ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಬರ್‌ ಕಪ್‌ ಫೈನಲ್ಸ್ ಬ್ಯಾಡ್ಮಿಂಟನ್‌ ಟೂರ್ನಿ: ಸ್ಪೇನ್‌ ಎದುರು ಜಯಿಸಿದ ಭಾರತ

ಗಾಯದಿಂದ ಹಿಂದೆ ಸರಿದ ಸೈನಾ
Last Updated 10 ಅಕ್ಟೋಬರ್ 2021, 13:44 IST
ಅಕ್ಷರ ಗಾತ್ರ

ಆಹಸ್‌, ಡೆನ್ಮಾರ್ಕ್‌: ತಾರಾ ಆಟಗಾರ್ತಿ ಸೈನಾ ನೆಹ್ವಾಲ್‌ ಗಾಯದಿಂದ ಹೊರಗುಳಿದರೂ ಎದೆಗುಂದದ ಭಾರತ ಮಹಿಳಾ ತಂಡವು ಊಬರ್ ಕಪ್‌ ಫೈನಲ್ಸ್ ಬ್ಯಾಡ್ಮಿಂಟನ್‌ ಟೂರ್ನಿಯ ಮೊದಲ ಹಣಾಹಣಿಯಲ್ಲಿ ಸ್ಪೇನ್ ಎದುರು ಭಾನುವಾರ 3–2ರಿಂದ ಜಯ ಸಾಧಿಸಿದೆ.

ಸ್ಪೇನ್ ತಂಡದ ಎದುರು ಲಂಡನ್‌ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ, ಮೂಲಕವೇ ಭಾರತ ಅಭಿಯಾನ ಆರಂಭಿಸಿತು. ಸಿಂಗಲ್ಸ್ ವಿಭಾಗದಲ್ಲಿ ಕ್ಲಾರಾ ಅಜುರ್‌ಮೆಂಡಿ ಅವರಿಗೆ ಎದುರಾಗಿದ್ದ ಸೈನಾ ಮೊದಲ ಗೇಮ್‌ಅನ್ನು 20–22ರಿಂದ ಕೈಚೆಲ್ಲಿದರು. ಬಳಿಕ ತೊಡೆನೋವಿನಿಂದ ಬಳಲಿದ ಕಾರಣ ಅವರು ಪಂದ್ಯದಿಂದ ಹಿಂದೆ ಸರಿದರು.

‘ಪಂದ್ಯದ ಅವಧಿಯಲ್ಲಿ ಗಾಯದ ಅನುಭವವಾಯಿತು. ಆದರೂ ಪಂದ್ಯದಲ್ಲಿ ಲಯಕ್ಕೆ ಮರಳಲು ಯತ್ನಿಸಿದೆ; ಸಾಧ್ಯವಾಗಲಿಲ್ಲ. ಉಸಿರು ಹಿಂದೆಕ್ಕೆಳೆದುಕೊಳ್ಳುವ ಸಂದರ್ಭದಲ್ಲಿ ನೋವು ಉಲ್ಭಣಿಸುತ್ತಿತ್ತು. ಹೀಗಾಗಿ ಹಿಂದೆ ಸರಿಯಬೇಕಾಯಿತು‘ ಎಂದು ಸೈನಾ ಹೇಳಿದ್ದಾರೆ.

ಸೈನಾ ನೆಹ್ವಾಲ್‌
ಸೈನಾ ನೆಹ್ವಾಲ್‌

ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಮಾಳವಿಕಾ ಬಾನ್ಸೋದ್‌ ಗೆಲುವು ಸಾಧಿಸುವ ಮೂಲಕ ನಿರಾಸೆಯನ್ನು ಮರೆಸಿದರು. ಸ್ಪೇನ್‌ನ ಬೀಟ್‌ರೀಜ್‌ ಕೊರ್ರಾಲೆಸ್‌ ಎದುರು ಕಣಕ್ಕಿಳಿದಿದ್ದ ಮಾಳವಿಕಾ 21–13, 21–15ರಿಂದ ಜಯದ ನಗೆ ಬೀರಿದರು.

ತನಿಶಾ ಕ್ರಾಸ್ಟೊ–ಋತುಪರ್ಣಾ ಪಂಡಾ ಜೋಡಿಯು ಡಬಲ್ಸ್ ವಿಭಾಗದಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದರು. 21–10, 21–8ರಿಂದ ಪೌಲಾ ಲೋಪೆಜ್– ಲೊರೆನಾ ಯೂಸಲ್ ಅವರನ್ನು ಮಣಿಸಿದರು. ಇದರೊಂದಿಗೆ ಐದು ಸುತ್ತುಗಳ ಪಂದ್ಯದಲ್ಲಿ ಭಾರತ 2–1ರಿಂದ ಮುನ್ನಡೆ ಗಳಿಸಿತು.

ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನಲ್ಲಿ ಅದಿತಿ ಭಟ್‌ ಕೂಡ ಮಿಂಚಿದರು. ಅವರು 21–16, 21–14ರಿಂದ ಸ್ಪೇನ್‌ನ ಅನಿಯಾ ಸೆಟಿನ್ ಅವರನ್ನು ಮಣಿಸಿದರು. ಆದರೆ ಡಬಲ್ಸ್ ವಿಭಾಗದಲ್ಲಿ ಕಾಮನ್‌ವೆಲ್ತ್‌ ಗೇಮ್ಸ್ ಕಂಚಿನ ಪದಕ ವಿಜೇತ ಜೋಡಿ ಎನ್‌.ಸಿಕ್ಕಿರೆಡ್ಡಿ– ಅಶ್ವಿನಿ ಪೊನ್ನಪ್ಪ ಅವರು 18-21 21-14 17-21ರಿಂದ ಅಜಿಮೆಂಡ್ರಿ ಮತ್ತು ಕೊರಾಲೆಸ್‌ ಎದುರು ಸೋಲು ಅನುಭವಿಸಿದರು.

ಭಾರತವು ‘ಬಿ’ ಗುಂಪಿನ ಎರಡನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT