ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿನ ಬೆನ್ನೇರಿ ಮೊಮೊಟಾ ಪಯಣ

ಕೆಂಟೊ ಮೊಮೊಟಾ
Last Updated 22 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಅದು 2016ರ ಏಪ್ರಿಲ್ ತಿಂಗಳು. ಟೋಕಿಯೊದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕ್ಯಾಸಿನೊ ಅಡ್ಡೆಗೆ ತೆರಳಿ ಜೂಜು ಆಡಿದ ಕಳಂಕ ಜಪಾನ್‌ನಪ್ರಸಿದ್ಧ ಬ್ಯಾಡ್ಮಿಂಟನ್ ಆಟಗಾರನ ಮೇಲೆ ಬಂತು.

ಕ್ಯಾಸಿನೊಗಳಲ್ಲಿಹಲವು ಬಾರಿ ಆತ ಕೋಟ್ಯಂತರ ಹಣ ತೊಡಗಿಸಿದ್ದನೆಂದೂ ಕ್ಯಾಸಿನೊ ಸಿಬ್ಬಂದಿ ಬಹಿರಂಗಪಡಿಸಿದ್ದರು. ಇದೇ ಕಾರಣಕ್ಕಾಗಿ ಆ ಆಟಗಾರನ ಮೇಲೆ 2017ರ ವರ್ಷಾಂತ್ಯದವರೆಗೆ ನಿಷೇಧ ಹೇರಲಾಗಿತ್ತು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯುವ ಅವಕಾಶವೂ ಆತನ ಕೈತಪ್ಪಿ ಹೋಗಿತ್ತು. ಆದರೆ ಆತ ಎದೆಗುಂದಲಿಲ್ಲ. ವೃತ್ತಿಜೀವನ ಇನ್ನೇನೂ ಮುಗಿದೇಹೋಯಿತು ಎನ್ನುವ ಹೊತ್ತಿಗೆ ಆ ಆಟಗಾರ ಫೀನಿಕ್ಸ್‌ನಂತೆ ಮೇಲೆದ್ದು ಬಂದಿದ್ದಾರೆ. ಅವರು ಕೆಂಟೊ ಮೊಮೊಟಾ…..

ಸದ್ಯ ವಿಶ್ವ ಸಿಂಗಲ್ಸ್ ಕ್ರಮಾಂಕದಲ್ಲಿ ನಂ.1 ಸ್ಥಾನ ಅಲಂಕರಿಸಿರುವ ಮೊಮೊಟಾ ಈ ವರ್ಷ ಸುದ್ದಿಯ ಕೇಂದ್ರಬಿಂದು ಆಗಿದ್ದಾರೆ. 2019ರ ಸಾಲಿನಲ್ಲಿ ಪುರುಷರ ಬ್ಯಾಡ್ಮಿಂಟನ್‌ನಲ್ಲಿ ಲಭ್ಯವಿರುವ ಬಹುತೇಕ ಪ್ರಶಸ್ತಿಗಳೂ ಅವರ ಮುಡಿ ಸೇರಿವೆ. ವಿಶ್ವ ಚಾಂಪಿಯನ್‌ಷಿಪ್‌, ಏಷ್ಯನ್, ಆಲ್ ಇಂಗ್ಲೆಂಡ್ ಚಾಂಪಿಯಷಿಪ್‌ ಸೇರಿದಂತೆ ಈ ವರ್ಷ 11 ಪ್ರಶಸ್ತಿಗಳಿಗೆ ಅವರು ಒಡೆಯರಾಗಿದ್ದಾರೆ. ಒಂದೇ ವರ್ಷದಲ್ಲಿ ಇಷ್ಟು ಪ್ರಶಸ್ತಿಗಳ ಗರಿ ಮುಡಿಗೇರಿಸಿಕೊಂಡಿದ್ದು ವಿಶ್ವದಾಖಲೆ ಕೂಡ ಹೌದು. ಮಲೇಷ್ಯಾದ ಲೀ ಚೊಂಗ್ ವೇ 2010ರಲ್ಲಿ 10 ಪ್ರಶಸ್ತಿಗಳನ್ನು ಒಲಿಸಿಕೊಂಡಿದ್ದು ಇದುವರೆಗಿನ ದಾಖಲೆಯಾಗಿತ್ತು.

2019ರಲ್ಲಿ ಪ್ರಶಸ್ತಿಗಳ ಬಹುಮಾನ ಮೊತ್ತವಾಗಿ ಅವರು ಗಳಿಸಿದ್ದು ಮೂರೂವರೆ ಕೋಟಿ ರೂಪಾಯಿಗಿಂತ ಅಧಿಕ. ಇದು ಕೂಡ ದಾಖಲೆಯಾಗಿದೆ.

ಈ ತಿಂಗಳ 15ರಂದು ಚೀನಾದ ಗುವಾಂಗ್ ಜು ನಲ್ಲಿ ನಡೆದ ವಿಶ್ವ ಟೂರ್ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಮೊಮೊಟಾ ಈ ವರ್ಷದ 11ನೇ ಟ್ರೋಫಿಗೆ ಮುತ್ತಿಟ್ಟರು. ಅಂತಿಮ ಪಂದ್ಯದಲ್ಲಿ ಎದುರಾಳಿಯಾಗಿದ್ದ ಇಂಡೊನೇಷ್ಯಾದ ಅಂಥೋನಿ ಸಿನಿಸುಕ ಗಿಂಟಿಂಗ್ ಎದುರು ಮೊದಲ ಗೇಮ್ ಸೋತರೂ ಹೋರಾಟ ತೋರಿ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ವರ್ಷ ಆಡಿರುವ 73 ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ ಅವರು 67ರಲ್ಲಿ ವಿಜಯ ಪತಾಕೆ ಹಾರಿಸಿದ್ದಾರೆ. ಕೇವಲ ಆರರಲ್ಲಿ ಸೋಲು ಕಂಡಿದ್ದಾರೆ. ವೃತ್ತಿಜೀವನದಲ್ಲಿ ಆಡಿರುವ ಒಟ್ಟು ಪಂದ್ಯಗಳು 408. ಗೆದ್ದಿದ್ದು 330.2017ರ ಜುಲೈನಲ್ಲಿ ಮೊಮೊಟಾ ವಿಶ್ವ ಕ್ರಮಾಂಕದ ಸ್ಥಾನ 282! ಎಂಬುದು ಗಮನಿಸಬೇಕಾದ ವಿಷಯ.

ಆ ನಂತರದ ಅವರ ಯಶಸ್ಸಿನ ಬೆಳವಣಿಗೆಯ ಗತಿ ಬೆರಗುಗೊಳಿಸುವಂಥಾದ್ದು. 2018ರ ಆಗಸ್ಟ್‌ನಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಗೆದ್ದ ವೇಳೆ ಅವರು ಏಳನೇ ಸ್ಥಾನ ತಲುಪಿದ್ದರು. ಇದು ಜಪಾನ್ ಆಟಗಾರನೊಬ್ಬ ಗೆದ್ದ ಮೊದಲ ವಿಶ್ವ ಕಿರೀಟ ಕೂಡ ಆಗಿತ್ತು. ಈ ವರ್ಷದ ಆಗಸ್ಟ್‌ನಿಂದ ವಿಶ್ವ ರ‍್ಯಾಂಕಿಂಗ್‌ನಲ್ಲಿನಂ.1 ಸ್ಥಾನದಲ್ಲಿ ಮಿನುಗುತ್ತಿದ್ದಾರೆ.
1994 ಸೆಪ್ಟೆಂಬರ್ 1ರಂದು ಜಪಾನ್‌ನ ಮಿಟೊಯೊ ಎಂಬಲ್ಲಿ ಜನಿಸಿದ ಮೊಮೊಟಾ ಬಾಲ್ಯದಿಂದಲೇ ಬ್ಯಾಡ್ಮಿಂಟನ್ ಹುಚ್ಚು ಹಿಡಿಸಿಕೊಂಡವರು. ಪ್ರಾಥಮಿಕ ಶಾಲಾ ಹಂತದಲ್ಲೇ ಪ್ರಶಸ್ತಿಯ ರುಚಿ ಕಂಡವರು. 2011ರಲ್ಲಿ ತೈವಾನ್‌ನಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಸ್ಪರ್ಧಿಸಿದರು. ಮರು ವರ್ಷವೇ ದಕ್ಷಿಣ ಕೊರಿಯದಲ್ಲಿ ನಡೆದ ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಒಲಿಸಿಕೊಂಡರು. ಕ್ರಮವಾಗಿ ಯುವ, ಸೀನಿಯರ್ ವಿಭಾಗಗಳಲ್ಲಿ ಸ್ಪರ್ಧಿಸತೊಡಗಿ ಯಶಸ್ಸಿನ ಶಿಖರ ತಲುಪಿದ್ದಾರೆ. ಅದೇ ಹೆಜ್ಜೆಯಲ್ಲಿ ಸಾಗುತ್ತಿದ್ದಾರೆ ಕೂಡ.

ಟೋಕಿಯೊ ಒಲಿಂಪಿಕ್ಸ್‌ ಆರಂಭವಾಗಲು ಇನ್ನೂ ಏಳು ತಿಂಗಳು ಬಾಕಿಯಿದೆ. ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಜಪಾನ್‌ ದೇಶಕ್ಕೆ ಒಂದು ಚಿನ್ನದ ಪದಕ 25 ವರ್ಷದ ಮೊಮೊಟಾ ಮೂಲಕ ಬರಲಿ ಎಂಬುದನ್ನು ಅಲ್ಲಿಯ ಜನ
ಬಯಸಿರಲಿಕ್ಕೂ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT