ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ಪತ್ರಿಕೆ ಹಾಕರ್; ಇಂದು ಖೇಲ್‌ರತ್ನ

Last Updated 30 ಆಗಸ್ಟ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ತಮಿಳಿನಲ್ಲಿ ತಂಗಂ ಎಂದರೆ ಚಿನ್ನ. ತಮಿಳುನಾಡಿನ ಸೇಲಂ ಜಿಲ್ಲೆಯ ಪೆರಿಯವಾಡಗಂಪಟ್ಟಿ ಗ್ರಾಮದಲ್ಲಿ ಜನಿಸಿದ ಮರಿಯಪ್ಪನ್ ತಂಗವೇಲು ಹೆಸರಿನಲ್ಲಿರುವ ಚಿನ್ನಕ್ಕೆ ಸಾಧನೆಯ ಮೂಲಕ ಹೊಳಪು ತಂದವರು. ಚಿನ್ನದ ಪದಕ ಕೊರಳಿಗೇರಿಸಿಕೊಂಡು ದೇಶಕ್ಕೂ ಕೀರ್ತಿ ತಂದವರು. ಪ್ಯಾರಾಲಿಂಪಿಕ್ಸ್‌ನ ಹೈಜಂಪ್‌ನಲ್ಲಿ ಚಿನ್ನ ಗೆದ್ದ ಮರಿಯಪ್ಪನ್ ಅವರ ಬಾಲ್ಯ ಸಂಕಷ್ಟದಿಂದ ತುಂಬಿತ್ತು. ಮನೆಮನೆಗೆ ಪತ್ರಿಕೆ ಹಾಕುತ್ತಿದ್ದ ಅವರು ತಾಯಿ ಜೊತೆ ಗಾರೆ ಕೆಲಸಕ್ಕೂ ಹೋಗುತ್ತಿದ್ದರು. ಪರಿಶ್ರಮಕ್ಕೆ ‘ಫೀಲ್ಡ್‌ನಲ್ಲಿ’ ಫಲ ಕಂಡ ತಂಗವೇಲು ಅವರ ಪ್ರತಿಭೆಗೆ ಈಗ ರಾಷ್ಟ್ರೀಯ ಗೌರವವೂ ಸಿಕ್ಕಿದೆ. ಅವರು ಈಗ ಖೇಲ್ ರತ್ನ.

ಐದನೇ ವಯಸ್ಸಿನಲ್ಲಿ ಬಸ್‌ನ ಚಕ್ರದಡಿ ಸಿಲುಕಿ ಕಾಲು ಕಳೆದುಕೊಂಡಾಗ ಮರಿಯಪ್ಪನ್ ಬದುಕಿನ ಭರವಸೆಯನ್ನೇ ಕಳೆದುಕೊಂಡಿದ್ದರು. ನಂತರ ಅಚ್ಚರಿಯೇ ನಡೆದುಹೋಯಿತು. ಬೆಂಗಳೂರಿನ ಕೋಚ್ ಆರ್‌.ಸತ್ಯನಾರಾಯಣ ಅವರ ಕಣ್ಣಿಗೆ ಬಿದ್ದ ಮರಿಯಪ್ಪನ್ 2015ರಿಂದ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದರು. ನಗರದ ಸಂಪಂಗಿರಾಮನಗರದಲ್ಲಿ ಅವರ ವಾಸಕ್ಕೂ ವ್ಯವಸ್ಥೆ ಮಾಡಲಾಯಿತು. ಟಿ–42 ವಿಭಾಗದ ಹೈಜಂಪ್‌ನಲ್ಲಿ ಸ್ಪರ್ಧಿಸುವ ಅವರು 2016ರ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 1.89 ಮೀಟರ್ಸ್ ಎತ್ತರ ಜಿಗಿದು ಚಿನ್ನದ ಪದಕ ಗೆದ್ದುಕೊಂಡಿದ್ದರು.

‘ತಾಯಿ ಕಷ್ಟಪಟ್ಟು ಕುಟುಂಬ ನೋಡಿಕೊಳ್ಳುತ್ತಿದ್ದಳು. ಆಕೆಗೆ ನೆರವಾಗುತ್ತಿದ್ದ ನಾನು ಬೆಳಿಗ್ಗೆ ಪತ್ರಿಕೆ ಹಾಕುತ್ತಿದ್ದೆ. ಎರಡರಿಂದ ಮೂರು ಕಿಲೋಮೀಟರ್ ದೂರ ನಡೆದು ಪತ್ರಿಕೆ ಹಂಚಿ ವಾಪಸಾದ ನಂತರ ಗಾರೆ ಕೆಲಸಕ್ಕೂ ಹೋಗುತ್ತಿದ್ದೆ. ಎಲ್ಲ ಸೇರಿ ದಿನಕ್ಕೆ ₹ 200 ಸಿಗುತ್ತಿತ್ತು. 2012ರಿಂದ 2015ರ ವರೆಗೆ ಹೀಗೆಯೇ ಜೀವನ ಮುಂದುವರಿಯಿತು. ಆ ಕಷ್ಟದ ದಿನಗಳು ನಿನ್ನೆ ಮೊನ್ನೆ ಕಳೆದು ಹೋದಂತೆ ಭಾಸವಾಗುತ್ತಿದೆ’ ಎಂದು ಮರಿಯಪ್ಪನ್ ಹೇಳುತ್ತಾರೆ.

’ಮರಿಯಪ್ಪನ್ ತಾಯಿ ತರಕಾರಿ ಮಾರುತ್ತಿದ್ದರು. ವ್ಯಾಪಾರ ಕಡಿಮೆ ಇದ್ದಾಗ ಗಾರೆ ಕೆಲಸಕ್ಕೂ ಹೋಗುತ್ತಿದ್ದರು. ಹಾಗೆ ಹೊರಟು ನಿಂತರೆ ತಾಯಿ ಜೊತೆ ಮರಿಯಪ್ಪನ್ ಕೂಡ ಹೋಗಿ ಕೆಲಸದಲ್ಲಿ ನೆರವಾಗುತ್ತಿದ್ದರು. 2013ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌ಷಿಪ್ ಆಯೋಜಿಸಿದ್ದೆವು. ಅದರಲ್ಲಿ ಪಾಲ್ಗೊಂಡಿದ್ದ ಅವರನ್ನು ಗಮನಿಸಿದೆ. ನಂತರ ಇಲ್ಲೇ ತರಬೇತಿಗೆ ಸೇರಿಸಿದೆ’ ಎನ್ನುತ್ತಾರೆಕೋಚ್ ಸತ್ಯನಾರಾಯಣ.

‘ಜನಿಸಿದಾಗಲೇ ಇರುವ ಊನಕ್ಕೂ ಅಪಘಾತದಲ್ಲಿ ಉಂಟಾಗುವ ಊನಕ್ಕೂ ವ್ಯತ್ಯಾಸವಿದೆ. ಮರಿಯಪ್ಪನ್ ಕಾಲಿನಲ್ಲಿ ಬಲವಿತ್ತು. ಶಾಲಾ ದಿನಗಳಲ್ಲಿ ಕ್ರೀಡಾಪಟುವಾಗಿದ್ದ ಅವರಿಗೆ ಸರಿಯಾಗಿ ತರಬೇತಿ ನೀಡಿದರೆ ಹೈಜಂಪ್‌ನಲ್ಲಿ ಸಾಧನೆ ಮಾಡುವರು ಎಂದು ಆಗಲೇ ಅನಿಸಿತ್ತು. ಅದು ನಂತರ ನಿಜವೂ ಆಯಿತು’ ಎನ್ನುತ್ತಾರೆ ಸತ್ಯನಾರಾಯಣ.

ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ ವಿವಿಧ ಕಡೆಯಿಂದ ಬಂದ ಹಣವನ್ನೆಲ್ಲ ಸಂಗ್ರಹಿಸಿಟ್ಟು ಜಾಗ ಖರೀದಿ ಮಾಡಿದ ಅವರನ್ನು 2018ರಲ್ಲಿ ಭಾರತ ಕ್ರೀಡಾ ಪ್ರಾಧಿಕಾರ ‘ಎ’ ದರ್ಜೆಯ ಕೋಚ್ ಆಗಿ ನೇಮಕ ಮಾಡಿತು. ಈಗ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ (ಟಾಪ್) ಯೋಜನೆಯಲ್ಲೂ ಇದ್ದಾರೆ. 2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚು ಗೆದ್ದಿದ್ದ ಮರಿಯಪ್ಪನ್ ಕಳೆದ ವರ್ಷ ದುಬೈನಲ್ಲಿ ನಡೆದಿದ್ದ ಐಪಿಸಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸ್ಥಾನ ಗಳಿಸಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಅರ್ಹತೆ ಗಳಿಸಿದ್ದರು. ಟೋಕಿಯೊದಲ್ಲಿ ಎರಡು ಮೀಟರ್ ಎತ್ತರ ಜಿಗಿದು ದಾಖಲೆ (ಟಿ–42 ವಿಭಾಗದಲ್ಲಿ ಸದ್ಯದ ಗರಿಷ್ಠ ಸಾಧನೆ 1.96 ಮೀಟರ್ಸ್) ಮುರಿಯುವ ಗುರಿಯೊಂದಿಗೆ ಬೆಂಗಳೂರಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಟೋಕಿಯೊದಲ್ಲಿ ಪದಕ ಗೆದ್ದರೆ ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದ ಅಪರೂಪದ ಸಾಧನೆ ಅವರದಾಗಲಿದೆ. ಜಾವೆಲಿನ್ ಎಸೆತಗಾರ ದೇವೇಂದ್ರ ಜಝಾರಿಯಾ ಅವರು 2004 ಮತ್ತು 2016ರ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

ಮರಿಯಪ್ಪನ್ ತಂಗವೇಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT