ಶನಿವಾರ, ಏಪ್ರಿಲ್ 17, 2021
31 °C

ರಾಜ್ಯದಲ್ಲಿ ಖೇಲೋ ಇಂಡಿಯಾ ಕ್ರೀಡಾಕೂಟ: ಕ್ರೀಡಾ ಸಚಿವ ಕೆ.ಸಿ ನಾರಾಯಣಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಮುಂಬರುವ ಖೇಲೋ ಇಂಡಿಯಾ ಕ್ರೀಡಾಕೂಟವನ್ನು ರಾಜ್ಯದಲ್ಲಿ ಆಯೋಜಿಸಲು ಕೇಂದ್ರ ಸರ್ಕಾರದಿಂದ ಒಪ್ಪಿಗೆ ದೊರೆತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಹೇಳಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸೋಮವಾರ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್‌, ವಾಲಿಬಾಲ್ ಮೈದಾನ ಹಾಗೂ ಒಳಾಂಗಣ ಈಜುಕೊಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಗರದಲ್ಲಿ ₹ 6 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್‌ ಅಥ್ಲೆಟಿಕ್ ಟ್ರ್ಯಾಕ್, ₹ 3 ಕೋಟಿ ವೆಚ್ಚದಲ್ಲಿ ಈಜುಕೊಳ, ₹ 2 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ, ₹ 50 ಲಕ್ಷ ವೆಚ್ಚದಲ್ಲಿ ವಾಲಿಬಾಲ್ ಅಂಕಣ ನಿರ್ಮಿಸಲಾಗಿದೆ ಎಂದರು.

ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿ.ಪಂ. ಸಿಇಒ ಗೋವಿಂದರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಜಿ.ಲೋಣಿ ಇದ್ದರು.

ಅನುದಾನ ಸಮರ್ಪಕ ಬಳಕೆಗೆ ಸೂಚನೆ

ಪ್ರಸಕ್ತ ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡಿದ್ದರೂ ಕಾಮಗಾರಿ ನಡೆಯದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸ್ಯಾಂಖಿಕ ಸಚಿವ ಡಾ. ನಾರಾಯಣಗೌಡ, ಅನುದಾನ ಸಮರ್ಪಕ ಬಳಕೆಗೆ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದಿನ ಸಾಲಿನ ₹12 ಕೋಟಿ ಅನುದಾನ ಬಳಕೆಯಾಗದೆ ಇರುವುದನ್ನು ಗಮನಿಸಿ, ಕೆಲವೇ ದಿನಗಳಲ್ಲಿ ಆರ್ಥಿಕ ವರ್ಷವೇ ಮುಗಿಯಲಿದ್ದು. ಅನುದಾನ ಬಳಸದೆ ಉಳಿಸಿಕೊಂಡಿದ್ದರಿಂದ ಮುಂದಿನ ಸಾಲಿನ ಅನುದಾನ ಪಡೆಯಲು ಕಷ್ಟವಾಗುತ್ತದೆ. ಕಾರಣ ತಕ್ಷಣವೇ ಅನುದಾನ ಬಳಕೆ ಆಗುವಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಪ್ರಸಕ್ತ ಸಾಲಿನಲ್ಲಿ ವಿಧಾನ ಪರಿಷತ್ ಸದಸ್ಯರೂ ಸೇರಿದಂತೆ ಒಟ್ಟು 11 ಶಾಸಕರ ಪೈಕಿ ಕೇವಲ ನಾಲ್ವರು ಶಾಸಕರು ಮಾತ್ರ ಅನುದಾನ ಬಳಕೆಗೆ ಕ್ರಿಯಾಯೋಜನೆ ನೀಡಿದ್ದು, ಇನ್ನೂ 7 ಜನ ಶಾಸಕರು ಕ್ರೀಯಾಯೋಜನೆ ನೀಡಬೇಕಾಗಿದೆ. ಅಧಿಕಾರಿಗಳು ಈ ಬಗ್ಗೆ ಶಾಸಕರನ್ನ ಯಾಕೆ ಸಂಪರ್ಕಿಸಿಲ್ಲ ಎಂದು ಸಚಿವರು ಅಸಮಾಧಾನವ್ಯಕ್ತಪಡಿಸಿದರ.

ತಕ್ಷಣ ಶಾಸಕರನ್ನು ಸಂಪರ್ಕಿಸಿ, ಕ್ರಿಯಾಯೋಜನೆ ಪಡೆದು ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಬಿಡುಗಡೆಯಾಗುವ ಅನುದಾನವನ್ನು ಪಿ.ಡಿ. ಖಾತೆಯಲ್ಲಿ ಇಡದೇ ಮಾರ್ಚ್ ಅಂತ್ಯದೊಳಗೆ ಬಳಸಬೇಕು, ಇಲ್ಲದಿದ್ದಲ್ಲಿ ಬಿಡುಗಡೆಯಾದ ಅನುದಾನವನ್ನು ಹಿಂಪಡೆಯುವ ಬಗ್ಗೆ ಯೋಚಿಸಲಾಗಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಶೀಘ್ರವೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು. 

ಕ್ರೀಡಾ ಇಲಾಖೆಗೆ ಜಿಲ್ಲಾ ಪಂಚಾಯ್ತಿಯಿಂದ ಬಿಡುಗಡೆಯಾಗಿರುವ ಅನುದಾನದಲ್ಲಿ ಶೇ 63 ರಷ್ಟು ಮಾತ್ರ ಬಳಕೆಯಾಗಿರುವುದನ್ನು ಗಮನಿಸಿದ ಸಚಿವರು, ಆರ್ಥಿಕ ವರ್ಷ ಮುಗಿಯಲು 20 ದಿನಗಳು ಮಾತ್ರ ಬಾಕಿ ಇದ್ದು, ಅಷ್ಟರೊಳಗೆ ಶೇ 100 ರಷ್ಟು ವೆಚ್ಚವಾಗಬೇಕು ಎಂದು ಸೂಚಿಸಿದರು.

ವೇದಿಕೆಯಲ್ಲಿ ಅನಗತ್ಯ ವ್ಯಕ್ತಿಗಳು: ವಿರೋಧ

ವಿಜಯಪುರ: ನಗರದ ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸಿಂಥೆಟಿಕ್‌ ಟ್ರ್ಯಾಕ್‌ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಪಡದ ವಿವಿಧ ಸಂಘಟನೆಗಳ ಮುಖಂಡರು ಆಹ್ವಾನಿಸಿ, ಆಸನ ನೀಡಿದ್ದಕ್ಕೆ ಕ್ರೀಡಾಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದರು.

‘ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣ ಸಂಬಂಧ ಹೋರಾಟ ನಡೆಸಿದವರನ್ನು ಕಡೆಗಣಿಸಿ, ಅನಗತ್ಯ ವ್ಯಕ್ತಿಗಳನ್ನು ವೇದಿಕೆ ಮೇಲೆ ಏಕೆ ಕೂರಿಸಿದ್ದೀರಿ’ ಎಂದು ಕರ್ನಾಟಕ ಅಥ್ಲೇಟಿಕ್‌ ಅಸೋಸಿಯೇಷನ್‌ ಉಪಾಧ್ಯಕ್ಷ ಎಸ್‌.ಎಸ್‌.ಹಿರೇಮಠ, ಜಿಲ್ಲಾ ಬಾಸ್ಕೇಟ್‌ ಬಾಲ್‌ ಅಸೋಸಿಯೇಷನ್‌ ಅಧ್ಯಕ್ಷ ರಾಜು ಬಿದರಿ, ಸೈಕ್ಲಿಂಗ್‌ ಅಸೋಸಿಯೇಷನ್‌ ಅಧ್ಯಕ್ಷ ರಾಜು ಬಿರಾದಾರ ಅವರು ಸಚಿವರು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವೇದಿಕೆಯಲ್ಲಿ ಕುಳಿತಿದ್ದ ಮುಖಂಡರಾದ ಅಡಿವೆಪ್ಪ ಸಾಲಗಲ್ಲ, ನಾಗರಾಜ ಪಿ.ಲಂಬು ಅವರು ವಾಗ್ವಾದಕ್ಕೆ ಮುಂದಾದರು. ತಕ್ಷಣ ಮಧ್ಯ ಪ್ರವೇಶಿಸಿದ ವಿಜುಗೌಡ ಪಾಟೀಲ ಎಲ್ಲರನ್ನು ಸಮಾಧಾನ ಪಡಿಸಿದರು.

ಆಹ್ವಾನ ಪತ್ರಿಕೆ ಎರಡು ಬಾರಿ ಮುದ್ರಣ

ಅನಗತ್ಯ ವ್ಯಕ್ತಿಗಳ ಹೆಸರು ಸೇರ್ಪಡೆಗಾಗಿ ಕಾರ್ಯಕ್ರಮದ ಮೊದಲ ಆಹ್ವಾನ ಪ‍ತ್ರಿಕೆಯನ್ನು ರದ್ದು ಮಾಡಿ,  ಅವರ ಹೆಸರು ಸೇರ್ಪಡೆ ಮಾಡಿ ಎರಡನೇ ಬಾರಿ ಮುದ್ರಣ ಮಾಡುವ ಮೂಲಕ ದುಂದುವೆಚ್ಚ ಮಾಡಲಾಗಿದೆ ಎಂದು ಕ್ರೀಡಾಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು