ಬುಧವಾರ, ಫೆಬ್ರವರಿ 1, 2023
26 °C

PV Web Exclusive | ಸಾಧನೆಯ ಬೆನ್ನೇರಿ...ಉದ್ಯಾನ ನಗರಿಯಲಿ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಾಡಿದ ಸಾಧನೆಗೆ ಸಂಭ್ರಮಪಟ್ಟು ಆಗಿದೆ. ಈಗ ಹೊಸ ಅಧ್ಯಾಯ ಆರಂಭಿಸುವ ಕಾಲ. ಮುಂದಿನ ವರ್ಷ ಮಹತ್ವದ ಟೂರ್ನಿಗಳು ನಡೆಯಲಿದ್ದು ಅದಕ್ಕೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಜ್ಜಾಗಬೇಕಾಗಿದೆ...’ 

ಭಾರತ ಹಾಕಿ ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್ ಅವರ ಮಾತು ಇದು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕು ದಶಕಗಳ ನಂತರ ಪದಕ ಗೆದ್ದ ಹಾಕಿ ತಂಡ ಸಂಭ್ರಮದ ಅಲೆಯಲ್ಲಿ ತೇಲಿತ್ತು. ಇದೀಗ ಸಾಧನೆಯ ಕನಸು ಹೊತ್ತು ಹೊಸ ಭರವಸೆಯೊಂದಿಗೆ ಮತ್ತೊಂದು ಅಧ್ಯಾಯಕ್ಕೆ ಸಜ್ಜಾಗಿದೆ. ಪದಕ ಗೆಲ್ಲಲಾಗದೇ ಇದ್ದರೂ ಅಮೋಘ ಸಾಧನೆಯ ಮೂಲಕ ಹಾಕಿ ಪ್ರಿಯರ ಮನಗೆದ್ದಿರುವ ಮಹಿಳಾ ತಂಡ ಕೂಡ ನಿರೀಕ್ಷೆಯೊಂದಿಗೆ ‘ಕಣಕ್ಕೆ’ ಇಳಿದಿದೆ. ಈ ಎರಡೂ ತಂಡಗಳು ಉದ್ಯಾನ ನಗರಿಯಲ್ಲಿವೆ. ಮಹಿಳಾ ತಂಡದ ಅಭ್ಯಾಸ ಈಗಾಗಲೇ ಆರಂಭಗೊಂಡಿದ್ದು ಪುರುಷರ ತಂಡದ ಶಿಬಿರ ಅಕ್ಟೋಬರ್ ನಾಲ್ಕರಿಂದ ನಡೆಯಲಿದೆ. 

ಭಾರತ ಹಾಕಿಗೂ ಬೆಂಗಳೂರಿಗೆ ಬಹುಕಾಲದ ನಂಟು ಇದೆ. ಪುರುಷರ ಮತ್ತು ಮಹಿಳಾ ತಂಡಗಳ ಎಲ್ಲ ಸಾಧನೆಗಳಿಗೂ ವೇದಿಕೆ ಸಜ್ಜಾಗುವುದು ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ಕೇಂದ್ರದಲ್ಲಿ. ಟೋಕಿಯೊ ಒಲಿಂಪಿಕ್ಸ್‌ಗೂ ತರಬೇತಿ ನಡೆದದ್ದು ಇಲ್ಲಿಯೇ. ಒಲಿಂಪಿಕ್ಸ್‌ಗೆ ತಂಡಗಳು ಹೊರಟದ್ದು ಕೂಡ ಇಲ್ಲಿಂದಲೇ. ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಿದ ನಂತರ ಇದೇ ಮೊದಲ ಬಾರಿ ಆಟಗಾರರು ಉದ್ಯಾನ ನಗರಿಯ ಅಂಗಣಕ್ಕೆ ಇಳಿದಿದ್ದಾರೆ.

ಓದಿ: 

ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿದ್ದಾಗ ಎರಡೂ ತಂಡಗಳಿಗೆ ಬಹಳಷ್ಟು ಸವಾಲುಗಳು ಕಾಡಿವೆ. ಕೋವಿಡ್‌ ಆತಂಕವನ್ನು ಜನರ ಮನಸ್ಸಿನಿಂದ ಹೊಡೆದೋಡಿಸಲು ಪ್ರಯತ್ನಿಸಿದ ಸರ್ಕಾರದ ಕಾರ್ಯಕ್ರಮಗಳಿಗೆ ಬೆಂಬಲ ನೀಡಿದ್ದ ತಂಡಗಳಲ್ಲೇ ವೈರಸ್‌ ಹಾವಳಿ ಆರಂಭವಾಗಿತ್ತು. ಇದು, ಭಾರಿ ಆತಂಕ ಸೃಷ್ಟಿಸಿತ್ತು. ಅಡುಗೆ ಮನೆಯ ಮೂಲಕ ಬಂದ ಸೋಂಕನ್ನು ತಡೆಗಟ್ಟುವಲ್ಲಿ ಕೇಂದ್ರದ ಅಧಿಕಾರಿಗಳು ಯಶಸ್ವಿಯಾದರು. ಆದರೆ ನಂತರವೂ ಸೋಂಕು ಕಾಡಿತ್ತು. ರಜೆಯ ಮೇಲೆ ಆಟಗಾರರನ್ನು ಅವರವರ ಊರಿಗೆ ಕಳುಹಿಸಲಾಯಿತು. ವಾಪಸ್ ಬಂದ ಮೇಲೆಯೂ ಆತಂಕ ಇದ್ದೇ ಇತ್ತು. 

ಇದೆಲ್ಲದರ ನಡುವೆ ಕಠಿಣ ಅಭ್ಯಾಸ ಮುಂದುವರಿಯಿತು. ಕೋವಿಡ್‌ ಸೋಂಕು ಕಡಿಮೆ ಇದ್ದ ರಾಷ್ಟ್ರಗಳಲ್ಲಿ ಅಭ್ಯಾಸ ಮತ್ತು ತರಬೇತಿ ನಿರಾತಂಕವಾಗಿ ನಡೆಯುವಾಗ ಭಾರತ ತಂಡಗಳಿಗೆ ಕೆಲವು ದಿನಗಳು ನಷ್ಟವಾದವು. ಆದರೂ ತಂಡಗಳ ಸದಸ್ಯರು ಮಾನಸಿಕ ಸ್ಥೈರ್ಯ ಕಳೆದುಕೊಳ್ಳಲಿಲ್ಲ. ಛಲದಿಂದ ಸಾಧಿಸಿದ ಬಲ ಒಲಿಂಪಿಕ್ಸ್‌ನಲ್ಲಿ ಪ್ರತಿಫಲಿಸಿತು. ಪುರುಷರ ತಂಡ ಕಂಚಿನ ಪದಕ ಗೆದ್ದುಕೊಂಡರೆ ಮಹಿಳೆಯರು ಮೊದಲ ಬಾರಿ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು. ಪದಕ ಗೆಲ್ಲುವ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡರು. 

ಅನುಭವಿಗಳ ಅನುಪಸ್ಥಿತಿ; ಹೊಸಬರಿಗೆ ನಿರೀಕ್ಷೆ

ಒಲಿಂಪಿಕ್ಸ್‌ ನಂತರ ಹಾಕಿ ಪುರುಷರ ತಂಡದಲ್ಲಿ ಸಂಚಲನವೂ ಆಗಿದೆ. ಅನುಭವಿ ಆಟಗಾರರಾದ ರೂಪಿಂದರ್ ಪಾಲ್ ಸಿಂಗ್ ಮತ್ತು ಬೀರೇಂದ್ರ ಲಾಕ್ರ ದಿಢೀರ್ ಆಗಿ ನಿವೃತ್ತಿ ಘೋಷಿಸಿದ್ದಾರೆ. ರೂಪಿಂದರ್ ಪಾಲ್ ಅವರ ಅನುಪಸ್ಥಿತಿಯಿಂದ ತಂಡ ಪ್ರಬಲ ಡ್ರ್ಯಾಗ್‌ ಫ್ಲಿಕ್ಕರ್ ಒಬ್ಬರನ್ನು ಕಳೆದುಕೊಂಡಿದೆ. ಬೀರೇಂದ್ರ ಇಲ್ಲದೆ ಡಿಫೆನ್ಸ್ ವಿಭಾಗಕ್ಕೂ ಪೆಟ್ಟಾಗಿದೆ. ಈ ನಡುವೆ ಫಾರ್ವರ್ಡ್ ಆಟಗಾರ ಕರ್ನಾಟಕದ ಎಸ್‌.ವಿ.ಸುನಿಲ್ ‘ವಿರಾಮ’ ಬಯಸಿದ್ದಾರೆ. ‘ಫೈವ್ ಎ ಸೈಡ್‌ನತ್ತ ಹೆಚ್ಚು ಗಮನ ಕೊಡುತ್ತಿದ್ದೇನೆ. ರಾಷ್ಟ್ರೀಯ ತಂಡದ ಸೇವೆಗೆ ಸದಾ ಸಿದ್ಧ’ ಎಂದು ಅವರು ಹೇಳಿದ್ದರೂ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾಗದ ಕಾರಣ ಅವರ ಭವಿಷ್ಯದ ಬಗ್ಗೆ ಸ್ಪಷ್ಟತೆ ಇಲ್ಲ.

ಓದಿ: 

ಪಿ.ಆರ್.ಶ್ರೀಜೇಶ್‌, ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್ ಮುಂತಾದ ಅನುಭವಿಗಳ ಜೊತೆ ಯುವ ಆಟಗಾರರನ್ನು ಶಿಬಿರಕ್ಕೆ ಕರೆಸಿಕೊಳ್ಳಲಾಗಿದೆ. 30 ಮಂದಿಯಲ್ಲಿ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿ ‘ಹೊಸ’ ತಂಡ ಕಟ್ಟುವುದು ಹಾಕಿ ಇಂಡಿಯಾದ ಉದ್ದೇಶ. 

ಮಹಿಳಾ ತಂಡವನ್ನೂ ಬಲಿಷ್ಠಗೊಳಿಸಲು ಆಡಳಿತ ನಿರ್ಧರಿಸಿದ್ದು 25 ಮಂದಿಯ ತಂಡದಲ್ಲಿ ಗಗನದೀಪ್‌ ಕೌರ್‌, ಮರಿಯಾನಾ ಕುಜುರ್‌, ಸುಮನ್ ದೇವಿ ತೌಡಮ್‌ ಮತ್ತು ಚೌಧರಿ ಅವರನ್ನು ಜೂನಿಯರ್ ಹಂತದಿಂದ ಬಡ್ತಿ ನೀಡಿ ಕರೆಸಿಕೊಳ್ಳಲಾಗಿದೆ. ಅನುಭವಿಗಳಾದ ಲಿಲಿಮಾ ಮಿನ್ಜ್‌, ರಶ್ಮಿತಾ ಮಿನ್ಜ್‌, ಜ್ಯೋತಿ, ರಾಜ್ವಿಂದರ್ ಕೌರ್‌ ಮತ್ತು ಮನ್‌ಪ್ರೀತ್ ಕೌರ್‌ ಅವರೂ ಶಿಬಿರದಲ್ಲಿದ್ದಾರೆ. 

ಒಲಿಂಪಿಕ್ಸ್ ನಂತರ ಪುರುಷರ ತಂಡಕ್ಕೆ ಮೊದಲ ಸವಾಲು ಇರುವುದು ಡಿಸೆಂಬರ್‌ನಲ್ಲಿ. ಢಾಕಾದಲ್ಲಿ ಡಿಸೆಂಬರ್ 14ರಿಂದ ನಡೆಯಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ತಂಡ ಆಡಲಿದೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಎಫ್‌ಐಎಚ್ ಪ್ರೊ ಲೀಗ್‌ಗೂ ತಂಡ ಸಜ್ಜಾಗಬೇಕಿದೆ. ಬೆಂಗಳೂರಿನಲ್ಲಿ ಲಭಿಸುವ ತರಬೇತಿ ತಂಡಗಳಿಗೆ ಯಾವ ರೀತಿಯಲ್ಲಿ ಪ್ರಯೋಜನಕಾರಿಯಾಗಲಿದೆ ಎಂಬುದು ಕುತೂಹಲದ ವಿಷಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು