ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌ ಪಟು ಆಕಾಶ್‌ ಕುಮಾರ್: ಕಷ್ಟಗಳ ಸರಣಿಗೆ ಯಶಸ್ಸಿನ ‘ಪಂಚ್‌’

Last Updated 4 ನವೆಂಬರ್ 2021, 19:31 IST
ಅಕ್ಷರ ಗಾತ್ರ

ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುತ್ತಿರುವ ವೇಳೆಯೇ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ತಾಯಿಯ ಮರಣ... ದಶಕದ ಹಿಂದೆಯೇ ಕೊನೆಯುಸಿರೆಳೆದಿರುವ ತಂದೆ... ಕೊಲೆ ಪ್ರಕರಣದಲ್ಲಿ ಸಿಲುಕಿ ಜೈಲುಪಾಲಾಗಿರುವ ಸಹೋದರ...

ಇಂತಹ ಕಷ್ಟಗಳ ಸರಮಾಲೆಗಳಿಂದ ಜರ್ಜರಿತನಾಗಿದ್ದ ಯುವ ಬಾಕ್ಸಿಂಗ್‌ ಪಟು ಹರಿಯಾಣದ ಆಕಾಶ್‌ ಕುಮಾರ್ ಅವುಗಳಿಂದ ವಿಚಲಿತರಾಗಲಿಲ್ಲ. ಗುರಿಯೆಡೆಗೆ ಸಾಗುವ ಛಲ ಕಳೆದುಕೊಳ್ಳಲಿಲ್ಲ. ಸದ್ಯ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ತಲುಪುವ ಮೂಲಕ 21ರ ಹರೆಯದ ಈ ಹುಡುಗ ಯಶಸ್ಸಿನ ಮೆಟ್ಟಿಲೇರಿದ್ದರು.

ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆಯುತ್ತಿರುವ ವಿಶ್ವ ಪುರುಷರ ಚಾಂಪಿಯನ್‌ಷಿಪ್‌ನಲ್ಲಿ ಆಕಾಶ್, ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ 2016ರ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ, ವೆನಿಜುವೆಲಾದ ಯೋಲ್ ಫಿನೊಲ್ ರಿವಾಸ್‌ಗೆ ಸೋಲಿನ ಪಂಚ್ ನೀಡಿದ್ದರು. ಆತ್ಮವಿಶ್ವಾಸದ ಗಣಿಯಾಗಿರುವ ಆಕಾಶ್, ಬೌಟ್‌ನ ಮೂರೂ ಸುತ್ತುಗಳಲ್ಲಿ ನೀಡಿದ ಪಂಚ್‌ಗಳಿಗೆ ರಿವಾಸ್‌ ಕಂಗೆಟ್ಟಿದ್ದರು.

ಆಕಾಶ್‌, ನಾಲ್ಕರ ಘಟ್ಟ ತಲು‍ಪುವ ಮೂಲಕ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಲಿರುವ ದೇಶದ ಏಳನೇ ಬಾಕ್ಸಿಂಗ್ ಪಟು ಎಂಬ ಶ್ರೇಯ ಗಳಿಸಿಕೊಂಡಿದ್ದರು. ವಿಜೇಂದರ್ ಸಿಂಗ್‌ (2019, ಕಂಚು), ವಿಕಾಶ್ ಕ್ರಿಶನ್‌ (ಕಂಚು, 2011), ಶಿವ ಥಾಪಾ (ಕಂಚು, 2015), ಗೌರವ್‌ ಬಿಧುರಿ (ಕಂಚು, 2017), ಅಮಿತ್ ಪಂಘಲ್‌ (ಬೆಳ್ಳಿ, 2019) ಮತ್ತು ಮನೀಷ್‌ ಕೌಶಿಕ್‌ (ಕಂಚು, 2019) ಈ ಹಿಂದಿನ ಆವೃತ್ತಿಗಳಲ್ಲಿ ಪದಕಗಳನ್ನು ಮುಡಿಗೇರಿಸಿಕೊಂಡವರು.

ಕುಸ್ತಿಪಟುವಾಗಿದ್ದ ತಂದೆ, 2008ರಲ್ಲಿ ಆಕಾಶ್ ಅವರನ್ನು ಬಾಕ್ಸಿಂಗ್ ರಿಂಗ್‌ಗೆ ಕರೆತಂದರು. ತಂದೆಯ ನಿಧನದ ಬಳಿಕ ಅವರಿಗೆ ಚಿಕ್ಕಪ್ಪನ ಆಶ್ರಯ ಸಿಕ್ಕಿತು. ಹರಿಯಾಣದ ಭಿವಾನಿಯವರಾದ ಆಕಾಶ್‌, ತಮ್ಮದೇ ಜಿಲ್ಲೆಯ ವಿಜೇಂದರ್ ಸಿಂಗ್‌ 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದನ್ನು ಕಣ್ತುಂಬಿಕೊಂಡು ಅವರಿಂದ ಪ್ರೇರಣೆ ಪಡೆದವರು.

ಪುಣೆಯಲ್ಲಿರುವ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆದಿರುವ ಆಕಾಶ್‌, ಸೆಪ್ಟೆಂಬರ್‌ನಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ್ದರು. ಇದೇ ಸಂದರ್ಭದಲ್ಲಿ ಅವರ ತಾಯಿ ಕೊನೆಯುಸಿರೆಳೆದಿದ್ದರು. ಆದರೆ ಸ್ಪರ್ಧೆ ಮುಗಿಸಿಕೊಂಡು ಬರುವವರೆಗೆ ಈ ವಿಷಯ ಆಕಾಶ್‌ ಕಿವಿಗೆ ಬೀಳದಂತೆ ಅವರ ಸಂಬಂಧಿಗಳು ನೋಡಿಕೊಂಡಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆ ಟ್ರಯಲ್ಸ್ ಕೂಡ ಆಗಿದ್ದ ರಾಷ್ಟ್ರೀಯ ಕೂಟದಲ್ಲಿ ಆಕಾಶ್ ಚಾಂಪಿಯನ್ ಆಗಿದ್ದರು. ಇದು ಅವರಿಗೆ ಚೊಚ್ಚಲ ವಿಶ್ವ ಚಾಂಪಿಯನ್‌ಷಿಪ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT