₹50 ಕೋಟಿಯ ಒಪ್ಪಂದಕ್ಕೆ ಸಹಿ ಹಾಕಿದ ಸಿಂಧು

7
ಚೀನಾದ ಕ್ರೀಡಾ ಉತ್ಪನ್ನ ತಯಾರಿಕಾ ಸಂಸ್ಥೆ ಲೀ ನಿಂಗ್‌ ಜೊತೆ ಒಡಂಬಡಿಕೆ

₹50 ಕೋಟಿಯ ಒಪ್ಪಂದಕ್ಕೆ ಸಹಿ ಹಾಕಿದ ಸಿಂಧು

Published:
Updated:
Prajavani

ನವದೆಹಲಿ: ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಬೆಳ್ಳಿಯ ಪದಕಗಳನ್ನು ಗೆದ್ದ ಸಾಧನೆ ಮಾಡಿರುವ ಭಾರತದ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಅವರು ಚೀನಾದ ಕ್ರೀಡಾ ಉತ್ಪನ್ನ ತಯಾರಿಕಾ ಸಂಸ್ಥೆ ಲೀ ನಿಂಗ್‌ ಜೊತೆ ₹ 50 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಆಟಗಾರ್ತಿಯೊಬ್ಬರು ಸಂಸ್ಥೆಯೊಂದರ ಜೊತೆ ಇಷ್ಟು ದೊಡ್ಡ ಮೊತ್ತದ ಒಡಂಬಡಿಕೆಗೆ ಸಹಿ ಮಾಡಿರುವುದು ಬ್ಯಾಡ್ಮಿಂಟನ್‌ ಇತಿಹಾಸದಲ್ಲೇ ಮೊದಲು.

‘ಸಿಂಧು ಅವರೊಂದಿಗೆ ನಾಲ್ಕು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಾಯೋಜಕತ್ವದಿಂದ ಅವರಿಗೆ ₹40 ಕೋಟಿ ಸಿಗಲಿದೆ. ಉಳಿದ ಮೊತ್ತದಲ್ಲಿ ಅವರಿಗೆ ಕ್ರೀಡಾ ಪರಿಕರಗಳನ್ನು ಪೂರೈಸಲಾಗುತ್ತದೆ’ ಎಂದು ಲೀ ನಿಂಗ್‌ ಜೊತೆ ಸಹಯೋಗ ಹೊಂದಿರುವ ಸನ್‌ಲೈಟ್‌ ಸ್ಪೋರ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕ ಮಹೇಂದರ್‌ ಕಪೂರ್‌ ತಿಳಿಸಿದ್ದಾರೆ. 

ಸಿಂಧು ಅವರು ಲೀ ನಿಂಗ್‌ ಜೊತೆ ಎರಡನೇ ಸಲ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೊದಲು ಎರಡು ವರ್ಷಗಳ ಅವಧಿಗೆ (2014 ರಿಂದ 2015) ₹2.5 ಕೋಟಿ ಮೊತ್ತ ಪಡೆದಿದ್ದರು.

2016ರಲ್ಲಿ ಅವರು ಯೂನೆಕ್ಸ್‌ ಸಂಸ್ಥೆ ಜೊತೆ ಮೂರು ವರ್ಷಗಳ ಅವಧಿಗೆ ₹10.5 ಕೋಟಿಗೆ ಒಪ್ಪಂದ ಮಾಡಿಕೊಂಡಿದ್ದರು.

ವಾರ್ಷಿಕ ಪ್ರಾಯೋಜಕತ್ವದ ಲೆಕ್ಕಾಚಾರದಲ್ಲಿ ಸಿಂಧು, ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ದಾಖಲೆಯ ಸನಿಹವಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ವಿರಾಟ್‌ ಅವರು 2017ರಲ್ಲಿ ಪೂಮಾ ಸಂಸ್ಥೆಯ ಜೊತೆ ಒಟ್ಟು ₹100 ಕೋಟಿಯ ಒಡಂಬಡಿಕೆ (ಎಂಟು ವರ್ಷ) ಮಾಡಿಕೊಂಡಿದ್ದರು. ಇದರನ್ವಯ ಅವರಿಗೆ ವಾರ್ಷಿಕ ₹12.5 ಕೋಟಿ ಸಿಗುತ್ತಿದೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಜಯಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆ ಹೊಂದಿರುವ ಸಿಂಧು, ಹೋದ ವರ್ಷ ಫೋಬ್ಸ್‌ ನಿಯತಕಾಲಿಕೆ ಬಿಡುಗಡೆ ಮಾಡಿದ್ದ ವಿಶ್ವದ ಶ್ರೀಮಂತ ಮಹಿಳಾ ಕ್ರೀಡಾಪಟುಗಳ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದಿದ್ದರು.

ಲೀ ನಿಂಗ್‌ ಸಂಸ್ಥೆಯು ಹೋದ ತಿಂಗಳು ಕಿದಂಬಿ ಶ್ರೀಕಾಂತ್‌ ಜೊತೆ ₹35 ಕೋಟಿಯ (ನಾಲ್ಕು ವರ್ಷ) ಒಪ್ಪಂದ ಮಾಡಿಕೊಂಡಿತ್ತು. ಈಗ ಡಬಲ್ಸ್‌ ವಿಭಾಗದ ಆಟಗಾರರಾದ ಮನು ಅತ್ರಿ ಮತ್ತು ಬಿ.ಸುಮೀತ್‌ ರೆಡ್ಡಿ ಅವರೊಂದಿಗೆ ಎರಡು ವರ್ಷ (ಒಬ್ಬರಿಗೆ ₹ 4 ಕೋಟಿ) ಹಾಗೂ ಸಿಂಗಲ್ಸ್‌ ವಿಭಾಗದ ಆಟಗಾರ ಪರುಪಳ್ಳಿ ಕಶ್ಯಪ್‌ ಜೊತೆ ₹ 8 ಕೋಟಿಯ (ಎರಡು ವರ್ಷ) ಒಪ್ಪಂದ ಮಾಡಿಕೊಂಡಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !