ಶುಕ್ರವಾರ, ಮೇ 27, 2022
22 °C

ಸ್ಪೇನ್‌ನಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಎಂಟರ ಘಟ್ಟದಲ್ಲಿ ಸಿಂಧು-ತೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವೆಲ್ವಾ, ಸ್ಪೇನ್ (ಪಿಟಿಐ): ಹಾಲಿ ಚಾಂಪಿಯನ್, ಭಾರತದ ಪಿ.ವಿ. ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.

ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಚೈನಿಸ್ ತೈಪೆಯ ತೈ ಜು ಯಿಂಗ್ ವಿರುದ್ಧ ಸೆಣಸುವರು. 

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ 21–14, 21–18ರ ನೇರ ಗೇಮ್‌ಗಳಲ್ಲಿ ಥಾಯ್ಲೆಂಡ್‌ನ ಪಾರ್ನ್‌ಪಾವಿ ಚೊಚುವಾಂಗ್ ವಿರುದ್ಧ ಗೆದ್ದರು. 

48 ನಿಮಿಷ ನಡೆದ ಹಣಾಹಣಿಯಲ್ಲಿ ಸಿಂಧು ಆಟ ಉತ್ಕೃಷ್ಟ ಗುಣಮಟ್ಟದ್ದಾಗಿತ್ತು. ಆರನೇ ಶ್ರೇಯಾಂಕದ ಸಿಂಧು ಯಾವುದೇ ಹಂತದಲ್ಲಿಯೂ ಚೊಚುವಾಂಗ್ ಅವರು ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ.  ಮೊದಲ ಗೇಮ್‌ನಲ್ಲಿ  ಆರಂಭದಲ್ಲಿಯೇ 5–1ರಿಂದ ಮುನ್ನಡೆ ಪಡೆಯುವ ಮೂಲಕ ಸರಳ ಜಯದತ್ತ ಮುನ್ನಡೆದರು. 

ಆದರೆ, ಎರಡನೇ ಗೇಮ್‌ನಲ್ಲಿ  ಥಾಯ್ಲೆಂಡ್ ಆಟಗಾರ್ತಿ ಸ್ವಲ್ಪ ಪೈಪೋಟಿಯೊಡ್ಡಿದರು.  ಆರಂಭದಲ್ಲಿ 3–0 ಮುನ್ನಡೆ ಪಡೆ ಸಿಂಧುಗೆ ನಂತರದ ಹಂತದಲ್ಲಿ ತುಸು ಪೈಪೋಟಿ ಎದುರಾಯಿತು.  ಆದರೂ 16–10ರವರೆಗೂ ಸಿಂಧು ಮುನ್ನಡೆಯಲಿದ್ದರು. ಈ ಹಂತದಲ್ಲಿ ಪುಟಿದೆದ್ದ ಥಾಯ್ ಆಟಗಾರ್ತಿಯ ಹೋರಾಟದಿಂದಾಗಿ 19–18ರವರೆಗಿನ ಅಂತರಕ್ಕೆ ಗೇಮ್ ಬೆಳೆಯಿತು. 

ಆದರೆ ಈ ಹಂತದಲ್ಲಿ ಸಿಂಧು ತಡ ಮಾಡದೇ, ತಮ್ಮ ಗೆಲುವಿನ ಹಾದಿಯನ್ನು ಕಂಡುಕೊಂಡರು.  

ಈ ಗೆಲುವಿನೊಂದಿಗೆ ಸಿಂಧು ಚೊಚುವಾಂಗ್ ವಿರುದ್ಧ ಆಡಿದ ಪಂದ್ಯಗಳಲ್ಲಿ 5–3ರಿಂದ ಮುನ್ನಡೆ ಸಾಧಿಸಿದರು. ಈ ಋತುವಿನ ಕಳೆದೆರಡು ಟೂರ್ನಿಗಳಲ್ಲಿ ಸಿಂಧು ಚೊಚುವಾಂಗ್ ವಿರುದ್ಧ ಸೋತಿದ್ದರು. ಈ ತಿಂಗಳ ಆರಂಭದಲ್ಲಿ ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್‌ ಗುಂಪು ಹಂತದ ಪಂದ್ಯ ಮತ್ತು ಹೋದ ಮಾರ್ಚ್‌ನಲ್ಲಿ ನಡೆದಿದ್ದ ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ  ಸಿಂಧುಗೆ ಚೋಚುವಾಂಗ್ ಆಘಾತ ನೀಡಿದ್ದರು. 

ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಸಿಂಧುಗೆ ಬೈ ಲಭಿಸಿತ್ತು. ಎರಡನೇ ಪಂದ್ಯದಲ್ಲಿ ಮಾರ್ಟಿನಾ ರೆಪಿಸ್ಕಾ ವಿರುದ್ಧ ಜಯಿಸಿದ್ದರು. 

ಇನ್ನೊಂದು ಪಂದ್ಯದಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ತೈ ಜು ಯಿಂಗ್ 21–10, 19–21, 21–11ರಿಂದ ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್ಮೋರ್ ವಿರುದ್ಧ ಜಯಿಸಿ ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು