ಬುಧವಾರ, ಮೇ 18, 2022
23 °C
ನೆದರ್ಲೆಂಡ್ಸ್ ತಂಡ ಎದುರಾಳಿ

ಎಫ್‌ಐಎಚ್ ಜೂನಿಯರ್ ಮಹಿಳೆಯರ ವಿಶ್ವಕಪ್ ಹಾಕಿ: ಭಾರತ ತಂಡಕ್ಕೆ ಚೊಚ್ಚಲ ಫೈನಲ್ ಕನಸು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪೊಚೆಫ್‌ಸ್ಟ್ರೂಮ್‌: ಚೊಚ್ಚಲ ಫೈನಲ್ ಕನಸಿನೊಂದಿಗೆ ಭಾರತ ತಂಡ ಜೂನಿಯರ್ ಮಹಿಳೆಯರ ವಿಶ್ವಕಪ್ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾನುವಾರ ಕಣಕ್ಕೆ ಇಳಿಯಲಿದೆ. ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತಕ್ಕೆ ಮೂರು ಬಾರಿಯ ಚಾಂಪಿಯನ್‌ ನೆದರ್ಲೆಂಡ್ಸ್‌ ಎದುರಾಳಿ.

ಕಂಚಿನ ಪದಕ ಗೆದ್ದಿರುವುದು ಭಾರತದ ಈ ವರೆಗಿನ ಗರಿಷ್ಠ ಸಾಧನೆಯಾಗಿದೆ. ಜರ್ಮನಿಯಲ್ಲಿ 2013ರಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಕಂಚಿನ ಪದಕ ಗಳಿಸಿತ್ತು. ಈ ಬಾರಿ ಇದುವರೆಗೆ ತಂಡ ಅಜೇಯವಾಗಿದೆ. ಆದ್ದರಿಂದ ನಿರೀಕ್ಷೆಗಳು ಗರಿಗೆದರಿವೆ.

ಸಲಿಮಾ ಟೆಟೆ ನಾಯಕತ್ವದ ತಂಡ ಈ ಬಾರಿ ಉತ್ತಮ ಲಯದಲ್ಲಿದ್ದು ಪ್ರತಿಯೊಬ್ಬರೂ ಸಾಮರ್ಥ್ಯವನ್ನು ಪರಿಪೂರ್ಣವಾಗಿ ಹೊರಗೆಡವುತ್ತಿದ್ದಾರೆ. ಫಾರ್ವರ್ಡ್ ವಿಭಾಗ ಪ್ರತಿಯೊಂದು ‍ಪಂದ್ಯದಲ್ಲೂ ಎದುರಾಳಿ ತಂಡಕ್ಕೆ ಸವಾಲಾಗಿ ನಿಂತಿದೆ. ನಾಲ್ಕು ಪಂದ್ಯಗಳಲ್ಲಿ ಒಟ್ಟು 14 ಗೋಲುಗಳು ದಾಖಲಾಗಿವೆ. ಈ ವಿಭಾಗಕ್ಕೆ ರಕ್ಷಣಾ ಆಟಗಾರ್ತಿಯರಿಂದ ಉತ್ತಮ ಸಹಕಾರ ಸಿಗುತ್ತಿದ್ದು 2 ಗೋಲು ಮಾತ್ರ ಬಿಟ್ಟುಕೊಟ್ಟಿದ್ದಾರೆ. ಮಿಡ್‌ಫೀಲ್ಡರ್‌ಗಳು ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿ ತಂಡದ ನಾಗಾಲೋಟದಲ್ಲಿ ಪಾಲುದಾರರಾಗಿದ್ದಾರೆ.

ಯುವ ಸ್ಟ್ರೈಕರ್ ಮುಮ್ತಾಜ್ ಖಾನ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಹ್ಯಾಟ್ರಿಕ್ ಒಳಗೊಂಡಂತೆ ಆರು ಗೋಲುಗಳು ಅವರ ಖಾತೆಯಲ್ಲಿ ಈಗಾಗಲೇ ಸೇರಿವೆ. ಲಾಲ್‌ರೆಮ್ಸಿಯಾಮಿ, ಲಾಲ್‌ರಿಂಡಿಕಿ ಮತ್ತು ಶರ್ಮಿಳಾ ದೇವಿ ಅವರೂ ಮಿಂಚುತ್ತಿದ್ದಾರೆ. ಸಲಿಮಾ ಟೆಟೆ ಸೇರಿದಂತೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಿರುವ ಮೂವರು ತಂಡದಲ್ಲಿರುವುದು ಯುವ ಆಟಗಾರ್ತಿಯರಿಗೆ ಹುರುಪು ತುಂಬಲು ಕಾರಣವಾಗಿದೆ. 

ಗೋಡೆಯಾಗಿರುವ ಬಿಚ್ಚುದೇವಿ 

ತಂಡದ ಯಶಸ್ಸಿನಲ್ಲಿ ಗೋಲ್‌ಕೀಪರ್ ಬಿಚ್ಚುದೇವಿ ಕರಿಬಂ ಅವರ ಪಾತ್ರ ಮಹತ್ವದ್ದು. ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಈಚೆಗೆ ಸೀನಿಯರ್ ತಂಡಕ್ಕೆ ಪದಾರ್ಪಣೆ ಮಾಡಿರುವ ಅವರು ವಿಶ್ವಕಪ್ ಟೂರ್ನಿಯಲ್ಲಿ ರೋಚಕ್‌ ‘ಸೇವ್‌’ಗಳ ಮೂಲಕ ಗಮನ ಸೆಳೆದಿದ್ದಾರೆ. 

ಈ ಎಲ್ಲ ಪೂರಕ ಅಂಶಗಳ ಬಲವಿದ್ದರೂ ನೆದರ್ಲೆಂಡ್ಸ್ ವಿರುದ್ಧ ಗೆಲ್ಲುವುದು ಸುಲಭದ ಮಾತಲ್ಲ. ಸ್ಯಾಂಟಿಯಾಗೊದಲ್ಲಿ ಕಳೆದ ಬಾರಿ ನಡೆದ ಟೂರ್ನಿಯಲ್ಲಿ ರನ್ನರ್ ಅಪ್ ಅಗಿರುವ ತಂಡ ಲೀಗ್ ಹಂತದ ಎಲ್ಲ ಮೂರು ಪಂದ್ಯಗಳನ್ನು ಗೆದ್ದುಕೊಂಡಿದ್ದು ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 5–0ಯಿಂದ ಮಣಿಸಿದೆ. ಭಾನುವಾರ ಆ ತಂಡ ಭಾರತಕ್ಕೆ ಯಾವ ರೀತಿ ಸವಾಲೊಡ್ಡುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಟೂರ್ನಿಯಲ್ಲಿ ಭಾರತದ ಸಾಧನೆ

ವೇಲ್ಸ್‌ ವಿರುದ್ಧ 5–1ರ ಜಯ

ಜರ್ಮನಿ ಎದುರು 2–1ರ ಜಯ

ಮಲೇಷ್ಯಾ ವಿರುದ್ಧ 4–0 ಗೆಲುವು

ಕೊರಿಯಾ ವಿರುದ್ಧ 3–0 ಗೆಲುವು

ನೆದರ್ಲೆಂಡ್ಸ್‌ ತಂಡದ ಸಾಧನೆ

ಅಮೆರಿಕ ವಿರುದ್ಧ 9–0 ಜಯ

ಕೆನಡಾ ವಿರುದ್ಧ 11–0 ಗೆಲುವು

ಜಿಂಬಾಬ್ವೆ ವಿರುದ್ಧ 18–0 ಜಯ

ದಕ್ಷಿಣ ಆಫ್ರಿಕಾ ವಿರುದ್ಧ 5–0 ಜಯ

ಸೆಮಿಫೈನಲ್ ವೇಳಾಪಟ್ಟಿ

ಭಾರತ–ನೆದರ್ಲೆಂಡ್ಸ್‌

ಇಂಗ್ಲೆಂಡ್‌–ಜರ್ಮನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು