ಗುರುವಾರ , ಅಕ್ಟೋಬರ್ 29, 2020
19 °C

ಹಾಕಿ ಮಾಂತ್ರಿಕನ ನೆನಪಿನಲ್ಲಿ...

ನಾಗೇಶ್‌ ಶೆಣೈ ಪಿ. Updated:

ಅಕ್ಷರ ಗಾತ್ರ : | |

ಧ್ಯಾನ್‌ ಚಂದ್‌ ಹೆಸರು ಕ್ರೀಡಾಪ್ರಿಯರಿಗೆ ಹೆಚ್ಚಾಗಿ ನೆನಪಿಗೆ ಬರುವುದು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಂದರ್ಭದಲ್ಲಿ. ಆಗಸ್ಟ್‌ 29ರಂದು ಅವರ ಹುಟ್ಟುಹಬ್ಬವಾಗಿದ್ದು ಅಂದೇ ರಾಷ್ಟ್ರೀಯ ಕ್ರೀಡಾ ದಿನ. 2012ರಲ್ಲಿ ಮೊದಲ ಬಾರಿಗೆ ದೇಶದಲ್ಲಿ ಅಧಿಕೃತವಾಗಿ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು.

ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್‌ ಗಾಂಧಿ ಖೇಲ್‌ರತ್ನ ಜೊತೆಗೆ ಅರ್ಜುನ, ದ್ರೋಣಾಚಾರ್ಯ ಮತ್ತು ಧ್ಯಾನ್‌ ಚಂದ್‌ ಪ್ರಶಸ್ತಿಗಳನ್ನು ಅಂದು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಲಾಗುತ್ತದೆ.

ಅಲಹಾಬಾದ್‌ನಲ್ಲಿ ಜನಿಸಿದ ಧ್ಯಾನ್‌ ಚಂದ್‌ (1905–1979) ಅವರು ಈ ದೇಶದ ಮೊದಲ ಕ್ರೀಡಾ ಸೂಪರ್‌ಸ್ಟಾರ್‌. ಚೆಂಡಿನ ನಿಯಂತ್ರಣ, ಡ್ರಿಬ್ಲಿಂಗ್ ಕೌಶಲದಿಂದ ‘ಹಾಕಿ ಮಾಂತ್ರಿಕ’ ಎನಿಸಿದ್ದ  ಧ್ಯಾನ್‌ ಚಂದ್‌ (ಅವರ ನೈಜ ಹೆಸರು ಧ್ಯಾನ್‌ ಸಿಂಗ್‌) ಅವರ ಅವಧಿಯಲ್ಲಿ ಭಾರತದ ಹಾಕಿ ಸುವರ್ಣ ಯುಗ ಆರಂಭವಾಗಿತ್ತು.

ಭಾರತ ಹಾಕಿ ತಂಡ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದು 1928ರಲ್ಲಿ. ಮೊದಲ ಪ್ರಯತ್ನದಲ್ಲೇ ಚಿನ್ನ ಗೆದ್ದ ಆ ತಂಡದಲ್ಲಿ ಧ್ಯಾನ್‌ ಚಂದ್‌ ಕೂಡ ಗಮನಸೆಳೆದಿದ್ದರು. 1932ರ ಲಾಸ್‌ ಏಂಜಲಿಸ್‌ ಒಲಿಂಪಿಕ್ಸ್‌ ವೇಳೆಗೆ ಅವರು ಜಗತ್ಪ್ರಸಿದ್ಧರಾಗಿದ್ದರು. 1936ರ ಬರ್ಲಿನ್‌ ಒಲಿಂಪಿಕ್ಸ್‌ನಲ್ಲಿ ಭಾರತ ಸತತ ಮೂರನೇ ಬಾರಿ ಚಿನ್ನ ಕೊರಳಿಗೇರಿಸಿಕೊಂಡಾಗ ಅವರು ತಂಡದ ನಾಯಕರಾಗಿದ್ದರು. ಸುಮಾರು 22 ವರ್ಷಗಳ ಅಂತರ ರಾಷ್ಟ್ರೀಯ ಕ್ರೀಡಾಜೀವನದಲ್ಲಿ ಅವರು ಗಳಿಸಿದ್ದು 400ಕ್ಕೂ ಅಧಿಕ ಗೋಲುಗಳನ್ನು.

ಬರ್ಲಿನ್‌ ಒಲಿಂಪಿಕ್ಸ್‌ ಹಾಕಿ ಫೈನಲ್‌ನಲ್ಲಿ ಭಾರತ ತಂಡ 8–1 ಗೋಲುಗಳಿಂದ ಆತಿಥೇಯ ಜರ್ಮನಿಯ ಮೇಲೆ ಅಮೋಘವಾಗಿ ಜಯಗಳಿಸಿತ್ತು. ಹ್ಯಾಟ್ರಿಕ್‌ ಸಾಧಿಸಿದ್ದ ಧ್ಯಾನ್‌ ಚಂದ್‌ ಆಟವನ್ನು, ಕ್ರೀಡಾಂಗಣದಲ್ಲಿ ಸ್ವತಃ ಉಪಸ್ಥಿತರಿದ್ದ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್‌ ಮೆಚ್ಚಿದ್ದರು. ಅವರಿಗೆ ಜರ್ಮನಿಯ ಪೌರತ್ವ, ಸೇನೆಯಲ್ಲಿ ಉತ್ತಮ ಹುದ್ದೆ ನೀಡಲು ಮುಂದಾಗಿದ್ದರಂತೆ. ಅವೆಷ್ಟೊ ದೃಷ್ಟಾಂತಗಳು ಧ್ಯಾನ್‌ ಚಂದ್‌ ಅವರನ್ನು ಹಾಕಿ ದಂತಕತೆಯನ್ನಾಗಿಸಿದೆ.

ಅವರ ಹಾಕಿ ಆಟ ಅರಳಿದ್ದು, 1922ರಲ್ಲಿ ಸೇನೆಯನ್ನು ಸೇರಿದ ಬಳಿಕ. ಅವರು ರಾಷ್ಟ್ರೀಯ ತಂಡಕ್ಕೆ ಕೆಲ ವರ್ಷಗಳಲ್ಲೇ ಆಯ್ಕೆಯಾದರು.

ಧ್ಯಾನ್‌ ಚಂದ್‌  ಅವರ ಸೋದರ ರೂಪ್‌ ಸಿಂಗ್‌ ಕೂಡ ಭಾರತ ತಂಡದಲ್ಲಿ ಆಡಿದ್ದರು. ಪುತ್ರ ಅಶೋಕ್‌ ಕುಮಾರ್ ಅವರು 1970ರ ದಶಕದಲ್ಲಿ ದೇಶವನ್ನು ಒಲಿಂಪಿಕ್ಸ್‌, ವಿಶ್ವಕಪ್‌ಗಳಲ್ಲಿ ಪ್ರತಿನಿಧಿಸಿದ್ದರು.

‘ಭಾರತ ರತ್ನ’ದ ಒತ್ತಾಯ: ಧ್ಯಾನ್‌ ಚಂದ್‌ ಅವರಿಗೆ ದೇಶದ ಅತ್ಯುನ್ನತ ಗೌರವವಾದ ‘ಭಾರತ ರತ್ನ’ ನೀಡಬೇಕೆಂಬ ಒತ್ತಾಯ ಕೆಲ ವರ್ಷಗಳಿಂದ ಕೇಳಿಬರುತ್ತಿದೆ. 2014ರಲ್ಲಿ ಕ್ರಿಕೆಟ್‌ ತಾರೆ ಸಚಿನ್‌ ತೆಂಡೂಲ್ಕರ್‌ ಅವರು ಈ ಗೌರವಕ್ಕೆ ಪಾತ್ರರಾಗುವ ಮೊದಲು, ಕ್ರೀಡಾಪಟುಗಳಿಗೆ ಎಂದೂ ‘ಭಾರತ ರತ್ನ’ ಗೌರವ ಸಂದಿರಲಿಲ್ಲ. ಹಲವು ರಾಷ್ಟ್ರನಾಯಕರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗಿದೆ. ಸರ್ಕಾರ ಈ ದಿಸೆಯಲ್ಲಿ ಯೋಚಿಸಬೇಕಷ್ಟೇ. ಈ ಪ್ರಶಸ್ತಿ ಬರಲಿ, ಬರದಿರಲಿ ದೇಶದ ಕ್ರೀಡಾ ಇತಿಹಾಸದಲ್ಲಿ ಅವರ ಸ್ಥಾನ ಅದಕ್ಕಿಂತ ದೊಡ್ಡದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು