ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಕ್ಷೇತ್ರದ ಬಹುಕೋಟಿ ವಂಚನೆ ಪ್ರಕರಣದ ವಿಚಾರಣೆ ಆರಂಭ

Last Updated 8 ಜೂನ್ 2020, 13:17 IST
ಅಕ್ಷರ ಗಾತ್ರ

ಪ್ಯಾರಿಸ್: ಉದ್ದೀಪನ ಮದ್ದು ಸೇವನೆಗೆ ಬೆಂಬಲವೂ ಸೇರಿದಂತೆ ಕ್ರೀಡಾಕ್ಷೇತ್ರದಲ್ಲಿ ನಡೆದಿರುವ ಬಹುಕೋಟಿ ವಂಚನೆ ಮತ್ತು ಭ್ರಷ್ಟಾಚಾರ ಪ್ರಕರಣದ ವಿಚಾರಣೆ ಪ್ಯಾರಿಸ್‌ನಲ್ಲಿ ಸೋಮವಾರ ಆರಂಭಗೊಂಡಿದೆ.

2012ರ ಒಲಿಂಪಿಕ್ಸ್‌ಗೂ ಮುನ್ನ ನಡೆದ ಭ್ರಷ್ಟಾಚಾರದಲ್ಲಿ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ ಸಂಸ್ಥೆಯ (ಐಎಎಎಫ್‌) ಮಾಜಿ ಅಧ್ಯಕ್ಷ ಲೆಮೈನ್ ಡಿಯಾಕ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದ್ದು ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವಿಸಿದ್ದನ್ನು ಮುಚ್ಚಿಹಾಕಲು ಕೋಟ್ಯಂತರ ಮೊತ್ತ ಪಡೆದಿರುವುದರ ಬಗ್ಗೆ ನ್ಯಾಯಾಲಯ ಸಾಕ್ಷಿಗಳಿಂದ ಮಾಹಿತಿ ಕಲೆ ಹಾಕಲಿದೆ.

ಐಎಎಎಫ್‌ ಅಧ್ಯಕ್ಷನಾಗಿ 16 ವರ್ಷ ಸೇವೆ ಸಲ್ಲಿಸಿದ್ದ ಲೆಮೈನ್ ಡಿಯಾಕ್ ಅವರನ್ನು ಕೇಂದ್ರೀಕರಿಸಿ ವಿಚಾರಣೆ ನಡೆಯುತ್ತಿದೆ. 87 ವರ್ಷದ ಡಿಯಾಕ್ ಸೋಮವಾರ ನ್ಯಾಯಾಲಯದಲ್ಲಿ ಹಾಜರಿದ್ದರು. ಜನವರಿಯಲ್ಲಿ ವಿಚಾರಣೆ ಆರಂಭವಾಗಬೇಕಾಗಿತ್ತು. ಆದರೆ ಇನ್ನಷ್ಟು, ಹೊಸ ಸಾಕ್ಷಿಗಳನ್ನು ಪುರಾವೆಗಳನ್ನು ಕಲೆ ಹಾಕುವುದಕ್ಕಾಗಿ ಮುಂದೂಡಲಾಗಿತ್ತು.

ಕೊರೊನಾ ಹಾವಳಿಯಿಂದಾಗಿ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಿರುವ ಕಾರಣ ಇಬ್ಬರು ವಕೀಲರಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದ್ದರಿಂದ ಡಿಯಾಕ್‌ ಅವರ ಪುತ್ರ ಪಾಪಾ ಮಸಾಟಾ ಡಿಯಾಕ್ ಅವರ ವಿಚಾರಣೆಯನ್ನು ಮುಂದೂಡಬೇಕು ಎಂದು ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರು ಕೋರಿದರು. ಈ ಮನವಿಯನ್ನು ಮೊದಲು ಪುರಸ್ಕರಿಸಿದರೂ ನಂತರ ನ್ಯಾಯಾಲಯ ತಳ್ಳಿ ಹಾಕಿತು.

ಪಾಪಾ ಮಸಾಟಾ ಸೆನೆಗಲ್‌ನಲ್ಲಿ ನೆಲೆಸಿದ್ದು ಅವರಿಗೆ ಈಗಾಗಲೇ ಫ್ರಾನ್ಸ್‌ನಿಂದ ಅಂತರರಾಷ್ಟ್ರೀಯ ಬಂಧನ ವಾರೆಂಟ್ ನೀಡಲಾಗಿದೆ.

ಐಎಎಎಫ್‌ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಡಿಯಾಕ್ ಅವರು ಒಲಿಂಪಿಕ್ಸ್‌ಗೆ ಸಂಬಂಧಿಸಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದರು. ಆದರೆ ವಿವಾದಗಳ ಹಿನ್ನೆಲೆಯಲ್ಲಿ ಅವರು 2015ರಲ್ಲಿ ಪದತ್ಯಾಗ ಮಾಡಬೇಕಾಯಿತು. ಇದು ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್‌ಗೆ ಕಪ್ಪು ಚುಕ್ಕೆಯಾಗಿತ್ತು. ನಂತರ ಅವರನ್ನು ಫ್ರಾನ್ಸ್‌ನಲ್ಲಿ ಬಂಧಿಸಲಾಯಿತು. ಆರೋಪಿ ಅಥ್ಲೀಟ್‌ಗಳ ರಕ್ಷಣೆಗಾಗಿ ಅವರು ಹಣ ಪಡೆದುಕೊಂಡಿರುವ ವಿಷಯವನ್ನು ನಂತರ ತನಿಖಾಧಿಕಾರಿಗಳು ಬಯಲು ಮಾಡಿದ್ದರು.

₹ 29 ಕೋಟಿ 45 ಲಕ್ಷ ಮೊತ್ತದ ವ್ಯವಹಾರ: ಡಿಯಾಕ್ ಮೇಲೆ ಭ್ರಷ್ಟಾಚಾರ, ಹಣ ಅಕ್ರಮ ವರ್ಗಾವಣೆ ಮತ್ತು ವಂಚನೆ ಪ್ರಕರಣ ದಾಖಲಾಗಿದೆ. ಸುಮಾರು ₹ 29 ಕೋಟಿ 45 ಲಕ್ಷ ಮೊತ್ತವನ್ನು ಅವರು ಅಥ್ಲೀಟ್‌ಗಳಿಂದ ಪಡೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಸೆನೆಗಲ್‌ನ ರಾಜಕೀಯದಲ್ಲಿ ಬಳಸುವುದಕ್ಕಾಗಿ ರಷ್ಯಾದಿಂದ ₹ 11 ಕೋಟಿ ಮೊತ್ತ ಪಡೆದುಕೊಂಡಿದ್ದಾರೆ ಎಂದೂ ಆರೋಪಿಸಲಾಗಿದೆ. 2012ರಲ್ಲಿ ನಡೆದಿದ್ದ ಅಧ್ಯಕ್ಷೀಯ ಮತ್ತು ಶಾಸನ ಸಭೆಯ ಚುನಾವಣೆಯಲ್ಲಿ ಈ ಹಣವನ್ನು ತೊಡಗಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ರಷ್ಯಾದ ಬ್ಯಾಂಕ್‌, ಚೀನಾದ ತೈಲ ಉದ್ಯಮ, ದಕ್ಷಿಣ ಕೊರಿಯಾದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಗನಿಗಾಗಿ ಅವರು ಹಣ ಹೂಡಿದ್ದರು ಎನ್ನಲಾಗಿದೆ. ಅವರ ಸಲಹೆಗಾರ ಹಾಗೂ ವಕೀಲ ಹಬೀಬ್ ಸಿಸ್ ಮತ್ತು ಉದ್ದೀಪನ ಮದ್ದು ಸೇವನೆ ಪರೀಕ್ಷೆ ನಡೆಸಿದ್ದಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್‌ನ ಉದ್ದೀಪನ ಮದ್ದು ತಡೆ ಘಟಕದ ವೈದ್ಯಕೀಯ ವಿಭಾಗದ ಮಾಜಿ ನಿರ್ದೇಶಕ ಗ್ಯಾಬ್ರಿಯೆಲ್ ಡೊಲ್ ಮೇಲೆಯೂ ಭ್ರಷ್ಟಾಚಾರ ಹಗರಣ ಆರೋಪವಿದೆ.

ಐಎಎಎಫ್ ಮಾಜಿ ಖಜಾಂಚಿ ವ್ಯಾಲೆಂಟೀನ್ ಬಲಖ್ನಿಚೆವ್ ಮತ್ತು ಕೋಚ್‌ ಅಲೆಕ್ಸಿ ಮೆಲ್ನಿಕೊವ್ ಕೂಡ ವಿಚಾರಣೆಗೆ ಒಳಗಾಗಬೇಕಾಗಿತ್ತು. ಆದರೆ ಅವರು ಹಾಜರಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT