ಶುಕ್ರವಾರ, ಏಪ್ರಿಲ್ 23, 2021
31 °C
ಕಾಮನ್‌ವೆಲ್ತ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌

ಟೇಬಲ್ ಟೆನಿಸ್: ಭಾರತ ಪ್ರಾಬಲ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಟಕ್‌ (ಪಿಟಿಐ): ಆತಿಥೇಯ ಭಾರತ 21ನೇ ಕಾಮನ್‌ವೆಲ್ತ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ ನಲ್ಲಿ ಪ್ರಾಬಲ್ಯ ಮೆರೆದಿದೆ.  ಒಟ್ಟು ಏಳು ಚಿನ್ನ, ಐದು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡು ಬೀಗಿತು.

ಸೋಮವಾರ ಹರ್ಮಿತ್‌ ದೇಸಾಯಿ ಮತ್ತು ಐಹಿಕಾ ಮುಖರ್ಜಿ ಅವರು ಕ್ರಮವಾಗಿ ಪುರುಷ ಮತ್ತು ಮಹಿಳಾ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಫೈನಲ್‌ ಪಂದ್ಯದಲ್ಲಿ ಹರ್ಮಿತ್‌ ಅವರು ಭಾರತದವರೇ ಆದ ಜಿ.ಸತ್ಯನ್‌ ಅವರಿಗೆ 4–3 ಅಂತರದ ಸೋಲುಣಿಸಿದರು. ಏಳು ಗೇಮ್‌ಗಳ ಸ್ಪರ್ಧೆಯಲ್ಲಿ ಕಠಿಣ ಹೋರಾಟ ಕಂಡುಬಂತು. ಆರಂಭದ ಹಿನ್ನಡೆಯನ್ನು ಮೀರಿದ ಹರ್ಮಿತ್‌ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ದಿನದ ಆರಂಭದಲ್ಲಿ ನಡೆದ ಪುರುಷರ ಡಬಲ್ಸ್‌ ಫೈನಲ್‌ ನಲ್ಲಿ ಅಂಥೋಣಿ ಅಮಲ್‌ರಾಜ್‌ ಹಾಗೂ ಮಾನವ್‌ ಠಕ್ಕರ್‌ ಜೋಡಿ  ಗೆಲುವು ಪಡೆಯಿತು. ಅಂತಿಮ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಸತ್ಯನ್‌ ಹಾಗೂ ಶರತ್‌ ಕಮಲ್‌ ವಿರುದ್ಧ 3–1 ಅಂತರದಿಂದ ವಿಜಯಿಯಾಯಿತು. 

ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಐಹಿಕಾ ಚಾಂಪಿಯನ್‌ಷಿಪ್‌ನಲ್ಲಿ ಚೊಚ್ಚಲ ಚಿನ್ನ ಜಯಿಸಿದರು. ಈ ಹಿಂದೆ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದ ಮಧುರಿಕಾ ಪಾಟ್ಕರ್‌ ಅವರನ್ನು 4–0ಯಿಂದ ಐಹಿಕಾ ಸೋಲಿಸಿದರು.

ಪೂಜಾ ಸಹಸ್ರಬುಧೆ ಹಾಗೂ ಕೃತ್ವಿಕಾ ಸಿನ್ಹಾ ರಾಯ್‌ ಜೋಡಿಯು ಮಹಿಳಾ ಡಬಲ್ಸ್ ಫೈನಲ್‌ ಪಂದ್ಯದಲ್ಲಿ ಶ್ರೀಜಾ ಅಕುಲಾ ಹಾಗೂ ಮೌಸುಮಿ ಪಾಲ್‌ ಅವರನ್ನು 3–1ರಿಂದ ಮಣಿಸಿ ಪ್ರಶಸ್ತಿ ಎತ್ತಿಹಿಡಿಯಿತು.

ಎಲ್ಲ ವಿಭಾಗದ ಫೈನಲ್‌ ಪಂದ್ಯಗಳಲ್ಲಿ ಭಾರತದವರೇ ಕಾಣಿಸಿಕೊಂಡಿದ್ದು ವಿಶೇಷ. ಚಾಂಪಿಯನ್‌ಷಿಪ್‌ನಲ್ಲಿ ಇಂಗ್ಲೆಂಡ್‌ (ಎರಡು ಬೆಳ್ಳಿ, ಮೂರು ಕಂಚು) ಎರಡನೇ ಸ್ಥಾನ ಮತ್ತು ಸಿಂಗಪುರ (ಆರು ಕಂಚು) ಮೂರನೇ ಸ್ಥಾನ ಪಡೆದವು. ಮಲೇಷ್ಯಾ ಹಾಗೂ ನೈಜೀರಿಯಾ ತಲಾ ಒಂದು ಕಂಚಿನ ಪದಕ ಗೆದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು