ಶುಕ್ರವಾರ, ಜುಲೈ 1, 2022
27 °C
ಪ್ರೊ ಕಬಡ್ಡಿ ಲೀಗ್: ಪಟ್ನಾ ಪೈರೇಟ್ಸ್‍ಗೆ ನಿರಾಸೆ; ಜೋಗಿಂದರ್ ಬಳಗಕ್ಕೆ ರೋಚಕ ಜಯ

ಪ್ರೊ ಕಬಡ್ಡಿ ಲೀಗ್: ದಬಂಗ್ ಡೆಲ್ಲಿ ಚಾಂಪಿಯನ್

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

 ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ದಬಂಗ್ ಡೆಲ್ಲಿ ತಂಡ.

ಬೆಂಗಳೂರು: ರೋಚಕ ಹಣಾಹಣಿಯಲ್ಲಿ ಮೂರು ಬಾರಿಯ ಚಾಂಪಿಯನ್ ಪಟ್ನಾ ಪೈರೇಟ್ಸ್ ತಂಡವನ್ನು ಮಣಿಸಿದ ದಬಂಗ್ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್‍ನ ಎಂಟನೇ ಆವೃತ್ತಿಯ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.

ವೈಟ್‌ಫೀಲ್ಡ್‌ನಲ್ಲಿರುವ ಹೋಟೆಲ್ ಶೆರಟನ್ ಗ್ರ್ಯಾಂಡ್‍ನಲ್ಲಿ ಶುಕ್ರವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ 37-36ರಲ್ಲಿ ಜಯ ಗಳಿಸಿತು.

ಉಭಯ ತಂಡಗಳು ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದವು. ಟ್ಯಾಕ್ಲಿಂಗ್ ಮಾಡಿ ಅಪಾಯಕ್ಕೆ ಸಿಲುಕಲು ಮುಂದಾಗದ ತಂಡಗಳು ರೇಡಿಂಗ್ ಮೂಲಕವೇ ಪಾಯಿಂಟ್‍ಗಳನ್ನು ಗಳಿಸುತ್ತ ಸಾಗಿದವು. ಡೆಲ್ಲಿ ಪರವಾಗಿ ‘ಎಕ್ಸ್‌ಪ್ರೆಸ್’ ಖ್ಯಾತಿಯ ನವೀನ್ ಪದೇ ಪದೇ ಎದುರಾಳಿ ಪಾಳಯಕ್ಕೆ ನುಗ್ಗಿ ಪಾಯಿಂಟ್‍ಗಳೊಂದಿಗೆ ವಾಪಸಾದರು.

ಪಟ್ನಾ ತಂಡವು ಸಚಿನ್, ಗುಮಾನ್ ಸಿಂಗ್ ಮತ್ತು ಪ್ರಶಾಂತ್ ರೈ ಮೂಲಕ ಪಾಯಿಂಟ್‍ಗಳನ್ನು ಗಳಿಸಿತು. ಹೀಗಾಗಿ 3-3, 4-4 ಮತ್ತು 5-5ರಲ್ಲಿ ಪಂದ್ಯ ಸಾಗಿತು.

ಈ ಸಂದರ್ಭದಲ್ಲಿ ಇರಾನ್ ಆಟಗಾರ ಮೊಹಮ್ಮದ್ರೇಜಾ ಚಿಯಾನೆ ಅವರು ನವೀನ್ ಅವರನ್ನು ಟ್ಯಾಕಲ್ ಮಾಡಿ ಪಂದ್ಯಕ್ಕೆ ತಿರುವು ನೀಡಿದರು. ಅಲ್ಲಿಂದ ಡೆಲ್ಲಿ ಪಾಳಯ ಖಾಲಿಯಾಗುತ್ತ ಸಾಗಿತು. 11ನೇ ನಿಮಿಷದಲ್ಲಿ ಕಣದಲ್ಲಿ ಉಳಿದಿದ್ದ ಏಕೈಕ ಆಟಗಾರ ಸಂದೀಪ್ ನರ್ವಾಲ್ ರೇಡಿಂಗ್ ವೇಳೆ ಸ್ವತಃ ಪ್ರಮಾದ ಎಸಗಿ ಹೊರಹೋದರು. ಆಲ್‍ಔಟ್ ಆದ ಡೆಲ್ಲಿ 9-12ರ ಹಿನ್ನಡೆಗೆ ಒಳಗಾಯಿತು. ನಂತರ ಚೇತರಿಸಿಕೊಂಡ ತಂಡ ಪ್ರಥಾಮಾರ್ಧದ ಮುಕ್ತಾಯಕ್ಕೆ ಹಿನ್ನಡೆಯನ್ನು 15-17ಕ್ಕೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಜಿದ್ದಾಜಿದ್ದಿಯ ಹೋರಾಟ

ದ್ವಿತೀಯಾರ್ಧದಲ್ಲಿ ಜಿದ್ದಾಜಿದ್ದಿಯ ಹೋರಾಟ ಕಂಡುಬಂತು. ನವೀನ್ ಕುಮಾರ್ ಅವರನ್ನು ಟ್ಯಾಕ್ಲಿಂಗ್ ಬಲೆಯಲ್ಲಿ ಸಿಲುಕಿಸಿ ಸಂಭ್ರಮಿಸಿದ ಸಚಿನ್, ಪಟ್ನಾದ ಮುನ್ನಡೆ ಹೆಚ್ಚಿಸಿದರು. ಮರುಕ್ಷಣದಲ್ಲಿ ಸಚಿನ್ ಅವರನ್ನು ಬಲೆಗೆ ಬೀಳಿಸಿ ಡೆಲ್ಲಿ ಸೇಡು ತೀರಿಸಿಕೊಂಡಿತು. ಆಲೌಟ್‍ನ ಆತಂಕದಲ್ಲಿದ್ದಾಗ ಎರಡು ಟಚ್ ಪಾಯಿಂಟ್‍ಗಳೊಂದಿಗೆ ಸಚಿನ್ ಮಿಂಚಿದರೆ ನವೀನ್ ಅವರನ್ನು ಟ್ಯಾಕಲ್ ಮಾಡಿ ತಂಡ ಬಲ ವೃದ್ಧಿಸಿಕೊಂಡಿತು.

ಆದರೂ ಡೆಲ್ಲಿ ಪಟ್ಟುಬಿಡಲಿಲ್ಲ ಪಂದ್ಯ ಮುಕ್ತಾಯಕ್ಕೆ 10 ನಿಮಿಷ ಇರುವಾಗ ಸ್ಕೋರು 24-24ರಲ್ಲಿ ಸಮ ಆಯಿತು. ನವೀನ್ ಮೂಲಕ ಒಂದೊಂದೇ ಪಾಯಿಂಟ್ ಹೆಕ್ಕಿದ ಡೆಲ್ಲಿ 34ನೇ ನಿಮಿಷದಲ್ಲಿ ನೀರಜ್ ಅವರನ್ನು ಹಿಡಿದುರುಳಿಸಿ ಪಟ್ನಾ ಅಂಗಣವನ್ನು ಖಾಲಿ ಮಾಡಿತು. 32-29ರ ಮುನ್ನಡೆಯನ್ನೂ ಗಳಿಸಿತು. ನವೀನ್ (13 ಪಾಯಿಂಟ್ಸ್) ಮತ್ತು ಆಲ್‍ರೌಂಡರ್ ವಿಜಯ್ (14 ಪಾಯಿಂಟ್ಸ್) ಎಚ್ಚರಿಕೆಯ ಆಟದ ಮೂಲಕ ಮುನ್ನಡೆ ಉಳಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು