ಗುರುವಾರ , ಜನವರಿ 20, 2022
15 °C
ಜೂನಿಯರ್ ವಿಶ್ವಕಪ್ ಹಾಕಿ: ಕ್ಲೆಮೆಂಟ್ ಹ್ಯಾಟ್ರಿಕ್

ಫ್ರಾನ್ಸ್‌ಗೆ ಕಂಚು; ಭಾರತಕ್ಕೆ ನಿರಾಶೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭುವನೇಶ್ವರ್ (ಪಿಟಿಐ): ಹೋದ ಸಲದ ಚಾಂಪಿಯನ್ ಭಾರತ ತಂಡಕ್ಕೆ ಈ ಬಾರಿ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಕಂಚಿನ ಪದಕವೂ ಒಲಿಯಲಿಲ್ಲ.

ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 1–3ರಿಂದ ಫ್ರಾನ್ಸ್‌ ಎದುರು ಸೋತಿತು. ಇದರಿಂದಾಗಿ ಆತಿಥೇಯ ಬಳಗವು ನಾಲ್ಕನೇ ಸ್ಥಾನ ಪಡೆಯಿತು.

ಗುಂಪು ಹಂತದ ಪಂದ್ಯದಲ್ಲಿಯೂ ಭಾರತ  ತಂಡವು ಫ್ರಾನ್ಸ್ ಎದುರು ಪರಾಭವಗೊಂಡಿತ್ತು.

ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಕಂಚಿನ ಪದಕದ ಸುತ್ತಿನ ಪಂದ್ಯದಲ್ಲಿ ನಾಯಕ ತಿಮೊತಿ ಕ್ಲೆಮೆಂಟ್ ಹ್ಯಾಟ್ರಿಕ್ ಸಾಧನೆಯಿಂದಾಗಿ ಫ್ರಾನ್ಸ್‌ ಜಯಗಳಿಸಿತು.

ಕ್ಲೆಮೆಂಟ್ ಮೂರು ಪೆನಾಲ್ಟಿ ಕಾರ್ನರ್‌ಗಳನ್ನು (26ನಿ, 34ನಿ ಮತ್ತು 47ನಿ) ಗೋಲಿನಲ್ಲಿ ಪರಿವರ್ತಿಸಿದರು. 42ನೇ ನಿಮಿಷದಲ್ಲಿ ಸುದೀಪ್ ಚಿರ್ಮಾಕೊ ಭಾರತಕ್ಕೆ ಒಂದು ಗೋಲಿನ ಕಾಣಿಕೆ ನೀಡಿದರು. ಇದರಿಂದಾಗಿ ಸೋಲಿನ ಅಂತರ ಕಡಿಮೆಯಾಯಿತು.

ಈ ಪಂದ್ಯದಲ್ಲಿ ಫ್ರಾನ್ಸ್‌  ಭಾರತ ತಂಡಕ್ಕಿಂತ ಉತ್ತಮವಾಗಿ ಆಡಿತು. ಫ್ರೆಂಚ್ ಆಟಗಾರರು ಚೆಂಡಿನ ಮೇಲೆ ಹೆಚ್ಚು ಹೊತ್ತು ನಿಯಂತ್ರಣ ಸಾಧಿಸಿದ್ದರು. 14 ಪೆನಾಲ್ಟಿ ಕಾರ್ನರ್‌ಗಳನ್ನು ಪಡೆಯುವಲ್ಲಿ ಕ್ಲೆಮೆಂಟ್ ಬಳಗ ಯಶಸ್ವಿಯಾಯಿತು. ಇದು ಆತಿಥೇಯ ಬಳಗದ ಮೇಲೆ ಒತ್ತಡ ಹೆಚ್ಚಿಸಿತು. ಭಾರತಕ್ಕೆ ಮೂರು ಪೆನಾಲ್ಟಿ ಕಾರ್ನರ್ ಸಿಕ್ಕವು.

ಪಂದ್ಯದ ಮೊದಲ ನಿಮಿಷದಲ್ಲಿಯೇ ಭಾರತಕ್ಕೆ ಪೆನಾಲ್ಟಿ ಅವಕಾಶ ಸಿಕ್ಕಿತ್ತು. ಆದರೆ ಅದನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ತಂಡವು ಎಡವಿತು. 12ನೇ ನಿಮಿಷದಲ್ಲಿ ಅರೈಜಿತ್ ಸಿಂಗ್ ಹುಂಡಾಲ ಚುರುಕಿನ ಆಟದ ಮೂಲಕ ಚೆಂಡನ್ನು ಗೋಲುಪೆಟ್ಟಿಗೆಯ ಸಮೀಪ ತಂದಿದ್ದರು. ಆದರೆ, ಅದನ್ನು ಗುರಿ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಮೊದಲ ಕ್ವಾರ್ಟರ್‌ನಲ್ಲಿ ಭಾರತ ತಂಡದ ರಕ್ಷಣಾ ಪಡೆಯು ಎದುರಾಳಿಗಳ ಮೂರು ಪೆನಾಲ್ಟಿ ಕಾರ್ನರ್‌ಗಳು ಗೋಲುಗಳಲ್ಲಿ ಪರಿವರ್ತನೆಯಾಗದಂತೆ ತಡೆಯುವಲ್ಲಿ ಯಶಸ್ವಿಯಾಯಿತು.

ಆದರೆ ಎರಡನೇ ಕ್ವಾರ್ಟರ್‌ನಲ್ಲಿ ಕ್ಲೆಮೆಂಟ್ ಯಶಸ್ವಿಯಾದರು. ನಂತರದ ಆಟದಲ್ಲಿಯೂ ಅವರ ಆಟವೇ ಪಾರಮ್ಯ ಸಾಧಿಸಿತು. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು