ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ‘ರಾಜ ಮಾರ್ಗ‘ದಲ್ಲಿ ನಿಹಾಲ್‌ ಹೆಜ್ಜೆ....

2020, ಕೇರಳದ ಚೆಸ್‌ ಚತುರನಿಗೆ ಸ್ಮರಣೀಯ ವರ್ಷ
Last Updated 26 ಡಿಸೆಂಬರ್ 2020, 12:59 IST
ಅಕ್ಷರ ಗಾತ್ರ

ತಮಿಳುನಾಡಿನ ಆರ್‌.ಪ್ರಜ್ಞಾನಂದ, ಡಿ.ಗುಕೇಶ್‌, ಕೇರಳದ ನಿಹಾಲ್‌ ಸರೀನ್, ಮಹರಾಷ್ಟ್ರದ ರೋನಕ್ ಸಾಧ್ವಾನಿ....ಹೀಗೆ ಹದಿಹರೆಯದ ಚೆಸ್ ಪ್ರತಿಭೆಗಳು ಇತ್ತೀಚಿನ ವರ್ಷಗಳಲ್ಲಿ ಅಂತರರಾಷ್ಟ್ರೀಯ ಚೆಸ್‌ನಲ್ಲಿ ಭಾರತದ ಹೆಸರನ್ನು ಬೆಳಗುತ್ತಿದ್ದಾರೆ. ಬೆರಗು ಮೂಡಿಸುವಂತೆ ಇವರೆಲ್ಲಾ 14 ವರ್ಷ ತುಂಬುವ ಮೊದಲೇ ಗ್ರ್ಯಾಂಡ್‌ಮಾಸ್ಟರ್‌ ಪಟ್ಟಕ್ಕೇರಿದವರು. ಮುಂದಿನ ವರ್ಷಗಳಲ್ಲಿ ಭರವಸೆ, ನಿರೀಕ್ಷೆಗಳನ್ನೂ ಈ ಎಳೆಯ ಆಟಗಾರರು ಹುಟ್ಟುಹಾಕಿದ್ದಾರೆ.

ಇವರಲ್ಲಿ ಇತ್ತೀಚಿನ ತಿಂಗಳಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಗೆಲ್ಲುತ್ತಿರುವವನು ಹದಿನಾರರ ಹರೆಯದ ನಿಹಾಲ್‌ ಸರಿನ್‌. ನಾಲ್ಕು ದಿನಗಳ ಹಿಂದಷ್ಟೇ ಆನ್‌ಲೈನ್ ಆಗಿ ನಡೆದ ವಿಶ್ವ 18 ವರ್ಷದೊಳಗಿನವರ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ವಿಜೇತನ ಕಿರೀಟವನ್ನು ತೃಶೂರಿನ ನಿಹಾಲ್‌ ಮುಡಿಗೇರಿಸಿಕೊಂಡಿದ್ದಾರೆ. ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌, ವಿಶ್ವನಾಥನ್‌ ಆನಂದ್‌ ಅವರಿಂದ ಮೆಚ್ಚುಗೆಗೆ ಪಾತ್ರನಾದ ಆಟಗಾರ ಎಂಬ ಹೆಗ್ಗಳಿಕೆ ಈ ಬಾಲಕನದ್ದು.

ವಿಶ್ವ ಯುವ ಚಾಂಪಿಯನ್‌ಷಿಪ್‌ನಲ್ಲಿ ಸರೀನ್‌ ಜೊತೆ ಭಾರತದ ಇನ್ನಿಬ್ಬರು ವಯೋವರ್ಗ ವಿಭಾಗಗಳಲ್ಲಿ ಚಾಂಪಿಯನ್‌ ಆದರು. 14 ವರ್ಷದೊಳಗಿನವರ ವಿಭಾಗದಲ್ಲಿ ಡಿ.ಗುಕೇಶ್‌, 16 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ರಕ್ಷಿತಾ ರವಿ ಸ್ವರ್ಣ ಗೆದ್ದರು. 10 ವರ್ಷದೊಳಗಿನವರ ವಿಭಾಗದಲ್ಲಿ ಮೃಣ್ಮಯಿ ರಾಜಖೋವ ಕಂಚಿನ ಪದಕ ಗೆದ್ದು ಒಟ್ಟಾರೆ ಭಾರತದ ಸಾಧನೆಯನ್ನು ಶ್ರೀಮಂತಗೊಳಿಸಿದರು.

ನಿಹಾಲ್‌, ಫೈನಲ್‌ನಲ್ಲಿ ಅರ್ಮೇನಿಯಾದ ಶಾಂಟ್‌ ಸರ್ಗ್‌ಸ್ಯಾನ್‌ ಅವರನ್ನು ಸೋಲಿಸಿ, 2020 ವರ್ಷವನ್ನು ಸ್ಮರಣೀಯಗೊಳಿಸಿದರು. ಈ ವರ್ಷ (ಇದೂ ಆನ್‌ಲೈನ್‌) ಒಲಿಂಪಿಯಾಡ್‌ನಲ್ಲಿ ರಷ್ಯ ಜೊತೆ ಜಂಟಿಯಾಗಿ ಪ್ರಶಸ್ತಿ ಗೆದ್ದ ಭಾರತ ತಂಡದಲ್ಲಿ ನಿಹಾಲ್‌ ಕೂಡ ಆಡಿದ್ದರು. ಅಕ್ಟೋಬರ್‌ನಲ್ಲಿ ಚೆಸ್‌ ಡಾಟ್ ಕಾಂ ನಡೆಸಿದ್ದ ವಿಶ್ವ ಜೂನಿಯರ್‌ ಸ್ಪೀಡ್‌ ಚೆಸ್‌ನಲ್ಲೂ ವಿಜೇತರಾಗಿದ್ದರು. ಅದೇ ತಿಂಗಳು ಕೇಪ್‌ಚೆಸ್‌ ಆನ್‌ಲೈನ್‌ ಟೂರ್ನಿಯಲ್ಲೂ ಚಾಂಪಿಯನ್‌ ಆಗಿದ್ದರು.

ಪ್ರಸ್ತುತ ಸಾಂಪ್ರದಾಯಿಕ ಶೈಲಿಯ ಆಟದಲ್ಲಿ 2,620ರ ರೇಟಿಂಗ್‌ ಹೊಂದಿರುವ ಈ ಆಟಗಾರ ಬ್ಲಿಟ್ಸ್‌ ಮಾದರಿಯಲ್ಲಿ 2,658ರ ರೇಟಿಂಗ್ ಹೊಂದಿದ್ದಾರೆ. ‘ಹಾಲಿ ವಿಶ್ವದ ಅತ್ಯುತ್ತಮ ಬ್ಲಿಟ್ಜ್‌ ಆಟಗಾರರಲ್ಲಿ ನಿಹಾಲ್‌ ಒಬ್ಬ’ ಎಂದು ಸ್ವತಃ ಬೆನ್ನುತಟ್ಟಿದವರು ಹಾಲಿ ವಿಶ್ವ ಚಾಂಪಿಯನ್‌ ಕಾರ್ಲ್‌ಸನ್‌.

ವೇಗದ ಸಾಧನೆ

ಏಳನೇ ವಯಸ್ಸಿನಲ್ಲಿ, ಬೇಸಿಗೆ ರಜೆಯಲ್ಲಿ ಹೊತ್ತು ಕಳೆಯಲು ನಿಹಾಲ್‌ನಿಗೆ (2004) ಅಜ್ಜ ಚೆಸ್‌ ಕಲಿಸಿಕೊಟ್ಟಿದ್ದರು. ನಂತರದ ಪಯಣ ನಾಗಾಲೋಟದ್ದು.

ಕೇರಳ ಏಳು ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್‌ (2011) ಆಗುವ ಮೂಲಕ ಈ ಪ್ರಯಾಣ ಆರಂಭ. ಹತ್ತು ತುಂಬುವ ಮೊದಲೇ ಕೇರಳ ರಾಜ್ಯ ಸೀನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್‌ ಅಪ್‌. ಚೆನ್ನೈನಲ್ಲಿ ನಡೆದ ರಾಷ್ಟ್ರೀಯ 9 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ (2013). ಒಡಿಶಾದ ಪುರಿಯಲ್ಲಿ ನಡೆದ 11 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ (2014). ಮರು ವರ್ಷ ಪುದುಚೇರಿಯಲ್ಲಿ ನಡೆದ ರಾಷ್ಟ್ರೀಯ ಅಂಡರ್‌ 11 ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ. ಹತ್ತು ವರ್ಷದೊಳಗಿನವರ ಏಷ್ಯನ್‌ ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ ವಿಭಾಗದಲ್ಲಿ ಪ್ರಶಸ್ತಿ.

ಕೇವಲ 12 ವರ್ಷ ಎಂಟು ತಿಂಗಳಿರುವಾಗ ಇಂಟರ್‌ನ್ಯಾಷನಲ್‌ ಮಾಸ್ಟರ್‌ (ಐಎಂ) ಪಟ್ಟ. ಕಾರ್ಲ್‌ಸನ್‌ ಕೂಡ ಇದೇ ವಯಸ್ಸಿನಲ್ಲಿ ಐಎಂ ಆಗಿದ್ದರು.

2014ರಲ್ಲಿ ದಕ್ಷಿಣ ಆಫ್ರಿಕದ ಡರ್ಬನ್‌ನಲ್ಲಿ ನಡೆದ ವಿಶ್ವ 10 ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್‌. ವಿಶ್ವ ಮಟ್ಟದಲ್ಲಿ ಮೊದಲ ಪ್ರಮುಖ ಪ್ರಶಸ್ತಿ. 2018ರ ಆಗಸ್ಟ್‌ನಲ್ಲಿ ಗ್ರ್ಯಾಂಡ್‌ ಮಾಸ್ಟರ್‌ (ಜಿಎಂ) ಪಟ್ಟ. 14 ವರ್ಷದಲ್ಲೇ 2600 ಎಲೊ ರೇಟಿಂಗ್‌ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರ ಎಂಬ ಶ್ರೇಯಸ್ಸು ಈ ಹಾಲುಗಲ್ಲದ ಚತುರನದ್ದು. ವಿಶ್ವ 12 ವರ್ಷದೊಳಗಿನವರ ವಿಭಾಗದಲ್ಲಿ ಬೆಳ್ಳಿಯ ಪದಕ (2015).

ಈ ಪ್ರತಿಭಾವಂತ ಮೊದಲ ಬಾರಿ ಸೂಪರ್‌ ಟೂರ್ನಿ ಆಡಿದ್ದು ‘ಟಾಟಾ ಸ್ಟೀಲ್‌ ರ್‍ಯಾಪಿಡ್‌’ ಟೂರ್ನಿಯ ಮೂಲಕ. ಕೋಲ್ಕತ್ತದಲ್ಲಿ 2018ರಲ್ಲಿ ನಡೆದ ಆ ಟೂರ್ನಿಯಲ್ಲಿ ಗಳಿಸಿದ್ದು ಮೂರೇ ಪಾಯಿಂಟ್‌. ಮೂರು ಪಂದ್ಯಗಳಲ್ಲಿ ಸೋಲು. ಆದರೆ ಆರರಲ್ಲಿ ಡ್ರಾ. ವಿಶ್ವದ ಘಟಾನುಘಟಿ ಆಟಗಾರರ ಎದುರು ಸಾಧಿಸಿದ ‘ಡ್ರಾ’ಗಳಿಂದ ನಿಹಾಲ್‌ ಸಾಮರ್ಥ್ಯ ಅಳೆಯಬಹುದಿತ್ತು. ವಿಶ್ವನಾಥನ್‌ ಆನಂದ್‌, ಶಕ್ರಿಯಾರ್‌ ಮೆಮಡ್ಯರೊವ್‌, ಸೆರ್ಗಿ ಕರ್ಯಾಕಿನ್‌, ಪೆಂಟ್ಯಾಲ ಹರಿಕೃಷ್ಣ, ವಿದಿತ್‌ ಸಂತೋಷ್‌ ಗುಜರಾತಿ, ಸೂರ್ಯಶೇಖರ ಗಂಗೂಲಿ ಸಂಗಡ ಪಾಯಿಂಟ್‌ ಹಂಚಿಕೊಂಡಿದ್ದು ಕಡಿಮೆ ಸಾಧನೆ ಆಗಿರಲಿಲ್ಲ. ಸೋತಿದ್ದು ಹಿಕಾರು ನಕಾಮುರ, ಲೆವೊನ್‌ ಅರೋನಿಯನ್‌ ಮತ್ತು ವೆಸ್ಲಿ ಸೊ ಅಂಥ ಪ್ರಚಂಡರಿಗೆ.

ನಿಹಾಲ್‌ ಸಾಗುತ್ತಿರುವ ಯಶಸ್ಸಿನ ಹಾದಿ ಗಮನ ಸೆಳೆಯುತ್ತಿದೆ. ಭಾರತದಿಂದ ಪುರುಷರ ವಿಭಾಗದಲ್ಲಿ ಎರಡನೇ ವಿಶ್ವ ಚಾಂಪಿಯನ್‌ ಆಗುವರೋ ಎಂಬುದನ್ನು ಈಗಲೇ ಹೇಳಲಾಗದು. ಆದರೆ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟಿರುವುದಂತೂ ದಿಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT