ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣಯ್ ಪರಾಕ್ರಮ: ಕ್ರಿಸ್ಟಿಗೆ ಆಘಾತ

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಹಿಂದೆ ಸರಿದ ಶ್ರೀಕಾಂತ್‌
Last Updated 20 ಜನವರಿ 2021, 13:08 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ನೋವಿನ ನಡುವೆಯೂ ದಿಟ್ಟ ಆಟವಾಡಿದ ಭಾರತದ ಎಚ್‌.ಎಸ್‌.ಪ್ರಣಯ್, ಟೊಯೊಟಾ ಥಾಯ್ಲೆಂಡ್ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿಗೆ ಲಗ್ಗೆಯಿಟ್ಟರು. ಅವರು ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ 18–21, 21–16, 23–11ರಿಂದ ಏಷ್ಯನ್ ಗೇಮ್ಸ್ ಚಾಂಪಿಯನ್‌, ಇಂಡೊನೇಷ್ಯಾದ ಜೋನಾಥನ್ ಕ್ರಿಸ್ಟಿ ಅವರಿಗೆ ಆಘಾತ ನೀಡಿದರು.

ಪಕ್ಕೆಲುಬು ಹಾಗೂ ಭುಜದ ನೋವು ಪ್ರಣಯ್ ಅವರನ್ನು ಕಾಡಿದವು. ಆದರೆ ಇದಾವುದಕ್ಕೂ ಜಗ್ಗದ ಭಾರತದ ಆಟಗಾರ, ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಕ್ರಿಸ್ಟಿ ಎದುರು ಮೊದಲ ಗೇಮ್‌ನಲ್ಲಿ ಸೋತರೂ ಒಂದು ತಾಸು 15 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಜಯದ ನಗೆ ಬೀರಿದರು.

ಕ್ರಿಸ್ಟಿ ಎದುರು ಆಡಿದ ನಾಲ್ಕು ಪಂದ್ಯಗಳಲ್ಲಿ ಮೊದಲ ಬಾರಿ ಪ್ರಣಯ್‌ ಅವರಿಗೆ ಜಯ ಒಲಿದಿದೆ.

ಕೇರಳದ 28 ವರ್ಷದ ಆಟಗಾರ ಹೋದ ವರ್ಷದ ನವೆಂಬರ್‌ನಲ್ಲಿ ಕೋವಿಡ್‌–19 ಪಿಡುಗಿನಿಂದ ಬಳಲಿದ್ದರು.

ಕಳೆದ ವಾರ ಯೋನೆಕ್ಸ್ ಥಾಯ್ಲೆಂಡ್ ಓಪನ್ ಟೂರ್ನಿಯಲ್ಲಿ ಪ್ರಣಯ್, ಮಲೇಷ್ಯಾದ ಲೀ ಜೀ ಜಿಯಾ ಎದುರು ಸೋತಿದ್ದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮಾ ಹಾಗೂ ಪ್ರಣಯ್ ಭಾರತದ ಸವಾಲು ಮುನ್ನಡೆಸುತ್ತಿದ್ದಾರೆ.

ಪ್ರಣೀತ್‌ಗೆ ಕೋವಿಡ್‌; ಹಿಂದೆ ಸರಿದ ಶ್ರೀಕಾಂತ್‌: ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಬಿ.ಸಾಯಿ ಪ್ರಣೀತ್ ಅವರಿಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ. ಹೀಗಾಗಿ ಪ್ರಣೀತ್ ಹಾಗೂ ಅವರ ಜೊತೆ ಕೋಣೆ ಹಂಚಿಕೊಂಡಿದ್ದ ಕಿದಂಬಿ ಶ್ರೀಕಾಂತ್ ಟೂರ್ನಿಯಿಂದ ಹಿಂದೆ ಸರಿಯಬೇಕಾಗಿದೆ.

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಶ್ರೀಕಾಂತ್ 21–11, 21–11ರಿಂದ ಥಾಯ್ಲೆಂಡ್‌ನ ಸಿತ್ತಿಕೋಮ್‌ ಥಮ್ಮಾಸಿನ್ ಅವರ ಸವಾಲು ಮೀರಿದ್ದರು.

ಪುರುಷರ ಡಬಲ್ಸ್ ವಿಭಾಗದಲ್ಲಿ ಎಂ.ಆರ್. ಅರ್ಜುನ– ಧೃವ ಕಪಿಲ ಜೋಡಿಯು 23–21, 21–17ರಿಂದ ನ್ಯೂಜಿಲೆಂಡ್‌ನ ಲೇಡಾನ್‌ ಡೇವಿಸ್‌– ಅಭಿನವ್ ಮನೋಟಾ ಎದುರು ಗೆದ್ದು ಎರಡನೇ ಸುತ್ತು ಪ್ರವೇಶಿಸಿದರು. ಆದರೆ ಮಹಿಳಾ ಡಬಲ್ಸ್ ವಿಭಾಗದಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ–ಎನ್‌ ಸಿಕ್ಕಿರೆಡ್ಡಿ ಜೋಡಿಯು 11–21, 19–21ರಿಂದ ಜರ್ಮನಿಯ ಲಿಂಡಾ ಈಫ್ಲರ್‌– ಇಸಾಬೆಲ್‌ ಹರ್ಟಿಚ್‌ ಅಚರ ಎದುರು ಸೋತು ನಿರ್ಗಮಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT