ಶುಕ್ರವಾರ, ಮಾರ್ಚ್ 31, 2023
26 °C
ಶೂಟಿಂಗ್‌ನಲ್ಲಿ ಭಾರತದ ಅವನಿ ಲೇಖರಾ ವೈಫಲ್ಯ

ಟೋಕಿಯೊ ಪ್ಯಾರಾಲಿಂಪಿಕ್ಸ್: ಚೆರ್ನೊಬಿಲ್ ದುರಂತ ಸಂತ್ರಸ್ತೆ ಒಕ್ಸಾನಾಗೆ 2ನೇ ಚಿನ್ನ

ಎಪಿ/ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ (ಎಪಿ/ಪಿಟಿಐ): ಉಕ್ರೇನ್‌ನ ಚೆರ್ನೊಬಿಲ್‌ನಲ್ಲಿ 1986ರಲ್ಲಿ ನಡೆದ ಅಣು ಸ್ಥಾವರ ಸ್ಫೋಟದ ನಂತರ ಪರಿಣಾಮದಿಂದಾಗಿ ಹುಟ್ಟಿನಿಂದಲೇ ಕಾಲುಗಳ ಬಲ ಕಳೆದುಕೊಂಡಿದ್ದ ಅಮೆರಿಕದ ಒಕ್ಸಾನಾ ಮಾಸ್ಟರ್ಸ್‌, ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡನೇ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಮಂಗಳವಾರ ರಾತ್ರಿ ನಡೆದ ಮಹಿಳೆಯರ ಹ್ಯಾಂಡ್‌ಸೈಕಲ್ ರಸ್ತೆ ರೇಸ್‌ನ ಟೈಮ್‌ ಟ್ರಯಲ್‌ನಲ್ಲಿ ಅವರು ಅಗ್ರಸ್ಥಾನ ಗಳಿಸಿದರು. ಈ ಪದಕದೊಂದಿಗೆ ಅವರು ಬೇಸಿಗೆ ಮತ್ತು ಚಳಿಗಾಲದ ಒಲಿಂಪಿಕ್ಸ್‌ಗಳಲ್ಲಿ ಗೆದ್ದ ಪದಕಗಳ ಸಂಖ್ಯೆ 10ಕ್ಕೇರಿತು.

ಇದಕ್ಕೂ ಮೊದಲು ಅವರು ಕೂಟದ ಮಹಿಳೆಯರ ರಸ್ತೆ ರೇಸ್‌ ಎಚ್‌5 ವಿಭಾಗದಲ್ಲಿ ಚಿನ್ನ ಗಳಿಸಿದ್ದರು.

1989ರಲ್ಲಿ ಉಕ್ರೇನ್‌ನಲ್ಲಿ ಜನಿಸಿದ್ದ ಒಕ್ಸಾನಾ ಮೊದಲು ಸ್ಕೈಯಿಂಗ್‌, ರೋಯಿಂಗ್‌ ಮತ್ತು ಸೈಕ್ಲಿಂಗ್‌ಗಳಲ್ಲಿ ಸ್ಪರ್ಧಿಸಿದವರು.

ಒಕ್ಸಾನಾ ಬಾಲಕಿಯಾಗಿದ್ದಾಗಲೇ ಅಮೆರಿಕದ ಮಹಿಳೆಯೊಬ್ಬರು ದತ್ತು ಪಡೆದು ಅವರನ್ನು ಸಾಕಿದರು.

ಶೂಟಿಂಗ್‌ನಲ್ಲಿ ಲೇಖರ ವಿಫಲ: ಎರಡು ದಿನಗಳ ಹಿಂದೆ, ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದ ಶೂಟರ್‌ ಅವನಿ ಲೇಖರಾ ಬುಧವಾರ ಅದೇ ಸಾಮರ್ಥ್ಯ ತೋರುವಲ್ಲಿ ವಿಫಲರಾದರು. ದೇಶದ ಇತರ ಸ್ಪರ್ಧಿಗಳೂ ನಿರಾಸೆ ಮೂಡಿಸಿದರು.

10 ಮೀಟರ್ಸ್ ಏರ್ ರೈಫಲ್ ಮಿಶ್ರ ಪ್ರೋನ್ ಎಸ್‌ಎಚ್‌1 ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು 27ನೇ ಸ್ಥಾನ ಗಳಿಸಿದರು. ಅರ್ಹತಾ ಸುತ್ತಿನಲ್ಲಿ ಒಟ್ಟು 629.7 ಪಾಯಿಂಟ್ಸ್ ಕಲೆಹಾಕಿದರು.

ಎಸ್‌ಎಚ್‌1 ವಿಭಾಗದಲ್ಲಿ ಕೈಗಳು ಊನ ಇರದೇ, ಕಾಲುಗಳಲ್ಲಿ ನ್ಯೂನತೆಯಿದ್ದವರು ಮಾತ್ರ ಸ್ಪರ್ಧಿಸಬಹುದಾಗಿದೆ.

ಪುರುಷರ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಿದ್ಧಾರ್ಥ್ ಬಾಬು ಮತ್ತು ದೀಪಕ್‌ ಕುಮಾರ್ ಕ್ರಮವಾಗಿ 40 ಮತ್ತು 43ನೇ ಸ್ಥಾನ ಗಳಿಸಿದರು. ಈ ವಿಭಾಗದಲ್ಲಿ ಜರ್ಮನಿಯ ನತಾಶಾ ಹಿಲ್‌ಟ್ರಾಪ್ ಚಿನ್ನ, ದಕ್ಷಿಣ ಕೊರಿಯಾದ ಪಾರ್ಕ್‌ ಜಿನ್ಹೊ ಬೆಳ್ಳಿ ಮತ್ತು ಉಕ್ರೇನ್‌ನ ಇರಿಯಾನಾ ಶೆಟ್ನಿಕ್‌ ಕಂಚು ಗೆದ್ದುಕೊಂಡರು.

ನಿಯಮ ಉಲ್ಲಂಘನೆ; ಈಜುಪಟು ಸುಯಶ್ ಜಾಧವ್ ಅನರ್ಹ: ಪುರುಷರ 100 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್ ಎಸ್‌ಬಿ7 ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಸುಯಶ್ ಜಾಧವ್‌ ಅವರನ್ನು ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಅನರ್ಹಗೊಳಿಸಲಾಯಿತು.

ವಿಶ್ವ ಪ್ಯಾರಾ ಈಜು ನಿಯಮ ಸಂಖ್ಯೆ11.4.1ರ ಪ್ರಕಾರ ‘ಸ್ಪರ್ಧೆ ಆರಂಭದ ನಂತರ ಮೊದಲ ಬ್ರೆಸ್ಟ್‌ಸ್ಟ್ರೋಕ್ ಕಿಕ್‌ಗೆ ಮುಂಚಿತವಾಗಿ ಮತ್ತು ಪ್ರತಿ ತಿರುವಿನ ನಂತರ, ಒಂದೇ ಬಟರ್‌ಫ್ಲೈ ಕಿಕ್‌ಗೆ ಅವಕಾಶ ಇರುತ್ತದೆ. ಅದರೆ ಸುಯಶ್ ಅವರು ತಿರುವಿನ ನಂತರ ಒಂದಕ್ಕಿಂತ ಹೆಚ್ಚು ಫ್ಲೈ ಕಿಕ್‌ ಮಾಡಿದರೆಂದು ಹೇಳಲಾಗಿದೆ.

27 ವರ್ಷದ ಸುಯಶ್‌, 2018ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಒಂದು ಚಿನ್ನ, ಎರಡು ಕಂಚು ಗೆದ್ದಿದ್ದರು.

ಕ್ಲಬ್‌ ಥ್ರೊ; ಅಮಿತ್‌ಗೆ ಐದನೇ ಸ್ಥಾನ: ಪುರುಷರ ಎಫ್‌51 ಕ್ಲಬ್‌ ಥ್ರೊ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಅಮಿತ್‌ ಕುಮಾರ್‌ ಮತ್ತು ಧರಮ್‌ವೀರ್‌ ಅವರು ಕ್ರಮವಾಗಿ ಐದು ಮತ್ತು ಎಂಟನೇ ಸ್ಥಾನ ಗಳಿಸಿದರು.

ಕುಮಾರ್ ಅವರು ಏಷ್ಯನ್ ಪ್ಯಾರಾ ಗೇಮ್ಸ್ ಹಾಲಿ ಚಾಂಪಿಯನ್ ಆಗಿದ್ದಾರೆ.

ಬ್ಯಾಡ್ಮಿಂಟನ್‌: ಪ್ರಮೋದ್‌ಗೆ ಜಯ
ವಿಶ್ವದ ಅಗ್ರಕ್ರಮಾಂಕದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಭಾರತದ ಪ್ರಮೋದ್ ಭಗತ್ ಪ್ಯಾರಾಲಿಂಪಿಕ್ಸ್ ಸಿಂಗಲ್ಸ್ ವಿಭಾಗದಲ್ಲಿ ಗೆಲುವಿನ ಆರಂಭ ಮಾಡಿದರು. ಆದರೆ ಮಿಶ್ರ ಡಬಲ್ಸ್ ವಿಭಾಗದಲ್ಲಿ ನಿರಾಸೆ ಅನುಭವಿಸಿದರು.

ಸಿಂಗಲ್ಸ್ ‘ಎ’ ಕ್ಲಾಸ್‌ ಎಸ್‌ಎಸಲ್‌3 ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು 21-10, 21-23, 21-9ರಿಂದ ಭಾರತದವರೇ ಆದ ಮನೋಜ್ ಸರ್ಕಾರ್ ಎದುರು ಗೆದ್ದರು.

ಮುಂದಿನ ಪಂದ್ಯದಲ್ಲಿ ಅವರು ಉಕ್ರೇನ್‌ನ ಅಲೆಕ್ಸಾಂಡರ್‌ ಚಿರ್ಕೊವ್ ಅವರನ್ನು ಎದುರಿಸುವರು. ಮಹಿಳಾ ಸಿಂಗಲ್ಸ್ ಕ್ಲಾಸ್‌ ಎಸ್‌ಯು5 ವಿಭಾಗದಲ್ಲಿ ಪಲಕ್ ಕೊಹ್ಲಿ ಅವರು 4-21 7-21ರಿಂದ ಜಪಾನ್‌ನ ಆಯಾಕೊ ಸುಜುಕಿ ಎದುರು ಎಡವಿದರು.

ಮಿಶ್ರ ತಂಡ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರಮೋದ್ ಭಗತ್ ಮತ್ತು ಪಲಕ್ ಕೊಹ್ಲಿ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲು ಅನುಭವಿಸಿದರು.

ಎಸ್‌ಎಲ್‌3 –ಎಸ್‌ಯು5 ಕ್ಲಾಸ್‌ ವಿಭಾಗದ ಪಂದ್ಯದಲ್ಲಿ 9-21 21-15 19-21ರಿಂದ ಫ್ರಾನ್ಸ್‌ನ ಎರಡನೇ ಶ್ರೇಯಾಂಕದ ಲೂಕಾಸ್‌ ಮಜುರ್ ಮತ್ತು ಫಾಸ್ಟಿನ್‌ ನೋಯಲ್ ಎದುರು ಭಾರತದ ಜೋಡಿ ಮಣಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು