ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Paralympics: ಮನೀಷ್‌–ಪ್ರಮೋದ್ ಚಿನ್ನದ ಆಮೋದ

ಶೂಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಸಿಂಘರಾಜ್; ಬ್ಯಾಡ್ಮಿಂಟನ್‌ನಲ್ಲಿ ಮನೋಜ್‌ಗೆ ಕಂಚಿನ ಪದಕ
Last Updated 4 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಟೋಕಿಯೊ: ಬೆಳಿಗ್ಗೆ ಶೂಟಿಂಗ್‌ನಲ್ಲಿ, ಸಂಜೆ ಬ್ಯಾಡ್ಮಿಂಟನ್‌ನಲ್ಲಿ ಪದಕಗಳ ಸಂಭ್ರಮ. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಅಮೋಘ ಸಾಧನೆ ಶನಿವಾರವೂ ಮುಂದುವರಿಯಿತು. ಶೂಟಿಂಗ್‌ನಲ್ಲಿ ಮನೀಷ್‌ ನರ್ವಾಲ್‌ ದಾಖಲೆ ಬರೆದು ಚಿನ್ನ ಗೆದ್ದುಕೊಂಡರೆ ಬ್ಯಾಡ್ಮಿಂಟನ್‌ನಲ್ಲಿ ಪ್ರಮೋದ್ ಭಗತ್ ಐತಿಹಾಸಿಕ ಚಿನ್ನಕ್ಕೆ ಮುತ್ತು ನೀಡಿದರು.

ಶೂಟಿಂಗ್‌ನ ಎಸ್‌ಎಚ್‌–1 ವಿಭಾಗದ ಮಿಶ್ರ 50 ಮೀಟರ್ಸ್ ಪಿಸ್ತೂಲ್‌ ಸ್ಪರ್ಧೆಯಲ್ಲಿ ಮನೀಷ್ ನರ್ವಾಲ್218.2 ಸ್ಕೋರು ಸಂಪಾದಿಸಿ ಚಿನ್ನ ಗೆದ್ದರೆ ಸಿಂಘರಾಜ್ ಅಡಾನ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಬ್ಯಾಡ್ಮಿಂಟನ್‌ನ ಕಂಚಿನ ಪದಕ ಮನೋಜ್ ಸರ್ಕಾರ್ ಪಾಲಾಯಿತು.

ಶೂಟಿಂಗ್‌ನ ಎಸ್‌ಎಚ್‌–1 ವಿಭಾಗದಲ್ಲಿ ವಿಶ್ವ ದಾಖಲೆಯನ್ನು ಹೊಂದಿರುವ 19 ವರ್ಷದ ಮನೀಷ್‌ ಪ್ಯಾರಾಲಿಂಪಿಕ್ ದಾಖಲೆಯನ್ನೂ ತಮ್ಮದಾಗಿಸಿಕೊಂಡರು. ಪ್ಯಾರಾಲಿಂಪಿಕ್ಸ್‌ನಲ್ಲಿ ಇದು ಅವರ ಚೊಚ್ಚಲ ಸ್ಪರ್ಧೆಯಾಗಿದೆ.

ಚಿಕ್ಕಂದಿನಿಂದಲೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಮನೀಷ್ ಫುಟ್‌ಬಾಲ್ ಆಟಗಾರನಾಗುವ ಆಸೆ ಹೊಂದಿದ್ದರು. ಆದರೆ ಬಲಗಾಲಿನಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ಕನಸು ನನಸಾಗಲಿಲ್ಲ. ತಂದೆ ಕುಸ್ತಿಪಟು ಆಗಿದ್ದರು. ಮಗನನ್ನು ಹೇಗಾದರೂ ಮಾಡಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದುಕೊಂಡಿದ್ದ ಅವರು ಗೆಳೆಯನೊಬ್ಬನ ಸಲಹೆಯಂತೆ ವಲ್ಲಭನಗರದಲ್ಲಿ ರಾಕೇಶ್ ಠಾಕೂರ್ ಅವರ ಶೂಟಿಂಗ್‌ ರೇಂಜ್‌ಗೆ ಕರೆದುಕೊಂಡು ಹೋದರು. ಅಲ್ಲಿಂದ ಅವರ ಬದುಕಿನ ಗತಿ ಬದಲಾಯಿತು.

ಕೋಚ್ ಜಯಪ್ರಕಾಶ್‌ ನೌತಿಯಾಲ್ ಬಳಿ ತರಬೇತಿಗೆ ಸೇರಿದ ನಂತರ ಇನ್ನಷ್ಟು ಪ್ರೌಢಿಮೆ ಬೆಳೆಸಿಕೊಂಡರು. 2017ರಲ್ಲಿ ಬ್ಯಾಂಕಾಕ್‌ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದರು. ಮುಂದಿನ ವರ್ಷ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಅವರದಾಯಿತು.

ಭಾರತಕ್ಕೆ ‘ಮೊದಲ’ ಚಿನ್ನ
ವಿಶ್ವ ಚಾಂಪಿಯನ್ ಮತ್ತು ಏಷ್ಯನ್ ಚಾಂಪಿಯನ್ ಆಗಿರುವ ಪ್ರಮೋದ್ ಭಗತ್‌ ಫೈನಲ್‌ನಲ್ಲಿ ಬ್ರಿಟನ್‌ನ ಡ್ಯಾನಿಯಲ್ ಬೆತೆಲ್ ವಿರುದ್ಧ ನೇರ ಗೇಮ್‌ಗಳ ಗೆಲುವು ಸಾಧಿಸಿದರು. ಇದು, ಒಲಿಂಪಿಕ್ಸ್‌ ಅಥವಾ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ ಮೊದಲ ಚಿನ್ನವಾಗಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಈ ಕ್ರೀಡೆಯನ್ನು ಇದೇ ಮೊದಲ ಬಾರಿ ಸೇರಿಸಲಾಗಿದೆ.

ನಾಲ್ಕನೇ ವಯಸ್ಸಿನಲ್ಲಿ ಪೋಲಿಯೊ ಪೀಡಿತರಾದ ಪ್ರಮೋದ್ ನೆರೆಮನೆಯ ಮಕ್ಕಳು ಆಡುತ್ತಿದ್ದುದನ್ನು ಕಂಡು ಈ ಆಟದ ಮೇಲೆ ಆಸಕ್ತಿ ಹೊಂದಿದ್ದರು. ಅಂಗವೈಕಲ್ಯ ಇಲ್ಲದವರೊಂದಿಗೆ ಆರಂಭದಲ್ಲಿ ಆಡುತ್ತಿದ್ದ ಅವರು 2006ರಲ್ಲಿ ಪ್ಯಾರಾ ಅಥ್ಲೆಟಿಕ್ಸ್‌ ಕಡೆಗೆ ಹೊರಳಿದ್ದರು. ಬ್ಯಾಡ್ಮಿಂಟನ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದ ಅವರು ಟೋಕಿಯೊ ಪ್ಯಾರಾಲಿಂಪಿಕ್ಸ್‌ ದೃಷ್ಟಿಯಿಂದ 2019ರಿಂದ ಆಟದ ಮೇಲಷ್ಟೇ ಗಮನ ಕೇಂದ್ರೀಕರಿಸಿದರು.

ಅಡಾನಗೆ ಡಬಲ್‌ ಸಂಭ್ರಮ
ಎಸ್‌ಎಚ್‌–1 ವಿಭಾಗದ 10 ಮೀಟರ್ಸ್ ಏರ್ ಪಿಸ್ತೂಲು ವಿಭಾಗದಲ್ಲಿ ಎರಡು ದಿನಗಳ ಹಿಂದೆ ಕಂಚಿನ ಪದಕ ಗೆದ್ದಿದ್ದ 39 ವರ್ಷದ ಸಿಂಘರಾಜ್ ಅಡಾನ 216.7 ಸ್ಕೋರು ಗಳಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಪೋಲಿಯೊದಿಂದಾಗಿ ಸೊಂಟದ ಕೆಳಭಾಗದಲ್ಲಿ ಬಲ ಕಳೆದುಕೊಂಡಿರುವ ಅವರು 40 ಕಿಲೋಮೀಟರ್ ದೂರದ ಶೂಟಿಂಗ್ ರೇಂಜ್‌ಗೆ ಹೋಗಿ ಅಭ್ಯಾಸ ಮಾಡುತ್ತಿದ್ದರು. ಫರಿದಾಬಾದ್‌ನ ಬಡ ಕುಟುಂಬವೊಂದರ ಕುಡಿಯಾಗಿರುವ ಅವರ ಅಜ್ಜ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಅಣ್ಣಂದಿರ ಸೋಲೇ ಗೆಲುವಿನ ಸೋಪಾನ
31 ವರ್ಷದ ಮನೋಜ್ ಸರ್ಕಾರ್ ಒಂದನೇ ವಯಸ್ಸಿನಿಂದಲೇ ಪೋಲಿಯೊ ಬಾಧಿತರಾಗಿ ಕಾಲಿನ ಸ್ವಾದೀನ ಕಳೆದುಕೊಂಡಿದ್ದರು. ಐದನೇ ವಯಸ್ಸಿನಿಂದ ಬ್ಯಾಡ್ಮಿಂಟನ್ ಆಡಲು ಆರಂಭಿಸಿದರು. ಹಿರಿಯ ಸಹೋದರರನ್ನು ಪ್ರತಿ ಬಾರಿಯೂ ಸೋಲಿಸಿ ಸಂಭ್ರಮಿಸುತ್ತಿದ್ದ ಅವರು ಅದರಿಂದ ಹುರುಪುಗೊಂಡು ಈ ಕ್ರೀಡೆಯನ್ನು ಗಂಭೀರವಾಗಿ ಅಭ್ಯಾಸ ಮಾಡತೊಡಗಿದರು. ಅಂಗವೈಕಲ್ಯ ಇಲ್ಲದವರ ಜೊತೆ 11ನೇ ತರಗತಿ ವರೆಗೆ ಅಂತರ ಶಾಲಾ ಟೂರ್ನಿಗಳಲ್ಲಿ ಆಡುತ್ತಿದ್ದರು. ನಂತರ ಪ್ಯಾರಾ ಬ್ಯಾಡ್ಮಿಂಟನ್ ಆಡಲು ಶುರು ಮಾಡಿದರು. 2016ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು.

–ಮನೋಜ್ ಸರ್ಕಾರ್
–ಮನೋಜ್ ಸರ್ಕಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT