ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ಸಕಾಲದಲ್ಲಿ ನಡೆಸುವುದು ಕಷ್ಟ

ಕೊರೊನಾ ಕರಿನೆರಳು: ಮೊದಲ ಬಾರಿ ಮಾತು ಬದಲಿಸಿದ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ
Last Updated 18 ಮಾರ್ಚ್ 2020, 20:15 IST
ಅಕ್ಷರ ಗಾತ್ರ

ಲೂಸನ್‌: ಟೋಕಿಯೊ ಒಲಿಂಪಿಕ್‌ ಕ್ರೀಡೆಗಳನ್ನು ನಿಗದಿತ ಸಮಯದಲ್ಲೇ ನಡೆಸುವುದು ಕಷ್ಟವಾಗಬಹುದು ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಬುಧವಾರ ಮೊದಲ ಬಾರಿ ಒಪ್ಪಿಕೊಂಡಿದೆ. ಕೊರೊನಾ ಸೋಂಕು ಎಗ್ಗಿಲ್ಲದೇ ವ್ಯಾಪಿಸುತ್ತಿದ್ದು, ಪ್ರಮುಖ ಅಥ್ಲೀಟುಗಳು ಕಳವಳ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಈ ಮಾತನ್ನಾಡಿದೆ.

‘ಇದೊಂದು ಅಸಾಧಾರಣವಾದ ಸನ್ನಿವೇಶ. ಇದಕ್ಕೆ ಸೂಕ್ತವಾದ ಪರಿಹಾರ ಕಂಡುಕೊಳ್ಳುವುದು ಕಷ್ಟ’ ಎಂದು ಸಮಿತಿಯ ವಕ್ತಾರ ಹೇಳಿದ್ದಾರೆ. ಸೋಂಕು ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಸಂದರ್ಭದಲ್ಲಿ, ಪೂರ್ವನಿಗದಿಯಂತೆ ಜುಲೈ 24 ರಿಂದ ಕ್ರೀಡೆಗಳನ್ನು ನಡೆಸಿದರೆ ಆರೋಗ್ಯವನ್ನೇ ಪಣಕ್ಕಿಡಬೇಕಾಗುತ್ತದೆ ಎಂದು ವಿಶ್ವದ ಕೆಲವು ಪ್ರಮುಖ ಅಥ್ಲೀಟುಗಳು ಆತಂಕ ವ್ಯಕ್ತಪಡಿಸಿದ್ದರು.

ಸ್ಪರ್ಧೆಗಳ ಪಾವಿತ್ರ್ಯತೆ ಉಳಿಸುವ ಮತ್ತು ಅಥ್ಲೀಟುಗಳ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳಲು ಐಒಸಿ ಬದ್ಧವಾಗಿದೆ. ಆ ಮೂಲಕ ಅವರಿಗೆ ಆಗುವ ತೊಂದರೆ ತೀರಾ ಕಡಿಮೆಯಾಗಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.

‘ಸಕಾಲದಲ್ಲೇ ಕ್ರೀಡೆಗಳನ್ನು ನಡೆಸಲು ಬದ್ಧವಾಗಿದ್ದೇವೆ’ ಎಂದು ಐಒಸಿ ಹೇಳಿದ ಬೆನ್ನಲ್ಲೇ ಒಲಿಂಪಿಕ್ಸ್‌ ಪೋಲ್‌ವಾಲ್ಟ್‌ ಚಾಂಪಿಯನ್‌ ಕ್ಯಾತರಿನಾ ಸ್ಟೆಫಾಡಿನಿ ಮತ್ತು ಬ್ರಿಟನ್‌ನ ಹೆಪ್ಟಾಥ್ಲಾನ್‌ ತಾರೆ ಕ್ಯಾತರಿನಾ ಜಾನ್ಸನ್‌–ಥಾಮ್ಸನ್‌ ಇಬ್ಬರೂ ಕಳವಳ ವ್ಯಕ್ತಪಡಿಸಿದ್ದರು.

ಗ್ರೀಸ್‌ನ ಆಗ್ರಗಣ್ಯ ಅಥ್ಲೀಟ್‌ ಆಗಿರುವ ಸ್ಟೆಫಾನಿಡಿ, ಗ್ರೀಕ್‌ ಲೆಗ್‌ ಮುಗಿಯುವ ಮೊದಲು ಕ್ರೀಡಾಜ್ಯೋತಿಯನ್ನು ಜಪಾನ್‌ ಅಧಿಕಾರಿಗಳಿಗೆ ಹಸ್ತಾಂತರ ಮಾಡಬೇಕಿತ್ತು. ಆದರೆ ಕೋವಿಡ್‌ –19 ಪಿಡುಗಿನ ಕಾರಣ ಜ್ಯೋತಿ ಹಸ್ತಾಂತರ ಸಮಾರಂಭ ರದ್ದುಗೊಳಿಸಲಾಯಿತು.

ಜಾಗತಿಕವಾಗಿ, ಬುಧವಾರ ಬೆಳಗಿನವರೆಗೆ ಕೋವಿಡ್‌ ಸೋಂಕು ಪ್ರಕರಣಗಳ ಸಂಖ್ಯೆ 1,94,000 ಆಗಿದ್ದು, ಸಾವಿನ ಸಂಖ್ಯೆ 7,873 ಆಗಿದೆ. ಸುಮಾರು 150 ದೇಶಗಳು ಬಾಧಿತವಾಗಿವೆ.

‘ನಮ್ಮ ಆರೋಗ್ಯ, ಕುಟುಂಬದ ಆರೋಗ್ಯ ಮತ್ತು ಸಾರ್ವಜನಿಕದ ಆರೋಗ್ಯದ ಜೊತೆ ಐಒಸಿ ಚೆಲ್ಲಾಟವಾಡುತ್ತಿದೆ. ಇದಕ್ಕಾಗಿ ನಾವು ಪ್ರತಿದಿನ ತರಬೇತಿ ಪಡೆಯಬೇಕೇ’ ಎಂದು ಸ್ಟೆಫಾನಿಡಿ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನ 110 ಮೀ. ಹರ್ಡಲ್ಸ್‌ ಓಟದ ಕಂಚಿನ ಪದಕ ವಿಜೇತ, ಫ್ರಾನ್ಸ್‌ನ ಪಾಸ್ಕಲ್‌ ಮಾರ್ಟಿನೊಟ್‌ ಲಗಾರ್ಡ್‌ ಅವರು ‘ಮುಂದೂಡಿಕೆಯೊಂದೆ ನ್ಯಾಯೋಚಿತ ಪರಿಹಾರ’ ಎಂದಿದ್ದಾರೆ. ಅವರುರಿಯೊ ಒಲಿಂಪಿಕ್ಸ್‌ನಲ್ಲಿ (2016) ನಾಲ್ಕನೇ ಸ್ಥಾನ ಪಡೆದಿದ್ದರು.

‘ಅಥ್ಲೀಟುಗಳೆಲ್ಲರೂ ಒಂದೇ ರೀತಿಯ ತಯಾರಿ ನಡೆಸಲು ಆಗುವುದಿಲ್ಲ. ಕ್ರೀಡೆಗಳನ್ನು ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷ ನಡೆಸಬೇಕು’ ಎಂದು ಹೇಳಿದ್ದಾರೆ.

ಮುಂದೂಡಿಕೆ: ಮಂಗಳವಾರ ಐಒಸಿ ಹೇಳಿಕೆ ನೀಡುವ ಮೊದಲು ಯುರೊ 2020 ಫುಟ್‌ಬಾಲ್‌ ಟೂರ್ನಿಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿತ್ತು. ಯುರೋಪ್‌ನ ಇಟಲಿ, ಸ್ಪೇನ್‌ ಮೊದಲಾದ ಕೆಲವು ದೇಶಗಳಲ್ಲಿ ಸೋಂಕು
ವ್ಯಾಪಕವಾಗಿದೆ.

ಹಲವು ಕ್ರೀಡೆಗಳಲ್ಲಿ ಒಲಿಂಪಿಕ್‌ ಕ್ವಾಲಿಫೈಯಿಂಗ್‌ ಟೂರ್ನಿಗಳನ್ನು ಮುಂದೂಡಲಾಗಿದೆ. ಕೆಲವನ್ನು ರದ್ದು ಮಾಡಲಾಗಿದೆ. ಇದುವರೆಗೆ ಶೇ 57ರಷ್ಟು ಆಥ್ಲೀಟುಗಳು ಮಾತ್ರ ಅರ್ಹತೆ ಪಡೆದಿದ್ದಾರೆ.

ಅನುಮಾನ: ಸೋಂಕು ಶರವೇಗದಿಂದ ಹರಡುತ್ತಿರುವ ಕಾರಣ ಒಲಿಂಪಿಕ್ಸ್‌ ಕೂಡ ಸಕಾಲಕ್ಕೆ ನಡೆಯುವ ಬಗ್ಗೆ ಸಂದೇಹಗಳು ಮೂಡಿದ್ದವು. ಒಂದು ದಿನ ಹಿಂದೆಯಷ್ಟೇ, ಜಪಾನ್‌ ಒಲಿಂಪಿಕ್‌ ಸಮಿತಿ ಉಪಮುಖ್ಯಸ್ಥರು ‘ತಮಗೆ ಕೊರೊನಾ ಸೋಂಕು ಇದೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT