ಶನಿವಾರ, ಜೂನ್ 19, 2021
27 °C

ದುರಂತ ಸಾವು ಕಂಡ ಕೋಬಿ ನೆನೆದು ಟೆನಿಸ್ ಅಂಗಳದಲ್ಲೇ ಕಣ್ಣೀರಾದ ಜೊಕೊವಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಸ್‌ ಏಂಜಲಿಸ್‌: ಹೆಲಿಕಾಪ್ಟರ್ ದುರಂತದಿಂದಾಗಿ ಮೃತಪಟ್ಟ ಅಮೆರಿಕದ ಬಾಸ್ಕೆಟ್‌ಬಾಲ್ ದಿಗ್ಗಜ ಕೋಬಿ ಬ್ರಯಾಂಟ್‌ (41) ಅವರನ್ನು ನೆನೆದು ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಕ್ ಕಣ್ಣೀರು ಹಾಕಿದರು.

ಇಂದು ನಡೆದ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಕೆನಡಾದ ಮಿಲಾಸ್‌ ರಾವೊನಿಕ್‌ ವಿರುದ್ಧ ಜೊಕೊವಿಕ್ 6-4, 6-3, 7-6 ಸೆಟ್‌ನಿಂದ ಗೆದ್ದರು. ಪಂದ್ಯದ ಬಳಿಕ ಜೊಕೊವಿಕ್ ಅವರನ್ನು ಹಿರಿಯ ಟೆನಿಸ್‌ ಆಟಗಾರ ಜಾನ್‌ ಮೆಕ್‌ಎನ್ರಿಯೊ ಸಂದರ್ಶಸಿದರು. ಈ ವೇಳೆ ಅವರು ಹಸಿರು ಜಾಕೆಟ್‌ ತೊಟ್ಟು ಕಾಣಿಸಿಕೊಂಡರು.

ಇದನ್ನೂ ಓದಿ: ಬಾಸ್ಕೆಟ್‌ಬಾಲ್ ದಿಗ್ಗಜ ಬ್ರಯಾಂಟ್ ದುರಂತ ಸಾವು: ಮರುಗಿದ ಕೊಹ್ಲಿ, ರೋಹಿತ್

ಜಾಕೆಟ್‌ ಮೇಲೆ ಕಸೂತಿ ಮೂಲಕ ಕೋಬಿ ಬ್ರಯಾಂಟ್‌ ಹೆಸರನ್ನು ಸೂಚಿಸುವ ಇಂಗ್ಲಿಷ್‌ ಅಕ್ಷರ K B, ಕೋಬಿ ಆಟವಾಡುವಾಗ ಹೊಂದಿದ್ದ ಜೆರ್ಸಿ ಸಂಖ್ಯೆ 8 ಮತ್ತು 24 ಹಾಗೂ ಪ್ರೀತಿಯ ಸಂಕೇತವನ್ನು ಚಿತ್ರಿಸಲಾಗಿತ್ತು.

ಕೋಬಿ ದುರಂತ ಸಾವಿನಿಂದಾಗಿ ಆಘಾತಗೊಂಡಿರುವ ಜೊಕೊವಿಕ್ ಭಾರದ ಮನಸ್ಸಿನಿಂದಲೇ ಮಾತನಾಡಿದರು.

‘ಕೋಬಿ ಸಾರ್ವಕಾಲಿಕ ಶ್ರೇಷ್ಠ ಅಥ್ಲೀಟ್‌ಗಳಲ್ಲಿ ಒಬ್ಬರು. ಅವರು ನನ್ನನ್ನೂ ಸೇರಿದಂತೆ ವಿಶ್ವದ ಸಾಕಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಆತನೊಂದಿಗೆ ವೈಯಕ್ತಿಕ ಸಂಬಂಧ ಹೊಂದಿದ್ದುದು ನನ್ನ ಅದೃಷ್ಟ. ನನಗೆ ಸಲಹೆ, ಸಹಕಾರ ಅಗತ್ಯವಿದ್ದಾಗಲೆಲ್ಲ ನನ್ನೊಟ್ಟಿಗೆ ಇರುತ್ತಿದ್ದ’ ಎಂದು ನೊಂದುಕೊಂಡಿದ್ದಾರೆ.

ಕೆಲಹೊತ್ತು ಸಾವರಿಸಿಕೊಂಡು ಮಾತು ಮುಂದುವರಿಸಿದ ಟೆನಿಸ್‌ ಪಟು, ‘ಆತ ನನ್ನ ಸಲಹೆಗಾರ, ಮಿತ್ರನೂ ಆಗಿದ್ದ. ಕೋಬಿ ಮತ್ತು ಆತನ ಮಗಳಿಗಾದ ದುರಂತ ನಿಜವಾಗಿಯೂ ನನ್ನ ಮನಕಲಕಿದೆ’ ಎಂದು ಗದ್ಗದಿತರಾದರು.

ಇದನ್ನೂ ಓದಿ: ಹೆಲಿಕಾಪ್ಟರ್ ಪತನ: ಬಾಸ್ಕೆಟ್‌ಬಾಲ್ ದಂತಕತೆ ಕೋಬಿ‌ ಬ್ರಯಾಂಟ್ ನಿಧನ

ಕೋಬಿ ಮತ್ತು ಅವರ ಪುತ್ರಿ ಜಿಯಾನಾ (13) ಲಾಸ್‌ ಏಂಜಲಿಸ್‌ನ ಕ್ಯಾಲಿಫೋರ್ನಿಯಾದ ಕ್ಯಾಲಬಾಸಸ್‌ ಬಳಿ ಹೆಲಿಕಾಪ್ಟರ್‌ ಪತನಗೊಂಡು ಭಾನುವಾರ ಮೃತಪಟ್ಟಿದ್ದರು.

ಪೈಲಟ್‌ ಸೇರಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 9 ಮಂದಿ ಮೃತಪಟ್ಟಿದ್ದರು.

ಲಾಸ್‌ ಏಂಜಲಿಸ್‌ ಲೇಕರ್ಸ್‌ ತಂಡಕ್ಕೆ ಆಡುತ್ತಿದ್ದ ಬ್ರಯಾಂಟ್‌ 2016ರಲ್ಲಿ ನಿವೃತ್ತರಾಗಿದ್ದರು. ವೃತ್ತಿ ಜೀವನದ 20 ವರ್ಷವೂ ಒಂದೇ ತಂಡಕ್ಕೆ ಆಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು