ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರ್ಯಾಕ್‌ಗೆ ಮರಳುವ ಸವಾಲು: ಮೊಹಮ್ಮದ್ ಅನಾಸ್ ಯಾಹಿಯಾ

Last Updated 17 ಮೇ 2020, 20:00 IST
ಅಕ್ಷರ ಗಾತ್ರ

ಭಾರತ ಕಂಡ ಹೊಸ ತಲೆಮಾರಿನ ಸ್ಪ್ರಿಂಟರ್‌ಗಳ ಪೈಕಿ ಪ್ರಮುಖರಾದ ಮೊಹಮ್ಮದ್ ಅನಾಸ್ ಯಾಹಿಯಾ ನೇರ ನುಡಿಯ ಅಥ್ಲೀಟ್‌. ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿರುವ ಅವರು ಲಾಕ್‌ಡೌನ್ ದಿನಗಳ ಬಗ್ಗೆ ಮತ್ತು 400 ಮೀಟರ್ಸ್ ಓಟದ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

***

ಸದ್ಯ ನೀವು ಎಲ್ಲಿದ್ದೀರಿ? ಲಾಕ್‌ಡೌನ್ ದಿನಗಳನ್ನು ಹೇಗೆ ಕಳೆಯುತ್ತಿದ್ದೀರಿ...?

ನಾನೀಗ ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿದ್ದೇನೆ. ಅಭ್ಯಾಸ ಮಾಡಲು ಅವಕಾಶವಿಲ್ಲದಿದ್ದರೂ ಫಿಟ್‌ನೆಸ್ ಉಳಿಸಿಕೊಳ್ಳಲು ವ್ಯಾಯಾಮ ಮಾಡುತ್ತಿದ್ದೇನೆ. ಉಳಿದ ಸಮಯವನ್ನು ಗೆಳೆಯರೊಂದಿಗೆ ಮಾತನಾಡುತ್ತ ಕಳೆಯುತ್ತಿದ್ದೇನೆ. ವಿಡಿಯೊ ಗೇಮ್‌ ಆಡುವುದೂ ಇತ್ತೀಚೆಗೆ ರೂಢಿಯಾಗಿದೆ.‌

ಲಾಕ್‌ಡೌನ್ ಎನ್ನುವುದು ಹೊಸ ಕಲ್ಪನೆ. ಆರಂಭದಲ್ಲಿ ಅಂಗಣಕ್ಕೆ ಇಳಿಯದೆ, ಅಭ್ಯಾಸ ಮಾಡಲಾಗದೆ ದಿನಕಳೆಯಲು ಕಷ್ಟವಾಯಿತೇ? ಲಾಕ್‌ಡೌನ್‌ಗೆ ಹೇಗೆ ಹೊಂದಿಕೊಂಡಿರಿ?

* ಆರಂಭದಲ್ಲಿ ಹೊಂದಿಕೊಳ್ಳುವುದು ತುಂಬಾ ಕಷ್ಟವಾಯಿತು. ಕ್ರಮೇಣ ಅಭ್ಯಾಸವಾಯಿತು. ಟ್ರ್ಯಾಕ್‌ಗೆ ಇಳಿಯಲು ಅವಕಾಶ ಇಲ್ಲದ ಕಾರಣ ಸ್ನಾಯುಗಳಿಗೆ ಬಲ ತುಂಬುವ ಮತ್ತು ಹೃದಯಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುತ್ತಿದ್ದೇನೆ.

ಲಾಕ್‌ಡೌನ್‌ನಿಂದಾಗಿ ಕ್ರೀಡಾಪಟುಗಳ ಮೇಲೆ, ವಿಶೇಷವಾಗಿ ಅಥ್ಲೆಟಿಕ್ಸ್‌ನಲ್ಲಿ ತೊಡಗಿಸಿಕೊಂಡಿರುವವರ ಮೇಲೆ ಪ್ರತಿಕೂಲ ಪರಿಣಾಮ ಆಗುವ ಸಾಧ್ಯತೆ ಇದೆಯೇ?

ದುಷ್ಪರಿಣಾಮದ ಬಗ್ಗೆ ಏನೂ ಹೇಳಲಾಗದು. ಕ್ರೀಡಾಪಟುಗಳ ಪಾಲಿಗೆ ಪ್ರತಿದಿನವೂ ಒಂದೇ ರೀತಿ ಇರುವುದಿಲ್ಲ. ಅಭ್ಯಾಸ ಮತ್ತು ಸ್ಪರ್ಧೆಗಳಿಲ್ಲದ ಕಾರಣ ಅನೇಕರು ಅಡುಗೆ, ಪುಸ್ತಕ ಓದು, ಗೇಮ್ಸ್‌ ಆಡುವುದು ಮುಂತಾದ ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತರ ಕ್ರೀಡಾಪಟುಗಳ ಜೊತೆ ವಿಚಾರವಿನಿಮಯ ಮಾಡಿಕೊಳ್ಳುವುದಕ್ಕೂ ಈಗ ಸಮಯ ಸಿಗುತ್ತಿದೆ. ಫಿಟ್‌ನೆಸ್ ವಿಷಯಕ್ಕೆ ಬಂದರೂ ಅಷ್ಟೇ; ಒಂದಿಲ್ಲ ಒಂದು ರೀತಿಯಲ್ಲಿ ನಮ್ಮನ್ನು ಫಿಡ್‌ ಆಗಿರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ.

ಕೊರೊನಾ ನಂತರದ ದಿನಗಳಲ್ಲಿ ಅಥ್ಲೀಟುಗಳು ಎದುರಿಸಬೇಕಾಗಿರುವ ಸವಾಲುಗಳೇನು?

ಅಂಗಣಕ್ಕೆ, ಟ್ರ್ಯಾಕ್‌ಗೆ ಮರಳುವುದು ಮತ್ತು ಫಾರ್ಮ್‌ ಉಳಿಸಿಕೊಳ್ಳುವುದು ಕೊರೊನಾ ನಂತರದ ದಿನಗಳಲ್ಲಿ ನಮ್ಮ ಮುಂದಿರುವ ದೊಡ್ಡ ಸವಾಲು.

ಒಲಿಂಪಿಕ್ಸ್ ಸಿದ್ಧತೆಗಳು ಹೇಗೆ ನಡೆಯುತ್ತಿವೆ? ಮಿಶ್ರ ರಿಲೆ ಸಹ ಓಟಗಾರರು ಈಗ ಪಟಿಯಾಲದಲ್ಲೇ ಇದ್ದಾರೆಯೇ?

ಒಲಿಂಪಿಕ್ಸ್ ಸಿದ್ಧತೆಗಳ ಬಗ್ಗೆ ಈಗ ಏನೂ ಹೇಳಲು ಸಾಧ್ಯವಿಲ್ಲ. ಫಿಟ್‌ನೆಸ್‌ ಉಳಿಸಿಕೊಳ್ಳಲು ಏನೇನು ಬೇಕೋ ಅಷ್ಟನ್ನು ಮಾಡುತ್ತಿದ್ದೇವೆ. 400 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪುರುಷ ಮತ್ತು ಮಹಿಳಾ ಅಥ್ಲೀಟ್‌ಗಳೆಲ್ಲರೂ ಈಗ ಪಟಿಯಾಲದಲ್ಲೇ ಇದ್ದಾರೆ.

ಹೊಸದಾಗಿ ಅಳವಡಿಸಿರುವ ಮಿಶ್ರ ರಿಲೆಯಲ್ಲಿ ನೀವು ಈಗಾಗಲೇ ಪಾಲ್ಗೊಂಡಿದ್ದೀರಿ. ಈ ಪ್ರಯೋಗದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಇದು ತುಂಬ ಆಸಕ್ತಿದಾಯಕ ಸ್ಪರ್ಧೆ. ಸಹ ಓಟಗಾರರು ಯಾರೇ ಆಗಿರಲಿ, ಮುಂದಿನ ದಿನಗಳಲ್ಲಿ ಅತ್ಯುತ್ತಮ ಫಲಿತಾಂಶ ನೀಡಲು ನಾನು ಪ್ರಯತ್ನಿಸಲಿದ್ದೇನೆ. ಅದಕ್ಕಾಗಿ ಕಠಿಣ ಪರಿಶ್ರಮದ ಅಗತ್ಯವಿರುವುದನ್ನು ಮನಗಂಡಿದ್ದೇನೆ.

ಮಿಶ್ರ ರಿಲೆಯಲ್ಲಿ ನಿಮ್ಮೊಂದಿಗೆ ಓಡುವ ಇತರ ಅಥ್ಲೀಟ್‌ಗಳ ಬಗ್ಗೆ ಏನು ಹೇಳಲು ಬಯಸುತ್ತೀರಿ?

ಎಲ್ಲರೂ ಒಬ್ಬರಿಗಿಂತ ಒಬ್ಬರು ಮಿಗಿಲು. ವೈಯಕ್ತಿಕವಾಗಿ ಯಾರ ಬಗ್ಗೆಯೂ ಹೇಳಲು ಬಯಸುವುದಿಲ್ಲ. ನನಗೆ ಎಲ್ಲರಿಂದಲೂ ಉತ್ತಮ ಬೆಂಬಲ, ಪ್ರೇರಣೆ ಮತ್ತು ಸಹಕಾರ ಸಿಗುತ್ತಿದೆ. ಗೆಲುವಿನಲ್ಲೂ ಸೋಲಿನಲ್ಲೂ ನಾವು ಓಟವನ್ನು ಆಸ್ವಾದಿಸುತ್ತೇವೆ. ಇಂಥ ತಂಡದ ಸದಸ್ಯನಾಗಲು ಅವಕಾಶ ಲಭಿಸಿದ್ದು ಅದೃಷ್ಟವೇ ಸರಿ.

ದಾಖಲೆಗಳ ಒಡೆಯ ಯಾಹಿಯಾ

ದಕ್ಷಿಣ ಕೇರಳದ ಕೊಲ್ಲಂ ಜಿಲ್ಲೆಯ ಗುಡ್ಡ–ಬೆಟ್ಟ–ತೊರೆಗಳ ಸುಂದರ ಪ್ರದೇಶವಾದ ನಿಲಮೇಲ್‌ನಲ್ಲಿ 1994ರಲ್ಲಿ ಜನಿಸಿದ ಮೊಹಮ್ಮದ್ ಅನಾಸ್ ಶಾಲಾ ದಿನಗಳಲ್ಲಿ ಲಾಂಗ್‌ಜಂಪ್ ಪಟು ಆಗಿದ್ದರು.ಅವರ ಕ್ರೀಡಾ ಜೀವನದ ದಿಕ್ಕು ಬದಲಿಸಿದ್ದು 200 ಮೀಟರ್ಸ್ ಮತ್ತು 400 ಮೀಟರ್ಸ್ ಓಟ. ಪಿ.ಬಿ.ಜಯಕುಮಾರ್, ಮೊಹಮ್ಮದ್ ಕುಂಞಿ ಮತ್ತು ಗಾಲಿನ ಭುಕಾರಿಯಾ ಬಳಿ ತರಬೇತಿ ಪಡೆದ ಅವರು ಈಗ 400 ಮೀಟರ್ಸ್ ಕಡೆಗೇ ಹೆಚ್ಚು ಗಮನ ನೀಡಿದ್ದಾರೆ. ಕಳೆದ ವರ್ಷ ಜೆಕ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 45.21 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ರಾಷ್ಟ್ರೀಯ ದಾಖಲೆ ಒಡೆಯರಾಗಿದ್ದಾರೆ. 200 ಮೀಟರ್ಸ್‌ನಲ್ಲಿ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 20.63 ಸೆಕೆಂಡು.

2016ರ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಮೂಲಕ 400 ಮೀಟರ್ಸ್ ಓಟದಲ್ಲಿ ಈ ಸಾಧನೆ ಮಾಡಿದ ಮೂರನೇ ಭಾರತೀಯ ಎನಿಸಿದ್ದರು. ಮಿಲ್ಕಾ ಸಿಂಗ್‌ (1956, 1960) ಮತ್ತು ಕೆ.ಎಂ.ಬಿನು (2004) ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ಭಾಗಹಿಸಿದ್ದರು. 2018ರ ಏಷ್ಯನ್ ಗೇಮ್ಸ್‌ನ ವೈಯಕ್ತಿಕ, ಪುರುಷರ ರಿಲೆ ಮತ್ತು ಮಿಶ್ರ ರಿಲೆಯಲ್ಲಿ 400 ಮೀಟರ್ಸ್‌ ವಿಭಾಗದ ಬೆಳ್ಳಿ ಪದಕ, 2016ರ ದಕ್ಷಿಣ ಏಷ್ಯಾ ಗೇಮ್ಸ್‌ನ 400 ಮೀಟರ್ಸ್‌ ಓಟ ಹಾಗೂ ಏಷ್ಯನ್ ಚಾಂಪಿಯನ್‌ಷಿಪ್‌‌ನ ವೈಯಕ್ತಿಕ ಮತ್ತು ಪುರುಷರ ರಿಲೆಯಲ್ಲಿ ಚಿನ್ನ, 2019ರ ಏಷ್ಯನ್ ಚಾಂಪಿಯನ್‌ಷಿಪ್‌ನ ಮಿಶ್ರ ರಿಲೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಪುರುಷರ 4x400 ಮೀಟರ್ಸ್ ರಿಲೆಯಲ್ಲಿ ರಾಷ್ಟ್ರೀಯ ದಾಖಲೆ ಬರೆದ ತಂಡದಲ್ಲೂ ಅನಾಸ್ ಇದ್ದರು. ಈ ದಾಖಲೆ 2016ರಲ್ಲಿ ಬೆಂಗಳೂರಿನಲ್ಲಿ ಆಗಿತ್ತು. 3:00.91 ನಿಮಿಷಗಳಲ್ಲಿ ಗುರಿ ಮುಟ್ಟಿದ ತಂಡದಲ್ಲಿ ಅನಾಸ್ ಜೊತೆ ಇದ್ದವರು ಕುಂಞು ಮೊಹಮ್ಮದ್, ಧರುಣ್ ಅಯ್ಯಸಾಮಿ ಮತ್ತು ಆರೋಖ್ಯ ರಾಜೀವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT