ಶನಿವಾರ, ಜೂಲೈ 4, 2020
24 °C
ವಿಜ್ಞಾನಿಗಳು, ವೈದ್ಯರ ಸಲಹೆ ನಿರಾಕರಿಸಿದ ಐಒಸಿ ಸಂಯೋಜಕ ಆಯೋಗದ ಮುಖ್ಯಸ್ಥ

ಒಲಿಂಪಿಕ್ಸ್ ನಡೆಯಬೇಕಾದರೆ ಲಸಿಕೆ ಬೇಡ: ಜಾನ್ ಕೋ‌ಟ್ಸ್

ಎಪಿ Updated:

ಅಕ್ಷರ ಗಾತ್ರ : | |

ಸಿಡ್ನಿ: ಮುಂದೂಡಿರುವ ಒಲಿಂಪಿಕ್ಸ್ ಕೂಟವನ್ನು ನಡೆಸಬೇಕಾದರೆ ಕೋವಿಡ್ ಸೋಂಕಿಗೆ ಲಸಿಕೆ ಕಂಡುಹಿಡಿಯಲೇಬೇಕು ಎಂಬ ವೈದ್ಯರು ಮತ್ತು ವಿಜ್ಞಾನಿಗಳ ಸಲಹೆಯನ್ನು ಟೋಕಿಯೊ ಒಲಿಂಪಿಕ್ಸ್‌ ಸಂಯೋಜನಾ ಆಯೋಗದ ಮುಖ್ಯಸ್ಥ ಜಾನ್ ಕೋ‌ಟ್ಸ್ ಬುಧವಾರ ನಿರಾಕರಿಸಿದ್ದಾರೆ.

‘ಸಲಹೆ ನೀಡಿದ್ದನ್ನು ಗಮನಿಸಿದ್ದೇನೆ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈಗ ನಿಗದಿ ಮಾಡಿರುವಂತೆ ಕೂಟವನ್ನು ಆಯೋಜಿಸಲು ಸಿದ್ಧತೆ ನಡೆಸಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಿಳಿಸಿದೆ. ಅದರ ಪ್ರಕಾರ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ’ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರೂ ಆಗಿರುವ ಆಸ್ಟ್ರೇಲಿಯಾದ ಜಾನ್ ಕೋಟ್ಸ್ ಹೇಳಿದ್ದಾರೆ.

‘ಕೋವಿಡ್‌ಗೆ ಲಸಿಕೆ ಕಂಡುಹಿಡಿಯುವ ಅಗತ್ಯವಿದೆ ನಿಜ. ಆದರೆ ಅದಕ್ಕೂ ಒಲಿಂಪಿಕ್ಸ್‌ಗೂ ಸಂಬಂಧವಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯಿಂದ ಪಡೆಯುವ ಮಾಹಿತಿ ಆಧರಿಸಿ ನಾವು ಮುಂದುವರಿಯುತ್ತಿದ್ದೇವೆ’ ಎಂದು ಅವರು ತಿಳಿಸಿರುವುದಾಗಿ ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

ಜಪಾನ್‌ ವೈದ್ಯಕೀಯ ಸಂಘದ ಅಧ್ಯಕ್ಷ ಯೊಶಿಟಕೆ ಯೊಕೊಕುರ ’ಜಪಾನ್‌ನಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಕೊರೊನಾ ಹಾವಳಿ ನಿಯಂತ್ರಣಕ್ಕೆ ಬಂದರೆ ಮಾತ್ರ 2021ರಲ್ಲಿ ಒಲಿಂಪಿಕ್ಸ್ ಆಯೋಜಿಸಲು ಸಾಧ್ಯ. ಕೋವಿಡ್‌ಗೆ ಲಸಿಕೆ ಕಂಡುಹಿಡಿದರೆ ಮಾತ್ರ ನಿಯಂತ್ರಣವಾಗಲಿದೆ’ ಎಂದು ಮಂಗಳವಾರ ಅಭಿಪ್ರಾಯಪಟ್ಟಿದ್ದರು.

ಎಡಿನ್‌ಬರೊ ವಿಶ್ವವಿದ್ಯಾಲಯದ ಜಾಗತಿಕ ಆರೋಗ್ಯ ವಿಭಾಗದ ಪ್ರಾಧ್ಯಾಪಕ ದೇವಿ ಶ್ರೀಧರ್‌ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜಾನ್ಸ್ ಹಾಪ್‌ಕಿನ್ಸ್ ವಿವಿ ಬುಧವಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಜಪಾನ್‌ನಲ್ಲಿ ಈ ವರೆಗೆ 13700 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು 349 ಮಂದಿ ಸಾವಿಗೀಡಾಗಿದ್ದಾರೆ.

ಕೊರೊನಾ ಆತಂಕದ ನಡುವೆಯೇ ಒಲಿಂಪಿಕ್ಸ್ ನಡೆಸುವುದಾದರೂ ಹೇಗೆ ಎಂಬುದನ್ನು ಕೋಟ್ಸ್ ವಿವರಿಸಲಿಲ್ಲ. ಕೂಟ ನಡೆದರೆ 200ಕ್ಕೂ ಹೆಚ್ಚು ರಾಷ್ಟ್ರಗಳಿಂದ 11 ಸಾವಿರ ಕ್ರೀಡಾಪಟುಗಳು, 4,400 ಪ್ಯಾರಾಲಿಂಪಿಯನ್‌ಗಳು ಜಪಾನ್‌ಗೆ ಬರಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ನೆರವು ಸಿಬ್ಬಂದಿ, ತಾಂತ್ರಿಕ ಅಧಿಕಾರಿಗಳು ಕೂಡ ಇರುತ್ತಾರೆ. ವೈರಸ್ ಹರಡದಂತೆ ಅವರನ್ನು ಸುರಕ್ಷಿತವಾಗಿಡುವುದು ಆಯೋಜಕರಿಗೆ ಸವಾಲಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು