ಶುಕ್ರವಾರ, ಜುಲೈ 30, 2021
24 °C

ಒಲಿಂಪಿಕ್ಸ್: ವಿದೇಶದ ಭಾರತೀಯ ಅಥ್ಲೀಟ್‌ಗಳಿಗೂ ಕಠಿಣ ನಿಯಮಗಳು ಅನ್ವಯವೇ? ಐಒಎ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ಕ್ರೀಡಾಪಟುಗಳು ಜಪಾನ್‌ಗೆ ಪ್ರವೇಶಿಸಲು ವಿಧಿಸಿರುವ ಕಟ್ಟುನಿಟ್ಟಿನ ನಿಯಮಗಳು, ಪ್ರಸ್ತುತ ವಿದೇಶದಲ್ಲಿ ತರಬೇತಿ ಪಡೆಯುತ್ತಿರುವ ಮತ್ತು ನೇರವಾಗಿ ಟೋಕಿಯೊಗೆ ತಲುಪಲಿರುವವರಿಗೂ ಅನ್ವಯವಾಗುತ್ತವೆಯೇ ಎಂದು ಸ್ಪಷ್ಟಪಡಿಸಲು ಭಾರತ ಒಲಿಂಪಿಕ್ ಸಂಸ್ಥೆಯು (ಐಒಎ) ಸೋಮವಾರ ಒಲಿಂಪಿಕ್ಸ್ ಆಯೋಜಕರನ್ನು ಕೋರಿದೆ.

ಶೂಟಿಂಗ್‌, ಕುಸ್ತಿಪಟುಗಳು ಮತ್ತು ಬಾಕ್ಸರ್‌ಗಳು ಸೇರಿದಂತೆ ಹಲವು ಅಥ್ಲೀಟ್‌ಗಳು ಪ್ರಸ್ತುತ ವಿದೇಶಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಪೈಕಿ ಬಾಕ್ಸರ್‌ಗಳು ಟೋಕಿಯೊಗೆ ತೆರಳುವ ಮೊದಲು ಜುಲೈ 10ರಂದು ಭಾರತಕ್ಕೆ ಮರಳಲಿದ್ದಾರೆ.

ಭಾರತ ಒಳಗೊಂಡಂತೆ ಇತ್ತೀಚೆಗೆ ಕೋವಿಡ್‌–19ರ ವಿವಿಧ ರೂಪಾಂತರಿತ ವೈರಸ್‌ಗಳು ಕಂಡುಬಂದ 11 ದೇಶಗಳಿಂದ ತೆರಳುವ ಕ್ರೀಡಾಪಟುಗಳು ಮತ್ತು ಅಧಿಕಾರಿಗಳಿಗೆ ಸಂಬಂಧಿಸಿ ಕಠಿಣ ನಿಯಮಾವಳಿಗಳನ್ನು ಜಪಾನ್ ಸರ್ಕಾರ ಸಿದ್ಧಪಡಿಸಿದೆ.

ಟೋಕಿಯೊಗೆ ತೆರಳುವ ಮುನ್ನ ಒಂದು ವಾರ ಪ್ರತಿದಿನ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದೂ ಟೋಕಿಯೊಗೆ ತಲುಪಿದ ನಂತರ ಮೂರು ದಿನ ಬೇರೆ ದೇಶದ ಯಾರೊಂದಿಗೂ ಮಾತನಾಡಬಾರದು ಎಂದು ಭಾರತದ ಪ್ರತಿನಿಧಿಗಳಿಗೆ ಜಪಾನ್ ಸರ್ಕಾರ ಸೂಚಿಸಿತ್ತು. ಇದಕ್ಕೆ ಐಒಎ ಅಸಮಾಧಾನ ವ್ಯಕ್ತಪಡಿಸಿತ್ತು.

‘ಪ್ರಸ್ತುತ, ನಮ್ಮ ಹಲವು ಕ್ರೀಡಾಪಟುಗಳು ವಿದೇಶದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ಸ್ಥಳಗಳಿಂದ ನೇರವಾಗಿ ಟೋಕಿಯೊಗೆ ಪ್ರಯಾಣಿಸಲಿದ್ದಾರೆ. ಅವರು ತರಬೇತಿ ಪಡೆಯುತ್ತಿರುವ ದೇಶಗಳು, ಈ ಹೊಸ ಹೆಚ್ಚುವರಿ ಷರತ್ತುಗಳನ್ನು ಹೊಂದಿರುವ 11 ದೇಶಗಳ ಪಟ್ಟಿಯಲ್ಲಿಲ್ಲ‘ ಎಂದು ಟೋಕಿಯೊ ಒಲಿಂಪಿಕ್ ಕ್ರೀಡಾಕೂಟ ಆಯೋಜನಾ ಸಮಿತಿಗೆ (ಟೊಕೊಗ್) ಬರೆದ ಪತ್ರದಲ್ಲಿ ಐಒಎ ಹೇಳಿದೆ. 

‘ವಿದೇಶಗಳಿಂದ ಬರುವ ನಮ್ಮ ಈ ಕ್ರೀಡಾಪಟುಗಳು ಹೊಸ ಷರತ್ತುಗಳನ್ನು ಪಾಲಿಸುವ ಅಗತ್ಯವಿಲ್ಲ ಎಂಬುದನ್ನು ಖಚಿತಪಡಿಸಬೇಕು‘ ಎಂದು ಐಒಎ ಅಧ್ಯಕ್ಷ ನರಿಂದರ್ ಬಾತ್ರಾ ಮತ್ತು ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು