ಭಾರತ ಅಥ್ಲೆಟಿಕ್ಸ್: ಮುಖ್ಯ ಕೋಚ್ ಆಗಿ ರಾಧಾಕೃಷ್ಣನ್ ನಾಯರ್ ನೇಮಕ

ನವದೆಹಲಿ: ಭಾರತ ಅಥ್ಲೆಟಿಕ್ಸ್‌ನ ಮುಖ್ಯ ಕೋಚ್ ಆಗಿ ಅನುಭವಿ ರಾಧಾಕೃಷ್ಣನ್ ನಾಯರ್ ನೇಮಕವಾಗಿದ್ದಾರೆ. ಬಹಾದ್ದೂರ್ ಸಿಂಗ್ ಅವರು ಜುಲೈನಲ್ಲಿ ರಾಜೀನಾಮೆ ನೀಡಿದ ಬಳಿಕ ಈ ಸ್ಥಾನ ತೆರವಾಗಿತ್ತು. ಅಂದಿನಿಂದ ರಾಧಾಕೃಷ್ಣನ್ ಅವರು ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ರಾಧಾಕೃಷ್ಣನ್ ಅವರ ತರಬೇತಿಯಲ್ಲಿ ಭಾರತ ಅಥ್ಲೆಟಿಕ್ಸ್ ಪ್ರಗತಿಯತ್ತ ಸಾಗಲಿದೆ ಎಂದು ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ನ (ಎಎಫ್‌ಐ) ಅಧ್ಯಕ್ಷ ಆದಿಲ್ ಸುಮರಿವಾಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ರಾಧಾಕೃಷ್ಣನ್ ಅವರು ಏಳು ವರ್ಷಗಳಿಂದ ಡೆಪ್ಯುಟಿ ಮುಖ್ಯ ಕೋಚ್ ಆಗಿರುವುದರಿಂದ ನಮ್ಮ ಯೋಜನೆಗಳಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ‘ ಎಂದು ಸುಮರಿವಾಲಾ ಹೇಳಿದ್ದಾಗಿ ಎಎಫ್‌ಐ ಉಲ್ಲೇಖಿಸಿದೆ.
ಪ್ರಮಾಣೀಕೃತ ತಾಂತ್ರಿಕ ಅಧಿಕಾರಿ ಮತ್ತು ವಿಶ್ವ ಅಥ್ಲೆಟಿಕ್ಸ್ ಲೆವೆಲ್ 5 ತರಬೇತುದಾರರೂ ಆಗಿರುವ ನಾಯರ್, ಭಾರತದಲ್ಲಿ ಕೋಚ್‌ಗಳ ಶಿಕ್ಷಣ ವ್ಯವಸ್ಥೆಯನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಂತರರಾಷ್ಟ್ರೀಯ ಉತ್ಕೃಷ್ಟತಾ ತರಬೇತಿ ಪ್ರಮಾಣಪತ್ರವನ್ನು ಪಡೆದ ಮೊದಲ ಭಾರತೀಯ ಅವರು.
’ಮುಖ್ಯ ಕೋಚ್ ಆಗಿ ರಾಧಾಕೃಷ್ಣನ್ ಅವರ ನೇಮಕವನ್ನು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಅನುಮೋದಿಸಿದೆ‘ ಎಂದು ಎಎಫ್‌ಐ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.