ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಸರಣಿ: ಸೋಲು ತಪ್ಪಿಸಿದ ಹರ್ಮನ್‌ಪ್ರೀತ್‌

ಆಸ್ಟ್ರೇಲಿಯಾ ‘ಎ’ ಎದುರು ಡ್ರಾ ಮಾಡಿಕೊಂಡ ಭಾರತ
Last Updated 13 ಮೇ 2019, 16:18 IST
ಅಕ್ಷರ ಗಾತ್ರ

ಪರ್ತ್‌: ಡ್ರ್ಯಾಗ್‌ಫ್ಲಿಕ್ಕರ್‌ ಹರ್ಮನ್‌ಪ್ರೀತ್‌ ಸಿಂಗ್‌ ಅವರು ಸೋಮವಾರ ಭಾರತ ತಂಡಕ್ಕೆ ಆ‍ಪದ್ಬಾಂಧವರಾದರು.

ನಿರ್ಣಾಯಕ ಘಟ್ಟದಲ್ಲಿ ಗೋಲು ಗಳಿಸಿದ ಅವರು ಮನಪ್ರೀತ್‌ ಸಿಂಗ್‌ ಬಳಗವನ್ನು ಸೋಲಿನಿಂದ ಪಾರು ಮಾಡಿದರು.

ಪರ್ತ್‌ ಕ್ರೀಡಾಂಗಣದಲ್ಲಿ ನಡೆದ ಹಾಕಿ ಸರಣಿಯ ತನ್ನ ಮೂರನೇ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ‘ಎ’ ವಿರುದ್ಧ 1–1 ಗೋಲುಗಳಿಂದ ಡ್ರಾ ಮಾಡಿಕೊಂಡಿತು.

ಮನಪ್ರೀತ್‌ ಪಡೆಯ ಆಟಗಾರರು ಉತ್ತಮ ಆರಂಭ ಪಡೆಯಲು ವಿಫಲರಾದರು. ಮೊದಲ ಕ್ವಾರ್ಟರ್‌ನ ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಆಸ್ಟ್ರೇಲಿಯಾ ‘ಎ’ ತಂಡವು ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಪಡೆದಿತ್ತು. ಎದುರಾಳಿ ಆಟಗಾರರ ಪ್ರಯತ್ನಗಳಿಗೆ ಭಾರತದ ಗೋಲ್‌ಕೀಪರ್‌ ಅಡ್ಡಿಯಾದರು.

ಎರಡನೇ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾ ‘ಎ’ ಇನ್ನಷ್ಟು ಚುರುಕಾಗಿ ಆಡಿತು. 21ನೇ ನಿಮಿಷದಲ್ಲಿ ಆತಿಥೇಯರು ಖಾತೆ ತೆರೆಯುವಲ್ಲಿ ಯಶಸ್ವಿಯಾದರು. ಕಿರಣ್‌ ಅರುಣಾಸಲಾಮ್‌ ಫೀಲ್ಡ್‌ ಗೋಲು ಗಳಿಸಿ ಸಂಭ್ರಮಿಸಿದರು.

ದ್ವಿತೀಯಾರ್ಧದಲ್ಲಿ ಭಾರತ ತಂಡವು ಗುಣಮಟ್ಟದ ಸಾಮರ್ಥ್ಯ ತೋರಿತು. ಮನಪ್ರೀತ್‌ ಪಡೆಯು ಮೂರು ಪೆನಾಲ್ಟಿ ಕಾರ್ನರ್‌ ಸೃಷ್ಟಿಸಿಕೊಂಡಿತ್ತು. ಚಿನ್ನದಂತಹ ಈ ಅವಕಾಶಗಳನ್ನು ಪ್ರವಾಸಿ ಬಳಗದ ಆಟಗಾರರು ಕೈಚೆಲ್ಲಿದರು. ಇದರಿಂದ ತಂಡವು ಎದೆಗುಂದಲಿಲ್ಲ.

ಸಮಬಲದ ಗೋಲಿಗಾಗಿ ಹೋರಾಟ ಮುಂದುವರಿಸಿದ ಮನಪ್ರೀತ್ ಪಡೆಗೆ 56ನೇ ನಿಮಿಷದಲ್ಲಿ ಯಶಸ್ಸು ಲಭಿಸಿತು. ಡ್ರ್ಯಾಗ್‌ಫ್ಲಿಕ್‌ ಮೂಲಕ ಚೆಂಡನ್ನು ಗುರಿ ಮುಟ್ಟಿಸಿದ ಹರ್ಮನ್‌ಪ್ರೀತ್‌ ಸಿಂಗ್‌, ತಂಡವು ಖುಷಿಯ ಕಡಲಲ್ಲಿ ತೇಲುವಂತೆ ಮಾಡಿದರು.

ನಿರ್ಣಾಯಕ ಎನಿಸಿದ್ದ ಅಂತಿಮ ನಾಲ್ಕು ನಿಮಿಷಗಳಲ್ಲಿ ಉಭಯ ತಂಡಗಳು ರಕ್ಷಣೆಗೆ ಒತ್ತು ನೀಡಿ ಆಡಿದವು. ಹೀಗಾಗಿ ಯಾರಿಗೂ ಗೆಲುವಿನ ಗೋಲು ಗಳಿಸಲು ಆಗಲಿಲ್ಲ.

‘ಮೊದಲ ಕ್ವಾರ್ಟರ್‌ನಲ್ಲಿ ನಾವು ನಿರೀಕ್ಷಿತ ರೀತಿಯಲ್ಲಿ ಆಡಲಿಲ್ಲ. ಆರಂಭದಲ್ಲಿ ಎದುರಾಳಿಗಳು ಮೇಲುಗೈ ಸಾಧಿಸಿದರು. ನಂತರ ನಮ್ಮ ಆಟಗಾರರು ಲಯ ಕಂಡುಕೊಂಡರು. ಎರಡು, ಮೂರು ಮತ್ತು ನಾಲ್ಕನೇ ಕ್ವಾರ್ಟರ್‌ಗಳಲ್ಲಿ ನಮ್ಮವರು ಗೋಲು ಗಳಿಸುವ ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡಿದ್ದರು. ಇವುಗಳನ್ನು ಗುರಿ ಮುಟ್ಟಿಸಲು ಆಗಲಿಲ್ಲ’ ಎಂದು ಭಾರತ ತಂಡದ ಮುಖ್ಯ ಕೋಚ್‌ ಗ್ರಹಾಂ ರೀಡ್‌ ಹೇಳಿದ್ದಾರೆ.

‘ಬುಧವಾರ ನಾವು ಆಸ್ಟ್ರೇಲಿಯಾ ಸೀನಿಯರ್‌ ತಂಡವನ್ನು ಎದುರಿಸಬೇಕಿದೆ. ಈ ಪಂದ್ಯದಲ್ಲಿ ತಪ್ಪುಗಳು ಆಗದಂತೆ ಎಚ್ಚರವಹಿಸಬೇಕಿದೆ. ನಾಲ್ಕು ಕ್ವಾರ್ಟರ್‌ಗಳಲ್ಲೂ ಆಕ್ರಮಣಕಾರಿ ಆಟ ಆಡಿ ಎದುರಾಳಿಗಳ ಮೇಲೆ ಒತ್ತಡ ಹೇರಲು ಎಲ್ಲರೂ ಶ್ರಮಿಸಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT