ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಭೀತಿ: ಶೂಟಿಂಗ್‌ ವಿಶ್ವಕಪ್‌ ರದ್ದು

ಅನಿವಾರ್ಯವಾಗಿ ನಿರ್ಧಾರ ಕೈಗೊಂಡ ಎನ್‌ಆರ್‌ಎಐ
Last Updated 6 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ಬಿಕ್ಕಟ್ಟು ಉಲ್ಬಣಿಸುತ್ತಿರುವ ಕಾರಣ ಭಾರತದಲ್ಲಿ ನಿಗದಿಯಾಗಿದ್ದ ರೈಫಲ್‌/ಪಿಸ್ತೂಲ್‌ ಮತ್ತು ಶಾಟ್‌ಗನ್‌ ಶೂಟಿಂಗ್‌ ವಿಶ್ವಕಪ್‌, ರದ್ದು ಮಾಡಲಾಗಿದೆ.

ಅಂತರರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್ಸ್‌ ಫೆಡರೇಷನ್‌ (ಐಎಸ್‌ಎಸ್‌ಎಫ್‌) ಹಾಗೂ ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆಗಳು (ಎನ್‌ಆರ್‌ಎಐ) ಜಂಟಿಯಾಗಿ ಸೋಮವಾರ ಈ ನಿರ್ಧಾರ ಕೈಗೊಂಡಿವೆ.

ಈ ಮೊದಲು ಮಾರ್ಚ್‌ 15ರಿಂದ 26ರವರೆಗೆ ಇಲ್ಲಿನ ಕರ್ಣಿಸಿಂಗ್‌ ರೇಂಜ್‌ನಲ್ಲಿ ವಿಶ್ವಕಪ್‌ ನಿಗದಿಯಾಗಿತ್ತು.

ಟೂರ್ನಿಯನ್ನು ಕೊರೊನಾ ಭೀತಿಯಿಂದಾಗಿ ಮುಂದೂಡಿದ್ದ ಎನ್‌ಆರ್‌ಎಐ, ಅದನ್ನು ಎರಡು ಹಂತಗಳಲ್ಲಿ ನಡೆಸಲು ತೀರ್ಮಾನಿಸಿತ್ತು. ಅದರಂತೆ ರೈಫಲ್‌ ಹಾಗೂ ಪಿಸ್ತೂಲ್‌ ಸ್ಪರ್ಧೆ ಮೇ 5ರಿಂದ 12ರವರೆಗೆ, ಶಾಟ್‌ಗನ್‌ ಸ್ಪರ್ಧೆಯು ಜೂನ್‌ 2ರಿಂದ 9ರವರೆಗೆ ನಡೆಯಬೇಕಿತ್ತು.

‘ಕೊರೊನಾ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವಿಶ್ವಕಪ್‌ ಆಯೋಜಿಸುವುದು ಕಷ್ಟ. ಹೀಗಾಗಿ ಎನ್‌ಆರ್‌ಎಐ, ಅನಿವಾರ್ಯವಾಗಿ ಟೂರ್ನಿಯನ್ನು ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿದೆ’ ಎಂದು ಐಎಸ್‌ಎಸ್‌ಎಫ್‌ ಪ್ರಕಟಣೆಯಲ್ಲಿ ಹೇಳಿದೆ.

‘ಶೂಟರ್‌ಗಳು, ಅಧಿಕಾರಿಗಳು, ನೆರವು ಸಿಬ್ಬಂದಿ ಹಾಗೂ ಎಲ್ಲಾ ಸದಸ್ಯರ ಸುರಕ್ಷತೆಗೆ ಆದ್ಯತೆ ನೀಡಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ವಿಶ್ವಕಪ್‌ ರದ್ದು ಮಾಡುತ್ತಿದ್ದೇವೆ’ ಎಂದು ಎನ್‌ಆರ್‌ಎಐ ಪ್ರಕಟಣೆಯಲ್ಲಿ ತಿಳಿಸಿದೆ.

ಮ್ಯೂನಿಕ್‌ನಲ್ಲಿ ಜೂನ್‌ನಲ್ಲಿ ನಡೆಯಬೇಕಿದ್ದ ಹಾಗೂ ಜೂನ್‌ 22ರಿಂದ ಜುಲೈ 3ರವರೆಗೆ ಅಜರ್‌ಬೈಜಾನ್‌ನ ಬಾಕುದಲ್ಲಿ ನಿಗದಿಯಾಗಿದ್ದ ವಿಶ್ವಕಪ್‌ಗಳನ್ನೂ ಕೊರೊನಾ ಕಾಟದಿಂದಾಗಿ ರದ್ದು ಮಾಡಲಾಗಿದೆ.

‘ನವದೆಹಲಿಯ ಬಳಿಕ ಮ್ಯೂನಿಕ್‌ನಲ್ಲಿ ವಿಶ್ವಕಪ್‌ ನಡೆಯಬೇಕಿತ್ತು. ಆ ಟೂರ್ನಿಯನ್ನು ರದ್ದು ಮಾಡಿದಾಗಲೇ ನಾವು ಒತ್ತಡಕ್ಕೊಳಗಾಗಿದ್ದೆವು. ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಶೂಟರ್‌ಗಳಿಗೆ ಸಿದ್ಧತೆ ನಡೆಸುವುದೂ ಕಷ್ಟವಾಗುತ್ತಿದೆ. ಹೀಗಾಗಿ ಕೆಲವು ಸಂಸ್ಥೆಗಳು ಟೂರ್ನಿ ರದ್ದು ಮಾಡುವಂತೆ ಸಲಹೆ ನೀಡುತ್ತಿವೆ. ಶೂಟರ್‌ಗಳ ಸುರಕ್ಷತೆಯ ದೃಷ್ಟಿಯಿಂದ ವಿಶ್ವಕಪ್‌ ರದ್ದು ಮಾಡುವುದು ಬಿಟ್ಟು ಬೇರೆ ಯಾವ ದಾರಿಯೂ ನಮ್ಮ ಮುಂದಿಲ್ಲ’ ಎಂದು ಎನ್‌ಆರ್‌ಎಐನ ಅಧಿಕಾರಿಯೊಬ್ಬರು ಕೆಲ ದಿನಗಳ ಹಿಂದೆ ಹೇಳಿದ್ದರು.

‘ಒಲಿಂಪಿಕ್‌ ಕ್ರೀಡಾಕೂಟವನ್ನು ಒಂದು ವರ್ಷ ಮುಂದಕ್ಕೆ ಹಾಕಲಾಗಿದೆ. ನವದೆಹಲಿ ವಿಶ್ವಕಪ್‌ನಲ್ಲಿ ಭಾಗವಹಿಸಲು ವಿದೇಶಿ ಶೂಟರ್‌ಗಳು ಬರಬೇಕು. ಅವರಿಗೆ ವೀಸಾ ಸಮಸ್ಯೆಯಾಗುತ್ತಿದೆ. ಪಿಸ್ತೂಲ್‌ ಹಾಗೂ ಇತರೆ ಉಪಕರಣಗಳನ್ನು ತೆಗೆದುಕೊಂಡು ಬರಲು ಅನುಮತಿ ಕೂಡ ಸಿಗುತ್ತಿಲ್ಲ. ಹೀಗೆ ಸಾಲು ಸಾಲು ಸಮಸ್ಯೆಗಳು ತಲೆದೋರಿವೆ’ ಎಂದೂ ಅವರು ತಿಳಿಸಿದ್ದರು.

ಸ್ಲೊವೇನಿಯಾದ ಶೂಟರ್‌, ಒಲಿಂಪಿಕ್ಸ್‌ನಲ್ಲಿ ಮೂರು ಪದಕಗಳನ್ನು ಗೆದ್ದ ಸಾಧನೆ ಮಾಡಿರುವ ರಾಜ್‌ಮಂಡ್‌ ಡೆಬೆವೆಕ್‌ ಅವರೂ ವಿಶ್ವಕಪ್‌ ರದ್ದು ಮಾಡುವಂತೆ ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT