ಬುಧವಾರ, ಜನವರಿ 22, 2020
24 °C

ಕ್ರೀಡಾಲೋಕದ ದಿಗ್ಗಜ ಮುತ್ತಯ್ಯ ಅಸ್ತಂಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಥ್ಲೆಟಿಕ್ಸ್‌ನಲ್ಲಿ ಅತ್ಯಂತ ಕ್ಲಿಷ್ಟವಾದ ಸ್ಪರ್ಧೆಯೆಂದರೆ ಡೆಕಾಥ್ಲಾನ್. ಆದರೆ ಆ ಕ್ರೀಡೆಯಲ್ಲಿ ಸಾಧನೆ ಮಾಡಿದವರು ಕೋದಂಡ ಮಾದಪ್ಪ ಮುತ್ತಯ್ಯ.

ಕೊಡಗಿನ ಕಲಿ ಮುತ್ತಯ್ಯನವರದ್ದು ಕ್ರೀಡಾಪ್ರೇಮಿಗಳ ಕುಟುಂಬ. ಬಾಲ್ಯದಿಂದಲೂ ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿ ಹೊಂದಿದದವರು. ಜೊತೆಗೆ ವಿದ್ಯಾಭ್ಯಾಸದಲ್ಲಿಯೂ ಉನ್ನತ ಸಾಧನೆ ಮಾಡಿದರು.

1956–60ರ ಅವಧಿಯಲ್ಲಿ ಅವರು ಡೆಕಾಥ್ಲಾನ್‌ನಲ್ಲಿ ಐದು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅವರು ಪದವಿ ವಿದ್ಯಾಭ್ಯಾಸ ಮಾಡಿದ್ದರು. ಬಯೋಮೆಕಾನಿಕ್ಸ್‌ನಲ್ಲಿ ಎಂ.ಎಸ್ಸಿ ಮತ್ತು ಪಿಎಚ್‌ ಡಿಯನ್ನು ಜರ್ಮನಿಯಲ್ಲಿ ಪೂರೈಸಿದ್ದರು. ಆದರೆ, ಕ್ರೀಡಾಲೋಕಕ್ಕೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡರು.

ಭಾರತ ಕ್ರೀಡಾ ಪ್ರಾಧಿಕಾರಕ್ಕೆ ನೇಮಕವಾದ ಅವರು 1960ರಿಂದ ಹದಿನೈದು ವರ್ಷ ಅಥ್ಲೆಟಿಕ್ಸ್‌ ಕೋಚ್ ಆಗಿ ಕಾರ್ಯನಿರ್ವಹಿಸಿದರು. ಏಷ್ಯನ್ ಕೂಟದ ಪದಕ ವಿಜೇತರಾದ ಟಿ.ಸಿ. ಯೋಹಾನನ್ (ಲಾಂಗ್‌ ಜಂಪ್), ವಿ.ಸಿ. ಚೌಹಾಣ್ (ಡೆಕಾಥ್ಲಾನ್) ಕೂಡ ಮುತ್ತಯ್ಯ ಮಾರ್ಗದರ್ಶನದಲ್ಲಿ ಬೆಳೆದ ವರು. ಸುರೇಶ್ ಬಾಬು, ಭೀಮ್ ಸಿಂಗ್ ಮತ್ತು ಲಾಲ್ ಸಿಂಗ್ ಕೂಡ ಅವರ ಗರಡಿಯ ಅಥ್ಲೀಟ್‌ಗಳು.

1970ರಿಂದ 90ರವರೆಗೆ ಕ್ರೀಡಾ ವಿಜ್ಞಾನಿಯಾಗಿ ಮತ್ತು ಆಡಳಿತಗಾರರಾಗಿ ಹೆಸರು ಮಾಡಿದರು. ಪಟಿಯಾಲದ ಎನ್‌ಐಎಸ್‌ ಪ್ರಧಾನ ನಿರ್ದೇಶಕರಾಗಿಯೂ ಅವರು ಮಾಡಿದ ಕಾರ್ಯಗಳನ್ನು ಕ್ರೀಡಾಕ್ಷೇತ್ರವು ಮರೆಯಲು ಸಾಧ್ಯವೇ ಇಲ್ಲ. ಭಾರತದಲ್ಲಿ ಏಷ್ಯನ್ ಗೇಮ್ಸ್‌ ಆಯೋಜನೆಯಲ್ಲಿ ಅವರ ಪಾತ್ರ ಬಹುಮುಖ್ಯವಾಗಿತ್ತು. ಅವರಿಗೆ ಏಷ್ಯಾಡ್ ವಿಶಿಷ್ಟ ಜ್ಯೋತಿ ಚಿನ್ನದ ಪದಕ ಮತ್ತು ರಾಷ್ಟ್ರಪತಿ ಪುರಸ್ಕಾರ ಒಲಿಯಿತು. ಏಷ್ಯನ್ ಅಮೆಚೂರ್ ಅಥ್ಲೆಟಿಕ್ಸ್‌ ಸಂಸ್ಥೆಯ ಚಿನ್ನದ ಪಾರಿತೋಷಕ, ಶ್ರೇಷ್ಠ ಏಷ್ಯನ್ ಕೋಚ್, ಅಂತರರಾಷ್ಟ್ರೀಯ ಕ್ರೀಡಾ ವೈದ್ಯಕೀಯ ಪದಕ ಮತ್ತು ಬರ್ಲಿನ್‌ನ ಲೀಗಾ ಫಾರ್ ಪೀಪಲ್ಸ್‌ ಫ್ರೆಂಡ್‌ಷಿಪ್ ಇಂಟರ್‌ನ್ಯಾಷನಲ್ ಪುರಸ್ಕಾರಗಳು ಒಲಿದಿದ್ದವು.

ಬೆಂಗಳೂರಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ದಕ್ಷಿಣ ಕೇಂದ್ರವು ಆರಂಭವಾಗುವುದರ ಹಿಂದೆ ಮುತ್ತಯ್ಯ ಅವರ ಶ್ರಮ ಪ್ರಮುಖವಾಗಿತ್ತು.

‘ಮುತ್ತಯ್ಯ ಅವರ ವ್ಯಕ್ತಿತ್ವ ಬಹಳ ಅಸಾಧಾರಣವಾದದ್ದು. ಅಥ್ಲೀಟ್,  ಕೋಚ್, ಆಡಳಿತಗಾರ, ಕ್ರೀಡಾ ವಿಜ್ಞಾನಿಯಾಗಿ ಅವರಷ್ಟು ಕೆಲಸ ಮಾಡಿದ ಮತ್ತೊಬ್ಬರನ್ನು ನಾನು ನೋಡಿಯೇ ಇಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ದೊಡ್ಡ ಗೌರವ ಪಡೆದವರು ಅವರು. ಆದರೆ ನಮ್ಮದೇ ದೇಶದಲ್ಲಿ ಅವ ರಿಗೆ ಇದುವರೆಗೆ ಪದ್ಮ ಪ್ರಶಸ್ತಿಯನ್ನು ಕೊಟ್ಟಿಲ್ಲ’ ಎಂದು ಹಿರಿಯ ಕೋಚ್ ಮತ್ತು ಅವರ ಒಡನಾಡಿ ಎಂ.ಆರ್. ಬೀಡು ಬೇಸರ ವ್ಯಕ್ತಪಡಿಸುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು