ಭಾನುವಾರ, ಜನವರಿ 24, 2021
28 °C

PV Web Exclusive: ಡಕಾರ್‌ ದುರಂತಗಳ ಬೆನ್ನತ್ತಿ...

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಜಗತ್ತಿನ ಯಾವುದೇ ಮೋಟರ್‌ ಬೈಕ್‌, ಕಾರು ಹಾಗೂ ಟ್ರಕ್‌ ಸಾಹಸಿಯನ್ನು ಸಂದರ್ಶಿಸುವಾಗ ‘ನಿಮ್ಮ ಬದುಕಿನ ಬಹುದೊಡ್ಡ ಕನಸು ಯಾವುದು?’ ಎಂಬ ಪ್ರಶ್ನೆ ಮುಂದಿಟ್ಟರೆ ‘ಒಮ್ಮೆಯಾದರೂ ಡಕಾರ್‌ ರ‍್ಯಾಲಿಯಲ್ಲಿ ಪಾಲ್ಗೊಳ್ಳಬೇಕು’ ಎಂಬ ಉತ್ತರ ಅವರಿಂದ ಕೇಳಿಬರುತ್ತದೆ. ಅಷ್ಟರ ಮಟ್ಟಿಗೆ ಈ ರ‍್ಯಾಲಿ ಪ್ರಸಿದ್ಧಿ ಪಡೆದಿದೆ.

ಡಕಾರ್‌ ಹೆಸರು ಕೇಳಿದೊಡನೆಯೇ ರ‍್ಯಾಲಿ ಪಟುಗಳ ಮೈ ಮನ ಪುಳಕಿತಗೊಳ್ಳುತ್ತದೆ. ಪ್ರಶಸ್ತಿ ಗೆಲ್ಲುವುದು ಒತ್ತಟ್ಟಿಗಿರಲಿ, ರ‍್ಯಾಲಿ ಪೂರ್ಣಗೊಳಿಸುವುದೇ ಜೀವನದ ಮಹಾನ್‌ ಸಾಧನೆ ಎಂದು ಅವರೆಲ್ಲಾ ಭಾವಿಸುತ್ತಾರೆ.

ಈ ರ‍್ಯಾಲಿಯಲ್ಲಿ ಪಾಲ್ಗೊಳ್ಳುವುದು ಹುಡುಗಾಟದ ಮಾತಲ್ಲ. ಅದಕ್ಕಾಗಿ ದೊಡ್ಡ ತಪಸ್ಸನ್ನೇ ಮಾಡಬೇಕು! ಕಣ್ಣ ಮುಂದೆಯೇ ಸಾವು ನೋವುಗಳು ಸಂಭವಿಸುತ್ತಿದ್ದರೂ ಕಿಂಚಿತ್ತೂ ಧೃತಿಗೆಡದೆ ಗುರಿಯತ್ತ ಮುನ್ನುಗ್ಗುವ ಗಂಡೆದೆ ಇರಬೇಕು. ತಿಂಗಳುಗಟ್ಟಲೆ ಹಗಲಿರುಳೆನ್ನದೇ ಅಭ್ಯಾಸ ನಡೆಸಬೇಕು. ನಿದ್ರೆ ಇಲ್ಲದೆ ಅದೆಷ್ಟೋ ರಾತ್ರಿಗಳನ್ನು ಕಳೆಯಬೇಕು.

ವಿಶ್ವದ ವಿವಿಧ ಭಾಗಗಳಲ್ಲಿ ಅನೇಕ ರ‍್ಯಾಲಿಗಳು ಆಯೋಜನೆಯಾಗುತ್ತವೆ. ಇವೆಲ್ಲಕ್ಕಿಂತಲೂ ಹೆಚ್ಚು ಅಪಾಯಕಾರಿ ಈ ಡಕಾರ್‌ ರ‍್ಯಾಲಿ. ಇದನ್ನು ‘ಯಮರೂಪಿ ರ‍್ಯಾಲಿ’ ಎಂದೂ ಕರೆಯುವುದುಂಟು. ಕಿರಿದಾದ ಕಣಿವೆಗಳು, ಮರಳಿನ ಪ್ರಪಾತಗಳು, ಜೌಗು ಪ್ರದೇಶಗಳು, ಕೆಸರು ತುಂಬಿದ ರಸ್ತೆಗಳು ಹಾಗೂ ಕಲ್ಲು ಬಂಡೆಗಳ ಹಾದಿಯಲ್ಲಿ ಶರವೇಗದಲ್ಲಿ ಸಾಗುವಾಗ ಮೈಯೆಲ್ಲಾ ಕಣ್ಣಾಗಿರಬೇಕು! ಚಿತ್ತ ಚಂಚಲವಾಯಿತೆಂದರೆ ಸ್ಪರ್ಧಿಗಳ ಪ್ರಾಣ ಪಕ್ಷಿ ಹಾರಿಹೋಗುವುದು ನಿಶ್ಚಿತ.


ಈ ವರ್ಷದ ರ‍್ಯಾಲಿಯ ವೇಳೆ ಟೊಯೊಟಾ ತಂಡದ ಕಾರು ಪಲ್ಟಿಯಾಗಿ ಸ್ಪರ್ಧಿಯೊಬ್ಬರು ಗಾಯಗೊಂಡಿರುವುದು –ರಾಯಿಟರ್ಸ್‌ ಚಿತ್ರ

ಡಕಾರ್‌ ಸ್ಪರ್ಧೆ ಹೇಗಿರುತ್ತೆ?..

ಡಕಾರ್‌, ವರ್ಷಕ್ಕೊಮ್ಮೆ ನಡೆಯುವ ರ‍್ಯಾಲಿ. ಆರಂಭದಲ್ಲಿ ಇದನ್ನು ಪ್ಯಾರಿಸ್‌–ಡಕಾರ್‌ ರ‍್ಯಾಲಿ ಎಂದೇ ಕರೆಯಲಾಗುತ್ತಿತ್ತು. ಇದು ಶುರುವಾಗಿದ್ದು 1979ರಲ್ಲಿ. ಮೊದಲ ವರ್ಷ ಪ್ಯಾರಿಸ್‌ನಲ್ಲಿ ರ‍್ಯಾಲಿಗೆ ಚಾಲನೆ ನೀಡಲಾಗಿತ್ತು. ಒಟ್ಟು 10 ಸಾವಿರ ಕಿ.ಮೀ. ದೂರದ ಈ ಸ್ಪರ್ಧೆ ಸೆನೆಗಲ್‌ನ ರಾಜಧಾನಿ ಡಕಾರ್‌ನಲ್ಲಿ ಅಂತ್ಯ ಕಂಡಿತ್ತು. ಚೊಚ್ಚಲ ಆವೃತ್ತಿಯಲ್ಲಿ 182 ರೇಸರ್‌ಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಈ ಪೈಕಿ ರೇಸ್‌ ಪೂರ್ಣಗೊಳಿಸಿದ್ದು 72 ಮಂದಿ. ಫ್ರಾನ್ಸ್‌ನ ಸಿರಿಲ್‌ ನೆವು ಅವರು ರ‍್ಯಾಲಿಯ ಮೊದಲ ಚಾಂಪಿಯನ್‌.

ನಂತರ ಈ ರ‍್ಯಾಲಿಯ ಖ್ಯಾತಿ ಹೆಚ್ಚುತ್ತಾ ಹೋಯಿತು. 1982ರ ರ‍್ಯಾಲಿಯಲ್ಲಿ ಒಟ್ಟು 382 ಸ್ಪರ್ಧಿಗಳು ಕಣಕ್ಕಿಳಿದಿದ್ದು ಇದಕ್ಕೆ ಸಾಕ್ಷಿ. ಈ ರೇಸ್‌ನಲ್ಲೂ ಯಮಹಾ ತಂಡದ ಸಿರಿಲ್‌ ನೆವು ಅವರೇ ಕಿರೀಟ ಮುಡಿಗೇರಿಸಿಕೊಂಡಿದ್ದರು. ಆ ಮೂಲಕ ಮೂರನೇ ಟ್ರೋಫಿ ಗೆದ್ದ ಹಿರಿಮೆಗೂ ಪಾತ್ರರಾಗಿದ್ದರು.

2004ರಲ್ಲಿ 595ಕ್ಕೆ ಏರಿದ್ದ ಸ್ಪರ್ಧಿಗಳ ಸಂಖ್ಯೆಯು 27ನೇ ಆವೃತ್ತಿಯ ವೇಳೆಗೆ (2005) 688ಕ್ಕೆ ತಲುಪಿತ್ತು. 2006ರಲ್ಲಿ ಪೋರ್ಚುಗಲ್‌ನ ಲಿಸ್ಬನ್‌ನಲ್ಲಿ ರ‍್ಯಾಲಿ ಆಯೋಜಿಸಲು ತೀರ್ಮಾನಿಸಲಾಗಿತ್ತು. ಉಗ್ರರ ದಾಳಿಯ ಭೀತಿಯಿಂದಾಗಿ 2008ರ ರ‍್ಯಾಲಿ ರದ್ದುಪಡಿಸಲಾಗಿತ್ತು. ನಂತರ ಈ ಸ್ಪರ್ಧೆ ದಕ್ಷಿಣ ಅಮೆರಿಕಕ್ಕೆ ಸ್ಥಳಾಂತರಗೊಂಡಿತ್ತು. 2009ರಿಂದ 2019ರವರೆಗೆ ಇಲ್ಲಿ ರ‍್ಯಾಲಿ ಆಯೋಜನೆಯಾಗಿತ್ತು. 2020ರಿಂದ ಸೌದಿ ಅರೇಬಿಯಾವು ಇದರ ಆತಿಥ್ಯವಹಿಸುತ್ತಿದೆ.

ಈ ವರ್ಷ (2021ರ ಜನವರಿ 3ರಿಂದ 15) ನಡೆಯುತ್ತಿರುವುದು 43ನೇ ಆವೃತ್ತಿಯ ರ‍್ಯಾಲಿ. 14ದಿನಗಳ ಈ ಸ್ಪರ್ಧೆಯು ಜೆದಾದ್‌ನಲ್ಲಿ ಆರಂಭವಾಗಿ ಇಲ್ಲೇ ಕೊನೆಗೊಳ್ಳುತ್ತದೆ. ಈ ರ‍್ಯಾಲಿಯು ಸುದೀರ್ಘ ಹಂತವೊಂದರ ಜೊತೆಗೆ 12 ಸಾಮಾನ್ಯ ಹಂತದ ಸ್ಪರ್ಧೆಗಳನ್ನು ಒಳಗೊಂಡಿದೆ.

ರ‍್ಯಾಲಿ ಹಾದು ಹೋಗುವ ಮಾರ್ಗದ ಕೈಪಿಡಿಯನ್ನು ಸ್ಪರ್ಧೆ ಆರಂಭಕ್ಕೆ ಹತ್ತು ನಿಮಿಷ ಮುಂಚೆ ನೀಡಲಾಗಿರುತ್ತದೆ. ಈ ಅವಧಿಯಲ್ಲೇ ರ‍್ಯಾಲಿಪಟುಗಳು ಅದರ ಮೇಲೆ ಕಣ್ಣಾಡಿಸಿ ಸ್ಪರ್ಧೆಗೆ ಸಜ್ಜಾಗಬೇಕು.

ಈ ಸಲದ ರ‍್ಯಾಲಿ ಪೂರ್ಣಗೊಳಿಸಲು ಸ್ಪರ್ಧಿಗಳು ಒಟ್ಟು 7,658 ಕಿ.ಮೀ. ದೂರ ಕ್ರಮಿಸಬೇಕು. ಒಂದು ದಿನ 550, ಮತ್ತೊಂದು ದಿನ 650, 700, 800 ಕಿ.ಮೀ. ದೂರ ಬೈಕ್‌ ಮತ್ತು ವಾಹನ ಚಲಾಯಿಸಬೇಕಾದ ಸವಾಲು ಅವರ ಎದುರಿಗಿರುತ್ತದೆ.


ಹೆಲಿಕಾಪ್ಟರ್‌ ಮೂಲಕ ಸ್ಪರ್ಧಿಗಳ ಮೇಲೆ ಕಣ್ಣಿಡುವುದು –ಎಎಫ್‌ಪಿ ಚಿತ್ರ

ದುರಂತಗಳ ಸರಮಾಲೆ...
ಡಕಾರ್‌ ರ‍್ಯಾಲಿ ಶುರುವಾದಂದಿನಿಂದಲೂ ಪ್ರತಿ ವರ್ಷ ಒಂದಿಲ್ಲೊಂದು ಸಾವು ಸಂಭವಿಸುತ್ತಲೇ ಇದೆ. ರೇಸ್‌ನ ವೇಳೆ ಇದುವರೆಗೂ ಸುಮಾರು 75 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ 30 ಸ್ಪರ್ಧಿಗಳು, 14 ಮಂದಿ ಪತ್ರಕರ್ತರು ಮತ್ತು ರ‍್ಯಾಲಿಗಳಲ್ಲಿ ಪಾಲ್ಗೊಳ್ಳುವ ತಂಡಗಳ ನೆರವು ಸಿಬ್ಬಂದಿ ಹಾಗೂ 23 ಮಂದಿ ವೀಕ್ಷಕರೂ ಸೇರಿದ್ದಾರೆ.  

ಈ ದುರ್ಘಟನೆಗಳಿಗೆಲ್ಲಾ ಆಯೋಜಕರೇ ಹೊಣೆ. ಅವರ ಬೇಜವಾಬ್ದಾರಿಯಿಂದ ವ್ಯಕ್ತಿಗಳು ತಮ್ಮ ಅಮೂಲ್ಯ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂಬ ಟೀಕೆಗಳು ಆಗಾಗ ವ್ಯಕ್ತವಾಗುತ್ತಲೇ ಇವೆ.

1988ರ ರ‍್ಯಾಲಿಯ ವೇಳೆ ಸ್ಪರ್ಧಾ ಕಣದಲ್ಲಿದ್ದ ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸಾಹಸಿಗಳು ಸಾವಿಗೀಡಾಗಿದ್ದರು. ಆಗ ಮಾಧ್ಯಮಗಳು ಸಂಘಟಕರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದವು.

ರ‍್ಯಾಲಿಯ ಚೊಚ್ಚಲ ಆವೃತ್ತಿಯಲ್ಲೇ ಸೂತಕದ ಛಾಯೆ ಆವರಿಸಿತ್ತು. 1979ರ ಜನವರಿಯಲ್ಲಿ ಯಮಹಾ ತಂಡದ ಪ್ಯಾಟ್ರಿಕ್‌ ಡೊಡಿನ್‌, ಅಸು ನೀಗಿದ್ದರು. ಸ್ಪರ್ಧೆಯ ವೇಳೆ ಹೆಲ್ಮೆಟ್‌ ಸರಿಪಡಿಸಿಕೊಳ್ಳಲು ಮುಂದಾಗಿದ್ದ ಪ್ಯಾಟ್ರಿಕ್‌, ಬೈಕಿನಿಂದ ಆಯಾತಪ್ಪಿ ಕೆಳಗೆ ಬಿದ್ದಿದ್ದರು. ಅವರ ತಲೆಯು ಕಲ್ಲು ಬಂಡೆಗೆ ಅಪ್ಪಳಿಸಿದ್ದರಿಂದ ಬುರುಡೆಯ ಒಳಗೆ ತೀವ್ರ ರಕ್ತಸ್ರಾವವಾಗಿತ್ತು. ಅವರನ್ನು ಪ್ಯಾರಿಸ್‌ನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದರು. 1991ರ ರೇಸ್‌ ವೇಳೆಯೂ ಫಾನ್ಸ್‌ನ ಮೂವರು ಸ್ಪರ್ಧಿಗಳು ಪ್ರಾಣ ಕಳೆದುಕೊಂಡಿದ್ದರು.


ಈ ಸಲದ ರೇಸ್‌ನ ವೇಳೆ ಬೈಕ್‌ ಸಾಹಸಿಯೊಬ್ಬರು ಬಂಡೆಗಲ್ಲುಗಳ ಹಾದಿಯಲ್ಲಿ ಆಯಾತಪ್ಪಿ ಬಿದ್ದಿರುವುದು –ಎಎಫ್‌ಪಿ ಚಿತ್ರ

2020ರಲ್ಲೂ ರೇಸ್‌ ಕಣದಿದ್ದ ಸಾವಿನ ಸುದ್ದಿ ಹೊರಬಿದ್ದಿತ್ತು. ಜನವರಿ 12ರಂದು ಹೀರೊ ತಂಡದ ಪಾಲೊ ಗೊನ್ಸಾಲ್ವೆಸ್‌ ಅಸು ನೀಗಿದ್ದರು. ಬೈಕ್‌ನಿಂದ ಕೆಳಗೆ ಬಿದ್ದ ರಭಸಕ್ಕೆ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಹೀಗಾಗಿ ಸ್ಥಳದಲ್ಲೇ ‍ಪ್ರಜ್ಞೆ ಕಳೆದುಕೊಂಡಿದ್ದರು. ಬಳಿಕ ಅವರಿಗೆ ಹೃದಯಾಘಾತವಾಗಿತ್ತು. ಹೆಲಿಕಾಪ್ಟರ್‌ನಲ್ಲಿ ಧಾವಿಸಿದ ವೈದ್ಯಕೀಯ ತಂಡವು ಪ್ರಥಮ ಚಿಕಿತ್ಸೆ ನೀಡಿತ್ತು. ಬಳಿಕ ಅದೇ ಹೆಲಿಕಾಪ್ಟರ್‌ನಲ್ಲಿ ಲಾಯ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಷ್ಟರಲ್ಲಾಗಲೇ ಗೊನ್ಸಾಲ್ವೆಸ್‌ ಅವರ ಹೃದಯ ಬಡಿತ ನಿಂತು ಹೋಗಿತ್ತು.

ಇದರ ಬೆನ್ನಲ್ಲೇ (ಜನವರಿ 16) ಕೆಟಿಎಂ ತಂಡದ ಎಡ್ವಿನ್‌ ಸ್ಟ್ರೇವರ್‌ ಅವರ ಮೋಟರ್‌ ಬೈಕ್‌ ಅಪಘಾತಕ್ಕೀಡಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ರಿಯಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರ ಸಾವು ಬದುಕಿನ ನಡುವೆ ಹೋರಾಡಿದ ಎಡ್ವಿನ್‌, ಜನವರಿ 24ರಂದು ಕೊನೆಯುಸಿರೆಳೆದಿದ್ದರು.


ಕರ್ನಾಟಕದ ಸಿ.ಎಸ್‌.ಸಂತೋಷ್‌

ಕನ್ನಡಿಗನಿಗೂ ಕಾಡಿದ್ದ ನೋವು..
ಡಕಾರ್‌ನಲ್ಲಿ ಕನ್ನಡಿಗರೊಬ್ಬರಿಗೂ ಕಹಿ ಅನುಭವವಾಗಿದೆ. ಹೀರೊ ತಂಡದ ಅತ್ಯಂತ ಅನುಭವಿ ಚಾಲಕ, 37 ವರ್ಷ ವಯಸ್ಸಿನ ಸಿ.ಎಸ್‌.ಸಂತೋಷ್‌ ಈ ಸಲದ ರೇಸ್‌ನ ವೇಳೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಾಲೊ ಗೊನ್ಸಾಲ್ವೆಸ್‌ ಅವರು ಮೃತಪಟ್ಟಿದ್ದ ಸ್ಥಳದಲ್ಲೇ ಸಂತೋಷ್‌ ಅವರ ಬೈಕ್‌ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡಿರುವ ಸಂತೋಷ್‌ ಅವರನ್ನು ರಿಯಾದ್‌ನ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನ ಸಂತೋಷ್‌ ಅವರು ಏಳನೇ ಬಾರಿ ಈ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. 2015ರಲ್ಲಿ 36ನೇ ಸ್ಥಾನದೊಂದಿಗೆ ರ‍್ಯಾಲಿ ಪೂರ್ಣಗೊಳಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ರೇಸ್‌ಪಟು ಎಂಬ ಹಿರಿಮೆ ಅವರದ್ದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು