ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌: ರೂಪಾಂತರಿತ ವೈರಸ್‌ ಹರಡುವ ಸಾಧ್ಯತೆ ಎಂದು ವೈದ್ಯರ ಅಭಿಪ್ರಾಯ

ರೂಪಾಂತರಿತ ವೈರಸ್‌ ಹರಡುವ ಸಾಧ್ಯತೆ; ಮತ್ತೊಂದು ದುರಂತಕ್ಕೆ ನಾಂದಿ
Last Updated 27 ಮೇ 2021, 12:33 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್ ಆಯೋಜಿಸಿದರೂ ಪ್ರೇಕ್ಷಕರಿಗೆ ಅವಕಾಶ ನೀಡದೇ ಇರುವುದು ಒಳ್ಳೆಯದು ಎಂದು ವೈದ್ಯಕೀಯ ತಂಡವೊಂದು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಒಲಿಂಪಿಕ್ಸ್‌ ದೊಡ್ಡ ವಿಕೋಪಕ್ಕೆ ಕಾರಣವಾಗಲಿದ್ದು ರದ್ದು ಮಾಡುವುದೇ ಅತ್ಯಂತ ಸೂಕ್ತ ಎಂದು ವೈದ್ಯರ ಸಂಘ ಸಲಹೆ ನೀಡಿದೆ.

ಸೋಂಕು ಏರುಗತಿಯಲ್ಲೇ ಸಾಗುತ್ತಿರುವುದರಿಂದ ಜಪಾನ್‌ನ ಅನೇಕ ಪ್ರದೇಶಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಒಲಿಂಪಿಕ್ಸ್‌ ನಡೆಸಕೂಡದು ಎಂದು ಸಾರ್ವಜನಿಕರು ಒತ್ತಾಯಿಸುತ್ತಲೇ ಇದ್ದಾರೆ. ಒಲಿಂಪಿಕ್‌ ಕೂಟದಿಂದಾಗಿ ಜಪಾನ್‌ನಲ್ಲಿ ರೂಪಾಂತರಿತ ವೈರಸ್‌ಗಳು ಹರಡುವ ಸಾಧ್ಯತೆ ಇದ್ದು ನಾಲ್ಕನೇ ಅಲೆಗೆ ತತ್ತರಿಸಿರುವ ದೇಶ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಲಿದೆ ಎಂದು ವೈದ್ಯರು ಹೇಳಿದ್ದಾರೆ.

ವಿದೇಶದ ಪ್ರೇಕ್ಷಕರಿಗೆ ಒಲಿಂಪಿಕ್ಸ್‌ಗೆ ಅವಕಾಶವಿಲ್ಲ ಎಂದು ಆಯೋಜಕರು ಈಗಾಗಲೇ ಹೇಳಿದ್ದಾರೆ. ಸ್ಥಳೀಯ ಪ್ರೇಕ್ಷಕರಿಗೆ ಅವಕಾಶ ನೀಡಬೇಕೇ ಬೇಡವೇ ಎಂಬುದರ ಬಗ್ಗೆ ಜೂನ್‌ನಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ.

‘ಪ್ರಪಂಚದ ಬೇರೆ ಬೇರೆ ಕಡೆಯಿಂದ ಕ್ರೀಡಾಪಟುಗಳು, ಸಿಬ್ಬಂದಿ, ಪತ್ರಕರ್ತರು ಮತ್ತು ಅಧಿಕಾರಿಗಳು ಬರುವುದರಿಂದ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಲಿದೆ. ಸುನಾಮಿ ಮತ್ತು 2011ರ ಭೂಕಂಪದಿಂದ ಚೇತರಿಸಿಕೊಂಡಿರುವ ಜಪಾನ್‌ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುವುದಕ್ಕಾಗಿ ಇಲ್ಲಿ ಇಲಿಂಪಿಕ್ಸ್ ಆಯೋಜಿಸಲು ಉದ್ದೇಶಿಸಲಾಗಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಕ್ರೀಡಾಕೂಟ ನಡೆದರೆ ಮತ್ತೊಂದು ವಿಕೋಪಕ್ಕೆ ಎಡೆಮಾಡಿಕೊಟ್ಟಂತಾಗಲಿದೆ’ ಎಂದು ಜಪಾನ್ ವೈದ್ಯ ಸಂಘದ ಅಧ್ಯಕ್ಷ ನವೊತೊ ಉಯೆಮಾ ಅಭಿಪ್ರಾಯಪಟ್ಟಿದ್ದಾರೆ.

‘ಇಲ್ಲಿ ಕಾಣಿಸಿಕೊಳ್ಳಲಿರುವ ರೂಪಾಂತರಿತ ವೈರಸ್‌ಗೆ ಟೋಕಿಯೊ ಒಲಿಂಪಿಕ್ಸ್ ವೈರಸ್ ಎಂದೇ ಹೆಸರಾಗಬಹುದೇನೋ. ಹಾಗೇನಾದರೂ ಆದರೆ ಮುಂದಿನ 100 ವರ್ಷಗಳ ವರೆಗೆ ಜನರ ಮನಸ್ಸಿನಲ್ಲಿ ಕೆಟ್ಟ ನೆನಪಾಗಿ ಅದು ಉಳಿಯಲಿದೆ’ ಎಂದು ಉಯೆಮಾ ಹೇಳಿದ್ದಾರೆ.

ಎಲ್ಲ ಕ್ರೀಡಾಪಟುಗಳಿಗೂ ಲಸಿಕೆ: ಐಒಎ

ಟೋಕಿಯೊ ಒಲಿಂಪಿಕ್ಸ್‌ಗೆ ತೆರಳುವ ಎಲ್ಲರಿಗೂ ಲಸಿಕೆಯ ಎರಡನೇ ಡೋಸ್ ಹಾಕಲಾಗುವುದು ಎಂದು ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಗುರುವಾರ ತಿಳಿಸಿದೆ.

ಒಲಿಂಪಿಕ್ಸ್‌ಗೆ ತೆರಳುವ ಕ್ರೀಡಾಪಟುಗಳಿಗೆ ಲಸಿಕೆ ಹಾಕಿರುವ ಬಗ್ಗೆ ದೇಶದ ಎಲ್ಲ ಕ್ರೀಡಾ ಫೆಡರೇಷನ್‌ಗಳಿಂದ ಐಒಎ ಬುಧವಾರ ಮಾಹಿತಿ ಕೇಳಿತ್ತು.

‘ಅಥ್ಲೀಟ್‌ಗಳು, ತಾಂತ್ರಿಕ ಅಧಿಕಾರಿಗಳು ಸೇರಿದಂತೆ ಒಲಿಂಪಿಕ್ಸ್‌ಗೆ ತೆರಳುವ ಎಲ್ಲರಿಗೂ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಒಲಿಂಪಿಕ್ಸ್‌ಗೆ ಹೋಗುವ ಮುನ್ನ ಎಲ್ಲರೂ ಎರಡನೇ ಡೋಸ್ ತೆಗೆದುಕೊಳ್ಳಲಿದ್ದಾರೆ’ ಎಂದು ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಮತ್ತು ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವವರು ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಹೇಳಿದೆ. ಆದರೂ ಕ್ರೀಡಾ ಗ್ರಾಮದಲ್ಲಿ 80 ಶೇಕಡಕ್ಕೂ ಹೆಚ್ಚು ಮಂದಿ ಲಸಿಕೆ ತೆಗೆದುಕೊಳ್ಳಲಿರುವ ಸಾಧ್ಯತೆ ಇದೆ ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಈಗಾಗಲೇ ಭರವಸೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT