ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷೆ ಮೂಡಿಸಿದ ಸೀಮಾ; ನಿಶಾ, ಪೂಜಾಗೆ ನಿರಾಸೆ

ಒಲಿಂಪಿಕ್ಸ್ ಅರ್ಹತಾ ಕುಸ್ತಿ ಟೂರ್ನಿ: ಅನಾ ಲುಕಾಸಿಯಾಕ್ ಎದುರು ನಿರ್ಣಾಯಕ ಹೋರಾಟ
Last Updated 7 ಮೇ 2021, 13:57 IST
ಅಕ್ಷರ ಗಾತ್ರ

ಸೋಫಿಯಾ, ಬಲ್ಗೇರಿಯ: ಎದುರಾಳಿಗಳ ಪ್ರಬಲ ಸ್ಪರ್ಧೆಯನ್ನು ಮೀರಿ ಸೆಮಿಫೈನಲ್ ತಲುಪಿರುವ ಭಾರತದ ಸೀಮಾ ಬಿಸ್ಲಾ ಅವರು ಟೋಕಿಯೊ ಒಲಿಂಪಿಕ್ಸ್‌ ಅರ್ಹತೆಗಾಗಿ ಇಲ್ಲಿ ನಡೆಯುತ್ತಿರುವ ಕುಸ್ತಿ ಟೂರ್ನಿಯಲ್ಲಿ ಭರವಸೆ ಮೂಡಿಸಿದ್ದಾರೆ. ಆದರೆ ನಿಶಾ ಮತ್ತು ಪೂಜಾ ನಿರಾಸೆಗೊಂಡಿದ್ದಾರೆ.

50 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಸೀಮಾ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಬೆಲಾರಸ್‌ನ ಅನಸ್ತೇಸಿಯಾ ಎನಟೋವಾ ವಿರುದ್ಧ 8–0ಯಿಂದ ಜಯ ಗಳಿಸಿದರು. ನಾಲ್ಕರ ಘಟ್ಟದಲ್ಲಿ ಪೋಲೆಂಡ್‌ನ ಅನಾ ಲುಕಾಸಿಯಾಕ್ ಎದುರು ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸಿದರೆ ಅವರಿಗೆ ಒಲಿಂಪಿಕ್ ಟಿಕೆಟ್ ಖಚಿತವಾಗಲಿದೆ.

ಅಲ್ಮಾಟಿಯಲ್ಲಿ ಈಚೆಗೆ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸೀಮಾ ಮೊದಲ ಸುತ್ತಿನಲ್ಲಿ ಸ್ವೀಡನ್‌ನ ಎಮಾ ಜೊನಾ ಡೆನಿಸ್ ಅವರನ್ನು ಕೇವಲ 43 ಸೆಕೆಂಡುಗಳಲ್ಲಿ ಮಣಿಸಿದರು.

68 ಕೆಜಿ ವಿಭಾಗದಲ್ಲಿ ನಿಶಾ ಬಲ್ಗೇರಿಯದ ಮಿಮಿ ಹೃಸ್ಟೋವಗೆ ಮಣಿದರು. ಪ್ರಬಲ ಪಟ್ಟುಗಳನ್ನು ಪ್ರಯೋಗಿಸಿದ ಮಿಮಿ ರಕ್ಷಣಾತ್ಮಕ ಆಟದಲ್ಲೂ ಪಾರಮ್ಯ ಮೆರೆದರು. ಹೀಗಾಗಿ ಪಾಯಿಂಟ್ ಗಳಿಸಲು ಭಾರತದ ಕುಸ್ತಿಪಟು ಪರದಾಡಿದರು. ತಾಂತ್ರಿಕವಾಗಿ ಮೇಲುಗೈ ಸಾಧಿಸುವ ಮೂಲಕ ಮಿಮಿ ಸೆಮಿಫೈನಲ್ ಪ್ರವೇಶಿಸಿದರು. ಮೊದಲ ಸುತ್ತಿನಲ್ಲಿ ನಿಶಾ ಗೆಲುವು ಸಾಧಿಸಿದ್ದರು. ಆದರೆ ಕ್ವಾರ್ಟರ್ ಫೈನಲ್ ಬೌಟ್‌ನಲ್ಲಿ ಪೋಲೆಂಡ್‌ನ ನತಾಲಿಯಾ ಇವೋನಾ ಎದುರು ಸೋತರು. ‌

76 ಕೆಜಿ ವಿಭಾಗದಲ್ಲಿ ಪೂಜಾ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಅವರನ್ನು ಲಿಥುವೇನಿಯಾದ ಕಮಿಲೆ ಗೌಜೇಟ್‌ 4–3ರಲ್ಲಿ ಮಣಿಸಿದರು.

ಮಹಿಳಾ ವಿಭಾಗದಲ್ಲಿ ವಿನೇಶಾ ಪೋಗಟ್ (53 ಕೆಜಿ), ಅನ್ಶು ಮಲಿಕ್ (57 ಕೆಜಿ) ಮತ್ತು ಸೋನಂ ಮಲಿಕ್ (62 ಕೆಜಿ) ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ಗುರುವಾರ ನಡೆದ ಪುರುಷರ ಬೌಟ್‌ನಲ್ಲಿ ಸುಮಿತ್ ಮಲಿಕ್ (125 ಕೆಜಿ) ಫೈನಲ್ ಪ್ರವೇಶಿಸುವ ಮೂಲಕ ಅರ್ಹತೆ ಗಳಿಸಿದ್ದರು. ಅವರು ಒಲಿಂಪಿಕ್ಸ್‌ಗೆ ಟಿಕೆಟ್ ಗಿಟ್ಟಿಸಿಕೊಂಡ ಪುರುಷರ ವಿಭಾಗದ ನಾಲ್ಕನೇ ಕುಸ್ತಿಪಟು ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT