ಬುಧವಾರ, ಆಗಸ್ಟ್ 10, 2022
25 °C
ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ: ಸೈನಾ ನೆಹ್ವಾಲ್‌ಗೆ ನಿರಾಸೆ

ಸಿಂಧು, ಪರುಪಳ್ಳಿ ಕಶ್ಯಪ್ ಜಯಭೇರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೌಲಾಲಂಪುರ: ಮಲೇಷ್ಯಾ ಓಪನ್ ಸೂಪರ್‌ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಭಾರತದ ಪಿ.ವಿ.ಸಿಂಧು ಗೆಲುವಿನ ಸಿಹಿ ಸವಿದರೆ, ಸೈನಾ ನೆಹ್ವಾಲ್‌ ನಿರಾಸೆ ಅನುಭವಿಸಿದರು. ಪುರುಷರ ವಿಭಾಗದಲ್ಲಿ ಪರುಪಳ್ಳಿ ಕಶ್ಯಪ್ ಶುಭಾರಂಭ ಮಾಡಿದರು.

ಮಾಜಿ ವಿಶ್ವ ಚಾಂಪಿಯನ್ ಸಿಂಧು, ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ 21-13, 21-17ರಿಂದ ಥಾಯ್ಲೆಂಡ್‌ನ ಪಾರ್ನ್‌ಪವೀ ಚೊಚುವಾಂಗ್ ಅವರನ್ನು ಸೋಲಿಸಿದರು.

ಭಾರತದ ಆಟಗಾರ್ತಿಗೆ ವಿಶ್ವ ಕ್ರಮಾಂಕದಲ್ಲಿ 10ನೇ ಸ್ಥಾನದಲ್ಲಿರುವ ಚೊಚುವಾಂಗ್ ತೀವ್ರ ಪೈಪೋಟಿಯನ್ನೇ ನೀಡಿದರು. ಅಂಗಣ ‘ಕವರ್’ ಮಾಡುವಲ್ಲಿ ಸಿಂಧು ಪಾರಮ್ಯ ಮೆರೆದರೆ, ರ‍್ಯಾಲಿಗಳಲ್ಲಿ ಉಭಯ ಆಟಗಾರ್ತಿಯರು ಸಮಬಲದ ಹೋರಾಟ ನಡೆಸಿದರು. ಫಿನಿಶಿಂಗ್ ಹೊಡೆತಗಳಲ್ಲಿ ಪರದಾಟ ಮತ್ತು ಹಲವು ಲೋಪಗಳು ಚೊಚುವಾಂಗ್ ಸೋಲಿಗೆ ಕಾರಣವಾದವು.

ಇಲ್ಲಿ ಏಳನೇ ಶ್ರೇಯಾಂಕ ಪಡೆದಿರುವ ಸಿಂಧು, ಮುಂದಿನ ಪಂದ್ಯದಲ್ಲಿ ಥಾಯ್ಲೆಂಡ್‌ನ 21 ವರ್ಷದ ಪಿಟ್ಟಾಯಪರ್ನ್‌ ಚೈವಾನ್ ಅವರನ್ನು ಎದುರಿಸಲಿದ್ದಾರೆ.

ಲಂಡನ್‌ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ 11-21, 17-21ರಿಂದ ಅಮೆರಿಕದ ಐರಿಸ್‌ ವಾಂಗ್ ಎದುರು ಮಣಿದರು.

ಕಾಮನ್‌ವೆಲ್ತ್ ಗೇಮ್ಸ್ ಮಾಜಿ ಚಾಂಪಿಯನ್‌ ಕಶ್ಯಪ್‌ ಮೊದಲ ಸುತ್ತಿನ ಪಂದ್ಯದಲ್ಲಿ 21-12, 21-17ರಿಂದ ಕೊರಿಯಾದ ಹೆವೊ ಕ್ವಾಂಗ್‌ ಹೀ ಅವರನ್ನು ಸೋಲಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 39ನೇ ಸ್ಥಾನದಲ್ಲಿರುವ ಭಾರತದ ಆಟಗಾರನಿಗೆ ಮುಂದಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಕುನ್ಲಾವುತ್ ವಿತಿದ್ಸರ್ನ್ ಸವಾಲು ಎದುರಾಗಿದೆ.

ಮಿಶ್ರ ಡಬಲ್ಸ್‌ನಲ್ಲಿ ಬಿ. ಸುಮಿತ್ ರೆಡ್ಡಿ– ಅಶ್ವಿನಿ ಪೊನ್ನಪ್ಪ 15-21, 21-19, 17-21ರಿಂದ ನೆದರ್ಲೆಂಡ್ಸ್‌ನ ರಾಬಿನ್ ಟೇಬಲಿಂಗ್‌ ಮತ್ತು ಸೆಲೆನಾ ಪಿಯಕ್ ವಿರುದ್ಧ ಸೋಲು ಕಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು