ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: ಚೆಸ್‌ ಲೋಕದ ನವತಾರೆ ಯಾನ್‌ ಶ್ರಿಷ್ಟೋಫ್‌ ದೂದಾ

Last Updated 10 ಆಗಸ್ಟ್ 2021, 9:07 IST
ಅಕ್ಷರ ಗಾತ್ರ

ಯಾನ್‌ ಶ್ರಿಷ್ಟೋಫ್‌ ದೂದಾ (Jan-Krzysztof Duda ಹೆಸರಿನ ಪೋಲಿಶ್‌ ಉಚ್ಚಾರ ಇದು) ಅವರ ಹೆಸರು ಚೆಸ್‌ಲೋಕದ ಹೊರಗೆ ಅಪರಿಚಿತ. ಚೆಸ್‌ ಲೋಕದಲ್ಲೂ ಇತ್ತೀಚಿನವರೆಗೂ ಪರಿಚಿತರಾಗಿರಲಿಲ್ಲ. ಪೋಲೆಂಡ್‌ ದೇಶದ ಈ ಗ್ರ್ಯಾಂಡ್‌ ಮಾಸ್ಟರ್‌ ಆಟಗಾರ ವಿಶ್ವ ಕಪ್‌ ವಿಜೇತ. ಟೋಕಿಯೊದಲ್ಲಿ ಒಲಿಂಪಿಕ್‌ ಕ್ರೀಡೆಗಳ ವೇಳೆಯಲ್ಲೇ ನಡೆದ ವಿಶ್ವ ಕಪ್‌ಗೆ ಹೆಚ್ಚು ಪ್ರಚಾರ ದೊರೆಯಲಿಲ್ಲ. ಆದರೆ ಟೂರ್ನಿಯಲ್ಲಿ ಬೆರಗು ಮೂಡಿಸುವ ಸಾಧನೆಯಿಂದ 23 ವರ್ಷದ ದೂದಾ ತವರಿನಲ್ಲಿ ಕ್ರೀಡಾಪ್ರಿಯರ ಕಣ್ಮಣಿಯಾಗಿದ್ದಾರೆ.

ವಿಶ್ವಕಪ್‌ನಲ್ಲಿ ಘಟಾನುಘಟಿ ಆಟಗಾರರಿದ್ದರೂ ಒಂದೂ ಪಂದ್ಯ ಸೋಲದೇ ಗೆಲುವಿನ ಕಿರೀಟ ಧರಿಸಿರುವುದು ದೂದಾ ಹೆಚ್ಚುಗಾರಿಕೆ. ಪೋಲೆಂಡ್‌ ಆಟಗಾರನೊಬ್ಬನ ಶ್ರೇಷ್ಠ ಸಾಧನೆ ಇದು. ನಾಕೌಟ್‌ ಆರಂಭದ ಕೆಲವು ಸುತ್ತುಗಳನ್ನು ಸುಲಭವಾಗಿ ಗೆದ್ದುಕೊಂಡ ದೂದಾ, ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿದಿತ್‌ ಸಂತೋಷ್‌ ಗುಜರಾತಿ (ರೇಟಿಂಗ್‌: 2726), ಸೆಮಿಫೈನಲ್‌ನಲ್ಲಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ (2847) ಮತ್ತು ಫೈನಲ್‌ನಲ್ಲಿ ರಷ್ಯಾದ ಅನುಭವಿ ಸೆರ್ಗಿ ಕರ್ಯಾಕಿನ್‌ (2757) ಅವರಂಥ ಆಟಗಾರರನ್ನು ಸೋಲಿಗೆ ಕೆಡವಿದ್ದು ಅನಿರೀಕ್ಷಿತ.

ರಷ್ಯಾದ ಸೋಚಿಯಲ್ಲಿ ನಡೆದ (ಜುಲೈ 12– ಆಗಸ್ಟ್‌ 6) ಈ ಟೂರ್ನಿಯಲ್ಲಿ ಕರ್ಯಾಕಿನ್‌ ವಿರುದ್ಧ ಫೈನಲ್‌ನ ಎರಡನೇ ಗೇಮ್‌ ಗೆದ್ದ ದೂದಾ 1.5–0.5 ಅಂತರದಿಂದ ವಿಜೇತರಾದರು. ಜೊತೆಗೆ $ 88,000 (ಸುಮಾರು ₹ 65 ಲಕ್ಷ) ನಗದು ಬಹುಮಾನ ಜೇಬಿಗಿಳಿಸಿಕೊಂಡರು. ಕೋವಿಡ್‌ ಸಾಂಕ್ರಾಮಿಕದ ನಂತರ ‘ಮುಖಾಮುಖಿ’ಯಾಗಿ ನಡೆದ ಮೊದಲ ಟೂರ್ನಿ ಇದಾಗಿತ್ತು.

ದೂದಾ (2738) ಮತ್ತು ರನ್ನರ್‌ ಅಪ್‌ ಕರ್ಯಾಕಿನ್‌, 2022ರ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಆಡುವ ಅರ್ಹತೆಯನ್ನೂ ಸಂಪಾದಿಸಿಕೊಂಡರು. ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ವಿಜೇತನಾಗುವ ಆಟಗಾರ, ವಿಶ್ವ ಚೆಸ್‌ ಚಾಂಪಿಯನ್‌ಗೆ ಸವಾಲು ಹಾಕುವ ಹಕ್ಕು ಹೊಂದುತ್ತಾರೆ.

ವಿಶ್ವ ಕಪ್‌ ಚೆಸ್‌ ಟೂರ್ನಿಯಲ್ಲಿ ಆಟಗಾರ ಎರಡು ಕ್ಲಾಸಿಕಲ್‌ ಮಾದರಿ ಗೇಮ್‌ಗಳನ್ನು ಆಡಬೇಕಾಗುತ್ತದೆ. ನಂತರ ಸ್ಕೋರ್‌ ಸಮನಾದಲ್ಲಿ ಟೈಬ್ರೇಕ್‌ ಗೇಮ್‌ಗಳನ್ನು ಆಡಬೇಕಾಗುತ್ತದೆ. ಫೈನಲ್‌ನ ಮೊದಲ ಗೇಮ್‌ ಡ್ರಾ ಆದರೆ, ಎರಡನೇ ಗೇಮ್‌ 30 ನಡೆ ಕಾಣುವಷ್ಟರಲ್ಲಿ ಕರ್ಯಾಕಿನ್‌ ಆಟ ಬಿಟ್ಟುಕೊಡಬೇಕಾಯಿತು. ಆ ವೇಳೆ ಹೆಚ್ಚುವರಿ ಕಾಲಾಳು ಜೊತೆಗೆ ‘ನೈಟ್‌’ (ಕುದುರೆ) ದಾಳಿಯಿಂದ ಕರ್ಯಾಕಿನ್‌ ತನ್ನ ಪಡೆ ರಕ್ಷಿಸಿಕೊಳ್ಳುವುದು ಕಷ್ಟಕರವಾಗಿತ್ತು.

ಯಶಸ್ಸಿನ ‘ನಡೆ’ಗಳು:

ವಿಶ್ವಕಪ್‌ ಗೆಲ್ಲುವ ಮೊದಲೇ ಈ ಪ್ರತಿಭಾನ್ವಿತ ಕೆಲವು ಟೂರ್ನಿಗಳಲ್ಲಿ ಅತ್ಯುತ್ತಮ ಫಲಿತಾಂಶಗಳಿಂದ ಗಮನ ಸೆಳೆದಿದ್ದರು.

2020ರ ಅಕ್ಟೋಬರ್‌ನಲ್ಲಿ, ಕ್ಲಾಸಿಕಲ್‌ ಮಾದರಿಯಲ್ಲಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರ 125 ಪಂದ್ಯಗಳ ಅಜೇಯ ಓಟಕ್ಕೆ ಅಂತ್ಯ ಕಾಣಿಸಿದವರೇ ಕ್ಲಾಸಿಕಲ್‌ ಮಾದರಿಯಲ್ಲಿ 2018ರಿಂದ 2020ರ ಅಕ್ಟೋಬರ್‌ವರೆಗೆ 125 ಪಂದ್ಯಗಳಲ್ಲಿ ಈ ದೂದಾ. ನಾರ್ವೆಯ ಸ್ಟಾವೆಂಜರ್‌ನಲ್ಲಿ ನಡೆದ ಅಲ್ಟಿಬಾಕ್ಸ್‌ ಟೂರ್ನಿಯ ಐದನೇ ಸುತ್ತಿನಲ್ಲಿ ಕಾರ್ಲ್‌ಸನ್‌ ವಿರುದ್ಧ ಅವರ ತವರು ನೆಲದಲ್ಲೇ ದೂದಾ ಆ ಫಲಿತಾಂಶ ನೀಡಿದ್ದರು.

2020ರ ಮೇ ತಿಂಗಳಲ್ಲಿ ನಡೆದ ರ‍್ಯಾಪಿಡ್‌ (ಲಿಂಡೊರೆಸ್‌ ಅಬ್ಬಿ ಚೆಸ್‌ ಚಾಲೆಂಜ್‌) ಟೂರ್ನಿಯಲ್ಲೂ (ಏಳನೇ ಸುತ್ತು) ದೂದಾ, ನಾರ್ವೆಯ ಆಟಗಾರನಿಗೆ ಸೋಲುಣಿಸಿದ್ದರು. 2020ರ ಜನವರಿಯಲ್ಲಿ ಅವರು ಮೊದಲ ಬಾರಿ 2700ರ ರೇಟಿಂಗ್‌ ದಾಟಿದ ಆಟಗಾರರ ಪಟ್ಟಿಗೆ ಸೇರಿದರು. ಪ್ರಸ್ತುತ ಬ್ಲಿಟ್ಜ್‌ ಮಾದರಿಯಲ್ಲಿ ಅವರ ರೇಟಿಂಗ್‌ 2792. ರ‍್ಯಾಪಿಡ್‌ನಲ್ಲಿ ಅವರ ಇಎಲ್‌ಒ ರೇಟಿಂಗ್‌ 2775. ಬ್ಲಿಟ್ಜ್‌ ಮಾದರಿಯಲ್ಲಿ ಒಮ್ಮೆ 2,800ರ ರೇಟಿಂಗ್‌ ದಾಟಿದ್ದೂ ಇದೆ.

2018ರ ಡಿಸೆಂಬರ್‌ನಲ್ಲಿ ನಡೆದ ವಿಶ್ಲ ಬ್ಲಿಟ್ಜ್‌ ಚಾಂಪಿಯನ್‌ಷಿಪ್‌ನಲ್ಲಿ ಕಾರ್ಲ್‌ಸನ್‌ ವಿಶ್ವ ಚಾಂಪಿಯನ್‌ ಆದರೆ, ದೂದಾ ರನ್ನರ್‌ ಆಪ್‌ ಆಗಿದ್ದರು. ಅವರಿಬ್ಬರ ಮಧ್ಯೆ ಇದ್ದುದು ಅರ್ಧ ಪಾಯಿಂಟ್‌ಗಳ ಅಂತರವಷ್ಟೇ!

2019ರ ಹ್ಯಾಂಬರ್ಗ್ ಗ್ರ್ಯಾನ್‌ಪ್ರಿ ಫಿಡೆ ಚೆಸ್‌ ಟೂರ್ನಿಯ ಫೈನಲ್‌ ತಲುಪಿದ್ದ ದೂದಾ, ಅಲ್ಲಿ ರಷ್ಯಾದ ಗ್ರ್ಯಾಂಡ್‌ಮಾಸ್ಟರ್‌ ಅಲೆಕ್ಸಾಂಡರ್‌ ಗ್ರಿಶ್ಚುಕ್‌ (2778) ಎದುರು ಸೋಲನುಭವಿಸಿದ್ದರು.

ವೇಗದ ಪ್ರಗತಿ:

ದೂದಾ ಅವರು ಜನಿಸಿದ್ದು ಪೋಲೆಂಡ್‌ನ ಕ್ರಾಕೊ ನಗರದಲ್ಲಿ (1998ರ ಏಪ್ರಿಲ್‌ 26). ಐದನೇ ವಯಸ್ಸಿನಲ್ಲಿ ಚೆಸ್‌ ಕಲಿತ ಅವರನ್ನು ತಾಯಿ, ಸ್ಥಳೀಯ ಕ್ಲಬ್‌ ಒಂದಕ್ಕೆ ಸೇರಿಸಿದ್ದರು. ಅವರ ಸಾಮರ್ಥ್ಯ ಬೆಳಕಿಗೆ ಬರಲು ಹೆಚ್ಚು ಸಮಯ ಹಿಡಿಯಲಿಲ್ಲ. 2006ರಲ್ಲಿ ಅವರಿಗೆ ತರಬೇತುದಾರನಾದ ಲೆಸೆಕ್‌ ಆಸ್ಟ್ರೋವ್‌ಸ್ಕಿ ಅವರ ಆಟ ಮೊನಚಾಗಲು ನೆರವಾದರು. 2014 ರಿಂದ ಕಾಮಿಡ್‌ ಮಿಲ್ಟನ್‌ ಅವರಿಗೆ ಟ್ರೈನರ್‌ ಆಗಿದ್ದಾರೆ.

2008ರಲ್ಲಿ ವಿಶ್ವ ಯೂತ್‌ (ಅಂಡರ್‌ 10) ಚಾಂಪಿಯನ್‌ ಆಗಿದ್ದು ಅವರ ಮೊದಲ ಪ್ರಮುಖ ಯಶಸ್ಸು. ನಾಲ್ಕು ವರ್ಷಗಳ ನಂತರ ಯುರೋಪಿನ 14 ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್‌. 2013ರಲ್ಲಿ ಗ್ರ್ಯಾಂಡ್‌ಮಾಸ್ಟರ್ ಬಿರುದು. ಆಗ ಅವರ ವಯಸ್ಸು 14 ವರ್ಷ 21 ದಿನ! ಮರು ವರ್ಷ, ಯುರೋಪಿಯನ್‌ ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ಗಳೆರಡರಲ್ಲೂ ಅವರು ‘ರಾಜ’ನಾಗಿ ಮೆರೆದರು. ಜೊತೆಗೇ ಕಾಲಮಿತಿ ಟೂರ್ನಿಗಳಲ್ಲಿ ಸಾಮರ್ಥ್ಯ ಏನೆಂದು ತೋರಿಸಿಕೊಟ್ಟರು.

2015ರ ಸೆಪ್ಟೆಂಬರ್‌ನಲ್ಲಿ ದೂದಾ ವಿಶ್ವ ಜೂನಿಯರ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದರು.

ಜಾರ್ಜಿಯಾದ ಬಟುಮಿಯಲ್ಲಿ ನಡೆದ 2018ರ ಚೆಸ್‌ ಒಲಿಂಪಿಯಾಡ್‌ನಲ್ಲಿ (ನಾಲ್ಕು ವರ್ಷಗಳಿಗೊಮ್ಮೆ ದೇಶಗಳ ನಡುವೆ ನಡೆಯುವ ಪ್ರತಿಷ್ಠಿತ ಚೆಸ್‌ ಟೂರ್ನಿ) ಮತ್ತೊಮ್ಮೆ ಮಿಂಚಿದ್ದರು ದೂದಾ. ಅನುಭವಿ ವ್ಯಾಸಿಲಿ ಇವಾನ್‌ಚುಕ್‌ ಅವರನ್ನು ಸೋಲಿಸಿದ್ದ ಪೋಲೆಂಡ್‌ನ ಆಟಗಾರ, ನಂತರ ಗ್ರ್ಯಾಂಡ್‌ಮಾಸ್ಟರ್‌ಗಳಾದ ಲೆವೊನ್‌ ಅರೋನಿಯನ್‌, ವಿಶ್ವನಾಥನ್‌ ಆನಂದ್‌, ಶಖ್ರಿಯಾರ್‌ ಮೆಮೆದ್ಯೊರೊವ್‌, ಸೆರ್ಗಿ ಕರ್ಯಾಕಿನ್‌ ಮತ್ತು ಫ್ಯಾಬಿಯಾನೊ ಕರುವಾನ ಅವರ ಎದುರಿನ ಆಟಗಳನ್ನು ಡ್ರಾ ಮಾಡಿಕೊಂಡಾಗ ಚೆಸ್‌ ಜಗತ್ತು ಕಣ್ಣರಳಿಸಿ ನೋಡಿತು.

1953ರಲ್ಲಿ ಪೋಲೆಂಡ್‌ನ ಮಿಗೆಲ್‌ ನೈಡಾರ್ಫ್ ಅವರು ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆದಿದ್ದರು. ಸುದೀರ್ಘ ಅವಧಿಯ ನಂತರ ದೂದಾ ಈ ಸಾಧನೆಗೆ ಪಾತ್ರರಾದ ಮೊದಲ ಪೋಲಿಶ್‌ ಆಟಗಾರ ಎನಿಸಿದ್ದಾರೆ.

ಚೆಸ್‌ ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಇಂಥ ವೇಳೆಯೇ ದೂದಾ ಸಾಧನೆ ಚೆಸ್‌ಗೆ ಆ ದೇಶದಲ್ಲಿ ಇನ್ನಷ್ಟು ನೆಲೆ ಕಲ್ಪಿಸುವುದರಲ್ಲಿ ಅನುಮಾನವೇ ಇಲ್ಲ. ‘ನಾನು ಹಿಂದೆಂದೂ ಇಷ್ಟೊಂದು ಖುಷಿಯ ಅನುಭವ ಪಡೆದಿರಲ್ಲಿಲ್ಲ. ಚೆಸ್‌ ಈಗ ಪೋಲೆಂಡ್‌ನಲ್ಲಿ ಜನಪ್ರಿಯವಾಗುತ್ತಿದೆ. ಇಂಥ ಸಂದರ್ಭದಲ್ಲಿ ಈ ಯಶಸ್ಸು ದಕ್ಕಿದ್ದು ನನಗೆ ಅತೀವ ಸಂತಸ ತಂದಿದೆ’ ಎಂದಿದ್ದಾರೆ ದೂದಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT