್ ಸ್ಕೇಟಿಂಗ್ ಎರಡೂ ಅಪಾಯಕಾರಿ. ರೋಲರ್‌ ಸ್ಕೇಟಿಂಗ್‌ನಲ್ಲಿ ಸ್ಪರ್ಧಿಸಿದಾಗ ಆಯತಪ್ಪಿದರೆ ಕಲ್ಲು ಅಥವಾ ಯಾವುದಾದರೂ ವಸ್ತುವಿನ ಮೇಲೆ ಬಿದ್ದು ಗಾಯಗಳಾಗುವ ಸಂಭವವಿದೆ. ಆದರೆ, ಐಸ್‌ ಸ್ಕೇಟಿಂಗ್‌ನಲ್ಲಿ ಇಂತಹ ಸಮಸ್ಯೆ ಇಲ್ಲದಿದ್ದರೂ, ಮಂಜುಗಡ್ಡೆ ಮೇಲೆ ಜಾರುವ ವೇಳೆ ಒಬ್ಬ ಸ್ಪರ್ಧಿಯ ಮೇಲೆ ಮತ್ತೊಬ್ಬ ಸ್ಪರ್ಧಿ ಬಿದ್ದರೆ, ಆತ ಧರಿಸಿರುವ ಬ್ಲೇಡ್‌ ತಾಗುವ ಸಾಧ್ಯತೆ ಇರುತ್ತದೆ. ಇದರಿಂದ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸುವುದಕ್ಕಾಗಿ ಚಾಕು ಅಥವಾ ಕತ್ತರಿಯಿಂದ ಕತ್ತರಿಸಲು ಸಾಧ್ಯವಾಗದ ಕೆವೆಲಾರ್‌ ಎಂಬ ಸೂಟ್‌ ಧರಿಸಲಾಗುತ್ತದೆ ಎಂದು ವಿವರಿಸುತ್ತಾರೆ ಆಕಾಶ್‌.

ಸಾಧನೆಗೆ ತಂದೆ–ತಾಯಿ ಪ್ರೇರಣೆ

ಮೈಸೂರಿನ ಚಾಮರಾಜಪುರಂನ ನಿವಾಸಿಗಳಾದ ನಾಗಭೂಷಣ್ ಆರಾಧ್ಯ ಹಾಗೂ ರೇಖಾ ಆರಾಧ್ಯ ದಂಪತಿ ಪುತ್ರ ಆಕಾಶ್‌ ಆರಾಧ್ಯ. ತಂದೆ ಚಾರ್ಟರ್ಡ್ ಅಕೌಂಟಂಟ್, ತಾಯಿ ಗೃಹಿಣಿ. ಆಕಾಶ್‌ ಅವರು ಸ್ಕೇಟಿಂಗ್‌ನಲ್ಲಿ ಸಾಧನೆ ಮಾಡಲು ತಾಯಿ ಕಾರಣ. ಅವರ ಪ್ರತಿಹಂತದಲ್ಲಿ ಜೊತೆಯಾಗಿ ನಿಂತು ಪ್ರೋತ್ಸಾಹ ನೀಡಿದ್ದು ಅವರ ತಾಯಿಯೇ. ಇನ್ನು, ಇವರಿಗೆ ಅಗತ್ಯವಿರುವ ಹಣವನ್ನು ಹೊಂದಿಸಿಕೊಟ್ಟಿದ್ದು ತಂದೆ ನಾಗಭೂಷಣ್‌.

‘ನನ್ನ ಈ ಸಾಧನೆಯಲ್ಲಿ ತಂದೆ–ತಾಯಿಯ ಸಹಕಾರ, ಬೆಂಬಲ ದೊಡ್ಡದು. ಅವರಿಲ್ಲದೆ ನಾನಿಲ್ಲ, ನನ್ನ ಈ ಸಾಧನೆಯಿಲ್ಲ’ ಎಂದು ನೆನೆಯುತ್ತಾರೆ ಆಕಾಶ್‌.

‘ಮೂರು ವರ್ಷವನಿದ್ದಾಗ ಸ್ಕೇಟಿಂಗ್‌ ಅನ್ನು ಹವ್ಯಾಸವಾಗಿ ಕಲಿಯಲು ಆರಂಭಿಸಿದೆ. ಅದು ಅಭ್ಯಾಸವಾಯಿತು. ವಿಶ್ವಾಮಿತ್ರ ರೋಲರ್ಸ್ ಸ್ಕೇಟಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆದೆ. ಕ್ಲಬ್ ಮಟ್ಟದಲ್ಲಿ ಸ್ಪರ್ಧೆಗಳನ್ನು ಎದುರಿಸಿದೆ. 10 ವರ್ಷ ಇದ್ದಾಗ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಶುರು ಮಾಡಿದೆ. ಆರಂಭದಲ್ಲಿ ಶ್ರೀಧರ್ ರಾವ್ ಕೋಚ್‌ ಆಗಿದ್ದರು. ಅವರು ನಿಧನರಾದ ಬಳಿಕ ಅವರ ತಮ್ಮ ಶ್ರೀಕಾಂತ್ ರಾವ್ ಕೋಚ್‌ ಆಗಿದ್ದಾರೆ’ ಎನ್ನುತ್ತಾರೆ ಆಕಾಶ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು