ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಕಿಯೊಳಗೊಬ್ಬ ಕ್ರೀಡಾಪಟು!

Last Updated 18 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಪೊಲೀಸ್ ಇಲಾಖೆಯ ಸಿ.ಎ.ಆರ್ ಉತ್ತರ ವಿಭಾಗದಲ್ಲಿ ಜಿಮ್‌ ಇನ್‌ಸ್ಟ್ರಕ್ಟರ್‌ ಆಗಿರುವ ನವೀನ್‌ ಶೆಟ್ಟಿ ಅವರು ಗುಜರಾತ್‌ನ ವಡೋದರದಲ್ಲಿ ಈಚೆಗೆ ಜರುಗಿದ 3 ನೇ ನ್ಯಾಷನಲ್ ಮಾಸ್ಟರ್ಸ್ ಗೇಮ್ಸ್‌ನಲ್ಲಿ ಕರ್ನಾಟಕ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿದ್ದರು. ತಂಡ ಚಿನ್ನದ ಪದಕ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನುವುದು ವಿಶೇಷ.

ನವೆಂಬರ್‌ನಲ್ಲಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ಜರುಗುವ ‘ಪಾನ್ ಫೆಸಿಫಿಕ್ ಮಾಸ್ಟರ್ ಗೇಮ್ಸ್- 2020’ ಮತ್ತು ಜಪಾನ್‌ನಲ್ಲಿ ನಡೆಯಲಿರುವ ‘ವರ್ಲ್ಡ್ ಮಾಸ್ಟರ್ಸ್ ಚಾಂಪಿಯನ್‌ಶಿಪ್‌’ಗೂ ಅವರು ಆಯ್ಕೆಯಾಗಿದ್ದಾರೆ. ಈಚೆಗೆ ಆಂಧ್ರ ಪ್ರದೇಶದಲ್ಲಿ ನಡೆದ ಜ್ಯೂನಿಯರ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.

ಉಡುಪಿ ಬ್ರಹ್ಮಾವರದ ನವೀನ್‌ 15 ವರ್ಷಗಳಿಂದ ಪೊಲೀಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸ್‌ ಕಾನ್‌ಸ್ಟೇಬಲ್‌ ಆಗಿ ವೃತ್ತಿ ಆರಂಭಿಸಿದ ಅವರು ಸದ್ಯ ಪೊಲೀಸ್ ಇಲಾಖೆಯ ಸಿ.ಎ.ಆರ್ (ಉತ್ತರ) ವಿಭಾಗದಲ್ಲಿ ಜಿಮ್‌ ಇನ್‌ಸ್ಟ್ರಕ್ಟರ್‌ ಆಗಿದ್ದಾರೆ.

ನವೀನ್ ಶೆಟ್ಟಿ ಅಥ್ಲೆಟಿಕ್ಸ್‌, ಚೆಸ್‌, ಹ್ಯಾಂಡ್‌ಬಾಲ್‌, ಕ್ರಿಕೆಟ್‌ ಸೇರಿದಂತೆ ಕ್ರೀಡೆಗಳಲ್ಲಿ ಸಣ್ಣವಯಸ್ಸಿನಿಂದಲೂ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಪೊಲೀಸ್‌ ಇಲಾಖೆ ಸೇರಿದ ಬಳಿಕ ಅವರ ಆಸಕ್ತಿಗೆ ಹೆಚ್ಚು ಪ್ರೋತ್ಸಾಹವೂ ದೊರೆಯಿತು. ಕರ್ನಾಟಕ ಸ್ಟೇಟ್‌ ಪೊಲೀಸ್‌ ಸ್ಪೋರ್ಟ್ಸ್‌ ಪ್ರಮೋಷನ್‌ ಬೋರ್ಡ್‌, ನವೀನ್‌ ಅವರ ವಾಲಿಬಾಲ್‌ ಆಸಕ್ತಿ ಗುರುತಿಸಿ ಬೋರ್ಡ್‌ ತಂಡಕ್ಕೆ ಆಯ್ಕೆ ಮಾಡಿತು.

ಆರಂಭದ ತರಬೇತಿ ಅವಧಿಯಲ್ಲಿ ಸ್ಪೆಷಲ್‌ ಯುನಿಟ್‌ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ ವಿಭಾಗದಲ್ಲಿ 5 ಚಿನ್ನದ ಪದಕ ಪಡೆದ ನವೀನ್‌, ಪಂಜಾಬ್‌ನಲ್ಲಿ ನಡೆದ 57ನೇ ಅಖಿಲ ಭಾರತ ಪೊಲೀಸ್‌ ಕ್ರೀಡಾಕೂಟದಲ್ಲಿ ಮೊದಲ ಬಾರಿ ಕಂಚಿನ ಪದಕ ಪಡೆದರು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶವೂ ದೊರೆಯಿತು.

ರಾಷ್ಟ್ರಮಟ್ಟದ ವಾಲಿಬಾಲ್‌ ಪಂದ್ಯಗಳಲ್ಲಿ ಮೂರು ಬಾರಿ ಚಿನ್ನದ ಪದಕ ಪಡೆದ ಖುಷಿ ಅವರದು. ಅವರ ಕ್ರೀಡಾ ಜೀವನದಲ್ಲಿ ಇಲ್ಲಿಯವರೆಗೂ 14 ಚಿನ್ನದ ಪದಕ, 8 ಬೆಳ್ಳಿ ಪದಕ ಹಾಗೂ 6ಕ್ಕೂ ಹೆಚ್ಚು ಕಂಚಿನ ಪದಕ ಪಡೆದಿದ್ದಾರೆ.

ಮದುರೆ, ಒಡಿಶಾ, ಮೊರಾದಾಬಾದ್‌, ಕೇರಳ ಸೇರಿದಂತೆ ದೇಶದ ಬೇರೆ ಭಾಗಗಳಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ. ‘ಕರ್ನಾಟಕ ರಾಜ್ಯದ ಬೆಸ್ಟ್‌ ಬ್ಲಾಕರ್‌’ ಹಾಗೂ ‘ಫಾಸ್ಟೆಸ್ಟ್‌ ಶಾರ್ಟ್‌ ಪಾಸ್‌ ಅಟ್ಯಾಕರ್‌’ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ.

ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಸಂದರ್ಭಗಳಲ್ಲಿ ಅನೇಕ ಬಾರಿ ಹಿಮ್ಮಡಿಗಂಟಿನ ನೋವಿಗೆ ಒಳಗಾಗಿ ದ್ದಾರೆ. ನೋವಿನಲ್ಲೂ ಕರ್ನಾಟಕ ಸ್ಟೇಟ್‌ ಪೊಲೀಸ್‌ ತಂಡಕ್ಕಾಗಿ ಆಡಿದ ಅವರ ಶ್ರದ್ಧೆಗೆ ಅನೇಕ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT