ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊದತ್ತ ಕಣ್ಣು ನೆಟ್ಟಿದೆ ಭಾರತದ ಹಾಕಿ ತಂಡ

Last Updated 7 ಜನವರಿ 2020, 15:57 IST
ಅಕ್ಷರ ಗಾತ್ರ

ಹೊಸ ವರ್ಷಕ್ಕೆ ಕಾಲಿಟ್ಟಾಗಿದೆ. ಒಲಿಂಪಿಕ್ಸ್‌ಗೆ ದಿನಗಣನೆಯೂ ಶುರುವಾಗಿದೆ. ಈ ಮಹಾಕೂಟಕ್ಕೆ ಆತಿಥ್ಯ ವಹಿಸಿರುವ ಜಪಾನ್‌, ವಿಶ್ವಕ್ಕೆ ಸಾಮರಸ್ಯದ ಸಂದೇಶ ಸಾರಲು ಸಜ್ಜಾಗಿದೆ.

ಈ ಹೊತ್ತಿನಲ್ಲೇ ಭಾರತದ ಹಾಕಿಯಲ್ಲಿ ಹೊಸ ಕನಸೊಂದು ಚಿಗುರೊಡೆದಿದೆ.

ಅಮೋಘ ಆಟದ ಮೂಲಕ 2019ನೇ ಋತುವನ್ನು ಸ್ಮರಣೀಯವಾಗಿಸಿಕೊಂಡಿರುವ ಪುರುಷರ ಮತ್ತು ಮಹಿಳಾ ತಂಡಗಳು ಈಗ ಟೋಕಿಯೊದತ್ತ ಕಣ್ಣು ನೆಟ್ಟಿವೆ. ‘ರೋಬೋ’ಗಳ ನಾಡಿನಲ್ಲಿ ಪದಕ ಗೆದ್ದು ದಶಕಗಳಿಂದ ಕಾಡುತ್ತಿರುವ ಬಹುದೊಡ್ಡ ಕೊರಗನ್ನು ದೂರ ಮಾಡುವ ಸಂಕಲ್ಪ ತೊಟ್ಟಿವೆ.

ಭಾರತದ ಹೆಜ್ಜೆ ಗುರುತು

ಒಲಿಂಪಿಕ್ಸ್‌ ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ಹಾಕಿದರೆ ಅಲ್ಲಿ ಭಾರತದ ಸಾಧನೆ ಎದ್ದು ಕಾಣುತ್ತದೆ. ಈ ಕೂಟದಲ್ಲಿ ದೇಶಕ್ಕೆ ಅತೀ ಹೆಚ್ಚು ಪದಕಗಳು ಒಲಿದಿರುವುದು ಹಾಕಿಯಲ್ಲಿ. ಪುರುಷರ ತಂಡ ಒಟ್ಟು ಎಂಟು ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡಿದೆ. ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳೂ ಖಾತೆಗೆ ಸೇರಿವೆ.

ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ ಸದಸ್ಯತ್ವ ಪಡೆದ ಮೊದಲ ಯುರೋಪೇತರ ರಾಷ್ಟ್ರ ಎಂಬ ಹಿರಿಮೆ ಹೊಂದಿರುವ ಭಾರತವು 1928ರಲ್ಲಿ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿತ್ತು. ನೆದರ್ಲೆಂಡ್ಸ್‌ನಲ್ಲಿ ನಡೆದಿದ್ದ ಕೂಟದಲ್ಲಿ ಜೈಪಾಲ್‌ ಸಿಂಗ್‌ ಮುಂಡಾ ನೇತೃತ್ವದ ತಂಡವು ಆತಿಥೇಯರನ್ನು ಮಣಿಸಿ ಚೊಚ್ಚಲ ಚಿನ್ನದ ಸಂಭ್ರಮ ಆಚರಿಸಿತ್ತು.

ದೇಶವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಆ ಸಂದರ್ಭದಲ್ಲಿ ತಂಡದಲ್ಲಿ ಇದ್ದ ಭಾರತೀಯರು ಆರು ಮಂದಿ ಮಾತ್ರ. ಧ್ಯಾನ್‌ಚಂದ್‌ ಮತ್ತು ಖೇರ್‌ ಸಿಂಗ್‌ ಇವರಲ್ಲಿ ಪ್ರಮುಖರು. ಸ್ವಾತಂತ್ರ್ಯ ಪೂರ್ವದಲ್ಲಿ ಸತತ ಮೂರು ಒಲಿಂಪಿಕ್ಸ್‌ ಪದಕಗಳನ್ನು ಗೆದ್ದಿದ್ದ ತಂಡ ನಂತರವೂ ಪ್ರಾಬಲ್ಯ ಮೆರೆದಿತ್ತು. 1948, 1952 ಮತ್ತು 1956ರ ಕೂಟಗಳಲ್ಲಿ ಚಿನ್ನದ ಪದಕಗಳನ್ನು ಜಯಿಸಿ ‘ಹ್ಯಾಟ್ರಿಕ್‌’ ಸಾಧನೆ ಮಾಡಿತ್ತು.

ನಂತರದ ಕಾಲಘಟ್ಟದಲ್ಲಿ ಭಾರತದ ಪ್ರಾಬಲ್ಯ ಕ್ಷೀಣಿಸುತ್ತಾ ಹೋಯಿತು. 1980ರ ಮಾಸ್ಕೊ ಮಹಾಕೂಟದಲ್ಲಿ ತಂಡವು ಮತ್ತೊಮ್ಮೆ ಚಿನ್ನಕ್ಕೆ ಕೊರಳೊಡ್ಡಿದಾಗ ಗತವೈಭವ ಮರುಕಳಿಸಬಹುದೆಂಬ ಕನಸು ಚಿಗುರೊಡೆದಿತ್ತು. ಆ ನಿರೀಕ್ಷೆಯೂ ಸುಳ್ಳಾಯಿತು. ನಂತರದ ಮೂರು ದಶಕಗಳಲ್ಲಿ ಒಂಬತ್ತು ಕೂಟಗಳು ನಡೆದವು. ಈ ಪೈಕಿ 2008ರ ಬೀಜಿಂಗ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ವಿಫಲವಾದ ತಂಡ ಉಳಿದ ಎಂಟು ಕೂಟಗಳಿಂದ ಬರಿಗೈಲಿ ವಾಪಾಸಾಗಿತ್ತು.

ಹೊಸ ವರ್ಷ, ಹೊಸ ನಿರೀಕ್ಷೆ

ಈಗ ಭಾರತದ ಹಾಕಿಯಲ್ಲಿ ಹಲವು ‘ಕ್ರಾಂತಿ’ಗಳಾಗಿವೆ. ಹೋದ ವರ್ಷದ ಏಪ್ರಿಲ್‌ನಲ್ಲಿ ಆಸ್ಟ್ರೇಲಿಯಾದ ಗ್ರಹಾಂ ರೀಡ್‌ ಮುಖ್ಯ ಕೋಚ್‌ ಹುದ್ದೆ ಅಲಂಕರಿಸಿದ ನಂತರ ತಂಡದ ಸಾಮರ್ಥ್ಯ ಹಾಗೂ ಆಟಗಾರರ ಮನೋಬಲ ಹೆಚ್ಚಿದೆ.

ವಿವೇಕ್‌ ಸಾಗರ್‌ ಪ್ರಸಾದ್‌, ಹಾರ್ದಿಕ್‌ ಸಿಂಗ್‌, ಹರ್ಜೀತ್‌ ಸಿಂಗ್‌, ದಿಲ್‌ಪ್ರೀತ್‌ ಸಿಂಗ್‌ ಅವರಂತಹ ಹೊಸ ತಲೆಮಾರಿನ ಹುಡುಗರು ಆಗಮನವಾಗಿದೆ. ಸೀನಿಯರ್‌ ತಂಡದಲ್ಲಿ ಅವಕಾಶ ಪಡೆದು ಮಿಂಚುತ್ತಿರುವ ಇವರು ಹೊಸ ಭರವಸೆ ಹುಟ್ಟುಹಾಕಿದ್ದಾರೆ.

ಯಶಸ್ಸಿನ ಬೆನ್ನೇರಿ ಸಾಗುತ್ತಿರುವ ಭಾರತದ ಎದುರು ಈಗ ಹಲವು ಸವಾಲುಗಳಿವೆ. ಇದೇ ತಿಂಗಳ 18 ರಂದು ಎಫ್‌ಐಎಚ್‌ ಪ್ರೊ ಲೀಗ್‌ಗೆ ಚಾಲನೆ ಸಿಗಲಿದೆ. ಜೂನ್‌ 28ರವರೆಗೂ ಜರುಗುವ ಈ ಲೀಗ್‌ನಲ್ಲಿ ಮನಪ್ರೀತ್‌ ಬಳಗವು ರ‍್ಯಾಂಕಿಂಗ್‌ನಲ್ಲಿ ತನಗಿಂತಲೂ ಮೇಲಿನ ಸ್ಥಾನದಲ್ಲಿರುವ ಆಸ್ಟ್ರೇಲಿಯಾ, ಬೆಲ್ಜಿಯಂ, ನೆದರ್ಲೆಂಡ್ಸ್‌ ಮತ್ತು ಅರ್ಜೆಂಟೀನಾ ತಂಡಗಳ ವಿರುದ್ಧ ಸೆಣಸಬೇಕಿದೆ. ಈ ಅಗ್ನಿಪರೀಕ್ಷೆಯಲ್ಲಿ ಗೆದ್ದರೆ ತಂಡದ ಒಲಿಂಪಿಕ್ಸ್‌ ಪದಕದ ಕನಸಿಗೆ ಇನ್ನಷ್ಟು ಬಲ ಸಿಗಬಹುದು.

ಮಹಿಳೆಯರ ಕಥೆ ಏನು..

ರಾಣಿ ರಾಂಪಾಲ್‌ ಸಾರಥ್ಯದಲ್ಲಿ ಮಹಿಳಾ ತಂಡದವರು ಇತ್ತೀಚಿನ ವರ್ಷಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರುತ್ತಿದ್ದಾರೆ.

2017ರಲ್ಲಿ ಏಷ್ಯಾಕಪ್‌ ಗೆದ್ದಿದ್ದ ತಂಡ, ಏಷ್ಯನ್‌ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಜಯಿಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಹೋದ ವರ್ಷ ಕೆಲ ಟೂರ್ನಿಗಳಲ್ಲಿ ಪ್ರಶಸ್ತಿಯ ಸಾಧನೆ ತೋರಿರುವ ರಾಣಿ ಪಡೆ, ವಿಶ್ವ ರ‍್ಯಾಂಕಿಂಗ್‌ನಲ್ಲಿ 12ರಿಂದ ಒಂಬತ್ತನೇ ಸ್ಥಾನಕ್ಕೂ ಬಡ್ತಿ ಹೊಂದಿದೆ.

ಹಿಂದಿನ ಎರಡು ವರ್ಷಗಳಲ್ಲಿ ಪುರುಷರ ತಂಡದಲ್ಲಿ ಹಲವು ಬದಲಾವಣೆಗಳಾಗಿವೆ. ಈ ಅವಧಿಯಲ್ಲಿ ಮಹಿಳಾ ತಂಡದಲ್ಲಿ ಹೊಸ ಮುಖಗಳಿಗೆ ಮನ್ನಣೆ ಸಿಕ್ಕಿರುವುದು ತೀರಾ ವಿರಳ. ನಾಲ್ಕು ವರ್ಷಗಳ ಹಿಂದೆ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದವರ ಪೈಕಿ ಹೆಚ್ಚಿನವರು ಈಗಲೂ ತಂಡದಲ್ಲಿದ್ದಾರೆ. ‌ಹೀಗಾಗಿ ಪರಸ್ಪರರ ನಡುವೆ ಉತ್ತಮ ಹೊಂದಾಣಿಕೆ ಏರ್ಪಟ್ಟಿದೆ. ತಂಡದಿಂದ ಪರಿಣಾಮಕಾರಿ ಸಾಮರ್ಥ್ಯ ಮೂಡಿಬರಲೂ ಇದು ಸಹಕಾರಿಯಾಗಿದೆ.

ಮಹಿಳಾ ತಂಡದ ಒಲಿಂಪಿಕ್ಸ್‌ ಹಾದಿ ಹೂವಿನ ಹಾಸಿಗೆಯಂತೂ ಅಲ್ಲ. ಪುರುಷರಂತೆ ಮಹಿಳಾ ತಂಡಕ್ಕೆ ವಿಶ್ವದ ಬಲಿಷ್ಠ ತಂಡಗಳ ಎದುರು ಹೆಚ್ಚೆಚ್ಚು ದ್ವಿಪಕ್ಷೀಯ ಸರಣಿಗಳನ್ನು ಆಡುವ ಅವಕಾಶ ಸಿಗುತ್ತಿಲ್ಲ. ಹೀಗಾಗಿ ರಾಣಿ ಬಳಗವು ಆಸ್ಟ್ರೇಲಿಯಾ, ಅರ್ಜೆಂಟೀನಾದಂತಹ ಬಲಿಷ್ಠ ತಂಡಗಳ ಎದುರು ಗೋಲು ಗಳಿಸಲೂ ಪರದಾಡುವಂತಹ ಪರಿಸ್ಥಿತಿ ಇದೆ.

ಹೋದ ವರ್ಷದ ಪ್ರದರ್ಶನವನ್ನೇ ತಂಡ ಮುಂದುವರಿಸಿಕೊಂಡು ಹೋದರೆ ಕನಿಷ್ಠ ಎಂಟರ ಘಟ್ಟಕ್ಕಾದರೂ ಪ್ರವೇಶಿಸಬಹುದು. ಒಂದೊಮ್ಮೆ ಇದು ಸಾಧ್ಯವಾದರೆ ಅದೇ ದೊಡ್ಡ ಸಾಧನೆಯಾಗಲಿದೆ.

***

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ತಂಡಗಳು

ಪುರುಷರು:ಜಪಾನ್‌, ಅರ್ಜೆಂಟೀನಾ, ಆಸ್ಟ್ರೇಲಿಯಾ, ಬೆಲ್ಜಿಯಂ, ಕೆನಡಾ, ಜರ್ಮನಿ, ಬ್ರಿಟನ್‌, ಭಾರತ, ನೆದರ್ಲೆಂಡ್ಸ್‌, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ಸ್ಪೇನ್‌.

ಮಹಿಳೆಯರು:ಜಪಾನ್‌, ಅರ್ಜೆಂಟೀನಾ, ಆಸ್ಟ್ರೇಲಿಯಾ, ಚೀನಾ, ಭಾರತ, ಐರ್ಲೆಂಡ್‌, ಜರ್ಮನಿ, ಬ್ರಿಟನ್‌, ನೆದರ್ಲೆಂಡ್ಸ್‌, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ಸ್ಪೇನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT