ಶನಿವಾರ, ಸೆಪ್ಟೆಂಬರ್ 25, 2021
29 °C

Tokyo Olympics ಮಹಿಳಾ ಹಾಕಿ: ಕೊನೆಗೂ ಗೆದ್ದ ಭಾರತ, ಕ್ವಾರ್ಟರ್ ಆಸೆ ಜೀವಂತ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಟೋಕಿಯೊ: ಹಾಕಿ ಅಂಗಳದಲ್ಲಿ ಭಾರತದ ಪುರುಷರ ಹಾಗೂ ಮಹಿಳೆಯರ ತಂಡಗಳು ಗೆಲುವಿನ ಸಿಹಿ ಸವಿದಿವೆ.

ಈಗಾಗಲೇ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿರುವ ಮನ್‌ಪ್ರೀತ್‌ ಸಿಂಗ್‌ ಸಾರಥ್ಯದ ಪುರುಷರ ತಂಡ ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ 5–3 ಗೋಲುಗಳಿಂದ ಆತಿಥೇಯ ಜಪಾನ್‌ ತಂಡವನ್ನು ಮಣಿಸಿತು. ಇದರೊಂದಿಗೆ ‘ಎ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಿತು.

ಹಿಂದಿನ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾವನ್ನು ಸೋಲಿಸಿ ವಿಶ್ವಾಸದ ಉತ್ತುಂಗದಲ್ಲಿದ್ದ ಭಾರತ, 13ನೇ ನಿಮಿಷದಲ್ಲೇ ಖಾತೆ ತೆರೆಯಿತು. ಪೆನಾಲ್ಟಿ ಕಾರ್ನರ್‌ನಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಕೈಚಳಕ ತೋರಿದರು.  

ಇದನ್ನೂ ಓದಿ: 

ಎರಡನೇ ಕ್ವಾರ್ಟರ್‌ನಲ್ಲಿ ಸ್ಟ್ರೈಕರ್‌ ಗುರ್ಜಂತ್‌ ಸಿಂಗ್‌ ಮತ್ತು ಸಿಮ್ರನ್‌ಜೀತ್‌ ಆಕ್ರಮಣಕಾರಿ ಆಟದ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿದರು. ಇದರಲ್ಲಿ ಈ ಜೋಡಿ ಯಶಸ್ವಿಯೂ ಆಯಿತು. 17ನೇ ನಿಮಿಷದಲ್ಲಿ ಸಿಮ್ರನ್‌ಜೀತ್‌ ಬಾರಿಸಿದ ಚೆಂಡನ್ನು ಜಪಾನ್‌ನ ಗೋಲ್‌ಕೀಪರ್‌ ಯಾಮಸಕಿ ತಡೆದರು. ಮತ್ತೆ ತಮ್ಮತ್ತ ಬಂದ ಚೆಂಡನ್ನು ಸಿಮ್ರನ್‌ಜೀತ್‌, ಗುರ್ಜಂತ್‌ ಅವರತ್ತ ವರ್ಗಾಯಿಸಿದರು. ಅದನ್ನು ಗುರ್ಜಂತ್‌ ಗುರಿ ಮುಟ್ಟಿಸಿ ಸಂಭ್ರಮಿಸಿದರು. ಇದರ ಬೆನ್ನಲ್ಲೇ (19) ಜಪಾನ್‌ ತಂಡದ ಕೆಂಟಾ ಟನಕಾ ಗೋಲು ಗಳಿಸಿ ಹಿನ್ನಡೆ ತಗ್ಗಿಸಿದರು. ದ್ವಿತೀಯಾರ್ಧದ ಶುರುವಿನಲ್ಲೇ (33) ಆತಿಥೇಯ ತಂಡದ ಆಟಗಾರ ಕೊಟಾ ವತನಬೆ ಮಿಂಚಿದರು. ಹೀಗಾಗಿ ಪಂದ್ಯ 2–2ರಿಂದ ಸಮಬಲಗೊಂಡಿತ್ತು. ಈ ಖುಷಿ ಜಪಾನ್‌ ಪಾಳಯದಲ್ಲಿ ಹೆಚ್ಚು ಕಾಲ ಉಳಿಯಲು ಭಾರತದ ಶಂಷೇರ್‌ ಸಿಂಗ್‌ ಅವಕಾಶ ನೀಡಲಿಲ್ಲ. 34ನೇ ನಿಮಿಷದಲ್ಲಿ ಗೋಲು ಬಾರಿಸಿದ ಅವರು ಭಾರತಕ್ಕೆ ಮತ್ತೆ ಮುನ್ನಡೆ ದೊರಕಿಸಿಕೊಟ್ಟರು. ನೀಲಕಂಠ ಅವರ ಪಾಸ್‌ನಲ್ಲಿ ಶಂಷೇರ್‌, ಸೊಗಸಾದ ರೀತಿಯಲ್ಲಿ ಚೆಂಡನ್ನು ಗುರಿ ಸೇರಿಸಿದರು. 

ಮೂರನೇ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್‌ ಲಭಿಸಿತ್ತು. ಈ ಅವಕಾಶವನ್ನು ಹರ್ಮನ್‌ಪ್ರೀತ್‌ ಕೈಚೆಲ್ಲಿದರು. 51ನೇ ನಿಮಿಷದಲ್ಲಿ ನೀಲಕಂಠ ಶರ್ಮಾ ಹಾಗೂ 56ನೇ ನಿಮಿಷದಲ್ಲಿ ಗುರ್ಜಂತ್‌ ಮೋಡಿ ಮಾಡಿ ತಂಡದ ಗೆಲುವನ್ನು ಖಾತರಿಪಡಿಸಿದರು. 59ನೇ ನಿಮಿಷದಲ್ಲಿ ಜಪಾನ್‌ನ ಕಜುಮಾ ಮುರಾತ ಭಾರತದ ರಕ್ಷಣಾಕೋಟೆ ಭೇದಿಸಿ ಗೋಲು ಬಾರಿಸಿದರು. ಇದರಿಂದ ಆತಿಥೇಯರಿಗೆ ಯಾವ ಲಾಭವೂ ಆಗಲಿಲ್ಲ.

ನವನೀತ್‌ ಕೌರ್‌ ಮಿಂಚು

ಟೋಕಿಯೊ: ಗೆಲ್ಲಲೇಬೇಕಾದ ಅನಿವಾರ್ಯತೆ ಯೊಂದಿಗೆ ಕಣಕ್ಕಿಳಿದಿದ್ದ ಮಹಿಳಾ ತಂಡ ‘ಎ’ ಗುಂಪಿನ ಹೋರಾಟದಲ್ಲಿ 1–0 ಗೋಲಿನಿಂದ ಐರ್ಲೆಂಡ್‌ ತಂಡವನ್ನು ಸೋಲಿಸಿತು.

57ನೇ ನಿಮಿಷದಲ್ಲಿ ಮಿಂಚಿದ ನವನೀತ್‌, ಭಾರತದ ಪಾಳಯದಲ್ಲಿ ಸಂಭ್ರಮ ಮೇಳೈಸು ವಂತೆ ಮಾಡಿದರು.

ಕ್ವಾರ್ಟರ್‌ ಲೆಕ್ಕಾಚಾರ

ಭಾರತ ತಂಡ ಎಂಟರ ಘಟ್ಟಕ್ಕೆ ಲಗ್ಗೆ ಇಡಬೇಕಾದರೆ ತನ್ನ ಪಾಲಿನ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಪರಾ ಭವಗೊಳಿಸಬೇಕು. ಜೊತೆಗೆ ಐರ್ಲೆಂಡ್‌ ತಂಡದ ಸೋಲಿಗಾಗಿ ಪ್ರಾರ್ಥಿಸಬೇಕು!

‘ಎ’ ಗುಂಪಿನಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಗಳಿಸಲಿವೆ. ನೆದರ್ಲೆಂಡ್ಸ್‌, ಜರ್ಮನಿ ಮತ್ತು ಬ್ರಿಟನ್‌ ಈಗಾಗಲೇ ಎಂಟರ ಘಟ್ಟ ಪ್ರವೇಶಿಸಿವೆ.

ಇನ್ನೊಂದು ಸ್ಥಾನಕ್ಕಾಗಿ ಐರ್ಲೆಂಡ್‌ ಮತ್ತು ಭಾರತದ ನಡುವೆ ಪೈಪೋಟಿ ಏರ್ಪಟ್ಟಿದೆ. ಐರ್ಲೆಂಡ್‌  ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಭಾರತ ನಂತರದ ಸ್ಥಾನ ಹೊಂದಿದೆ. ತನ್ನ ಪಾಲಿನ ಕೊನೆಯ ಪಂದ್ಯದಲ್ಲಿ ಐರ್ಲೆಂಡ್‌, ಬ್ರಿಟನ್‌ ಎದುರು ಸೆಣಸಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು