ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪಲ್ಲಟ; ಆಮೂಲಾಗ್ರ ಬದಲಾವಣೆ

ಕಾಂಗ್ರೆಸ್, ಬಿಜೆಪಿಗಷ್ಟೇ ಮತದಾರರ ಮನ್ನಣೆ l ಸಮಾಜವಾದಿ ನೆಲೆಯಲ್ಲಿ ಖಾತೆ ತೆರೆಯದ ಇತರ ಪಕ್ಷಗಳು
Last Updated 16 ಮಾರ್ಚ್ 2018, 18:57 IST
ಅಕ್ಷರ ಗಾತ್ರ

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ. ಇದು ರಾಜ್ಯ ಬಿಜೆಪಿ ಶಕ್ತಿ ಕೇಂದ್ರ. ಪಕ್ಷದ ಚಟುವಟಿಕೆಗಳ ಕೇಂದ್ರ ಸ್ಥಾನ. ಕಳೆದ 10 ವರ್ಷಗಳಲ್ಲಿ ಶಿವಮೊಗ್ಗ ನಗರ ಆಮೂಲಾಗ್ರ ಬದಲಾವಣೆ ಕಂಡಿದೆ. ರಾಜಕೀಯ ಪಲ್ಲಟಗಳಿಗೆ ಸಾಕ್ಷಿಯಾಗಿದೆ.

ಸ್ವಾತಂತ್ರ್ಯಾನಂತರ ಜಿಲ್ಲೆಯಲ್ಲಿ ಸಮಾಜವಾದಿ ಚಳವಳಿಯ ಗಾಳಿ ಜೋರಾಗಿ ಬೀಸಿದರೂ, ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರು ಮಣೆ ಹಾಕಿದ್ದು ಮಾತ್ರ ‘ಕೈ’ಗೆ. ಮೂರು ದಶಕಗಳ ಕಾಲ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ 1983ರಲ್ಲಿ ಮೊದಲ ಬಾರಿ ಕಮಲ ಅರಳಿತ್ತು. ಅಲ್ಲಿಂದ ಇಲ್ಲಿಯವರೆಗೂ ನಡೆದ 8 ಚುನಾವಣೆಗಳಲ್ಲಿ 5 ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಮೂರು ಬಾರಿ ಸೋಲು ಕಂಡಿದೆ.

ಹೀಗಾಗಿ ಜಿಲ್ಲೆ ಸಮಾಜವಾದಿಯ ನೆಲೆಯಾದರೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹೊರತುಪಡಿಸಿದರೆ ಉಳಿದ ಯಾವ ಪಕ್ಷಗಳೂ ಇದುವರೆಗೆ ಖಾತೆ ತೆರೆದಿಲ್ಲ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರು 1989ರಿಂದ 2008ರವರೆಗೆ ನಡೆದ ಐದು ಚುನಾವಣೆಗಳಲ್ಲಿ ನಾಲ್ಕು ಬಾರಿ ಈ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1999ರಲ್ಲಿ ಕಾಂಗ್ರೆಸ್‌ನ ಎಚ್‌.ಎಂ.ಚಂದ್ರಶೇಖರಪ್ಪ ಆಯ್ಕೆಯಾಗಿದ್ದರು. ಕಾಂಗ್ರೆಸ್‌ ನಾಯಕ ಕೆ.ಎಚ್. ಶ್ರೀನಿವಾಸ್ 1978 ಹಾಗೂ 1985ರಲ್ಲಿ ಎರಡು ಬಾರಿ ಗೆಲುವು ಕಂಡಿದ್ದಾರೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಈಶ್ವರಪ್ಪ ಹಾಗೂ ಕೆಜೆಪಿ ಅಭ್ಯರ್ಥಿ ಎಸ್‌. ರುದ್ರೇಗೌಡ ಅವರನ್ನು ಸೋಲಿಸಿದ ಕಾಂಗ್ರೆಸ್‌ನ ಕೆ.ಬಿ. ಪ್ರಸನ್ನ ಕುಮಾರ್ ಇಲ್ಲಿಂದ ವಿಧಾನಸಭೆ ಪ್ರವೇಶಿಸಿದ್ದರು.

ಅಭಿವೃದ್ಧಿ ಪರ್ವ: ಸಾಂಪ್ರದಾಯಿಕ ನೆಲೆಯಲ್ಲೇ ಇದ್ದ ಶಿವಮೊಗ್ಗ ನಗರಕ್ಕೆ ಹೈಟೆಕ್‌ ಸ್ಪರ್ಶ ನೀಡಿದ್ದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕ್ಷೇತ್ರದ ಶಾಸಕರಾಗಿದ್ದ ಈಶ್ವರಪ್ಪ ಜೋಡಿ.

ಬಿ.ಎಚ್. ರಸ್ತೆ ವಿಸ್ತರಣೆ, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣ, ರೈಲು ನಿಲ್ದಾಣಗಳ ಆಧುನೀಕರಣ, ವೈದ್ಯಕೀಯ ಕಾಲೇಜು, ಆಯುರ್ವೇದ ಕಾಲೇಜು, ಪಶು ವೈದ್ಯಕೀಯ ಕಾಲೇಜು, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳ ಸ್ಥಾಪನೆ, ಜಿಲ್ಲಾಧಿಕಾರಿ ಕಚೇರಿ, ಶಿವಪ್ಪ ನಾಯಕ ಮಾರುಕಟ್ಟೆ, ಒಳಾಂಗಣ ಕ್ರೀಡಾಂಗಣ, ಸುವರ್ಣ ಸಂಸ್ಕೃತಿ ಭವನ ನಿರ್ಮಾಣದ ಮೂಲಕ ಶಿವಮೊಗ್ಗದ ಪ್ರಗತಿಗೆ ಅವರು ಸಾಕಷ್ಟು ಕೊಡುಗೆ ನೀಡಿದ್ದರು. ಆ ಅವಧಿಯಲ್ಲಿ ಸುಮಾರು ಎರಡೂವರೆ ಸಾವಿರ ಕೋಟಿ ರೂಪಾಯಿ ಅನುದಾನ ನಗರದ ಅಭಿವೃದ್ಧಿಗೆ ಹರಿದುಬಂದಿತ್ತು.

ಮೂಲ ಸೌಕರ್ಯಗಳ ಅಭಿವೃದ್ಧಿಗೆ ದೊಡ್ಡ ಪ್ರಮಾಣದ ಹಣ ಹರಿದು ಬಂದು, ಯೋಜನೆಗಳು ಅನುಷ್ಠಾನಗೊಂಡರೂ ಜೊತೆಯಲ್ಲಿ ಟೀಕೆಗಳೂ ಕೇಳಿಬಂದವು. ಸಮಗ್ರ ಅಭಿವೃದ್ಧಿಯ ನೆಪದಲ್ಲಿ ಕೆಲವು ಬಿಜೆಪಿ ಮುಖಂಡರು ವಿವಿಧ ಸಂಸ್ಥೆಗಳ ಹೆಸರಲ್ಲಿ ಶಾಲಾ, ಕಾಲೇಜು, ಆಸ್ಪತ್ರೆ, ವಸತಿ, ವಾಣಿಜ್ಯ ಸಂಕೀರ್ಣಗಳ ಸಾಮ್ರಾಜ್ಯ ಕಟ್ಟಿಕೊಂಡರು ಎಂದು ಕಾಂಗ್ರೆಸ್ ಹಾಗೂ ಬಿಜೆಪಿಯ ಹಲವು ಮುಖಂಡರು ದೂರುತ್ತಾರೆ.

ಪ್ರಸನ್ನ ಕುಮಾರ್ ಅವರು 2013ರಲ್ಲಿ ಶಾಸಕರಾಗಿ ಆಯ್ಕೆಯಾದ ನಂತರ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿವೆ. ಕೇಂದ್ರ ಸರ್ಕಾರದ ‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಶಿವಮೊಗ್ಗ ಆಯ್ಕೆಯಾಗಿದೆ. ಈಗಾಗಲೇ ₹ 206 ಕೋಟಿ ಬಿಡುಗಡೆಯಾಗಿದೆ. ಅಮೃತ್ ಯೋಜನೆಯೂ ಅನುಷ್ಠಾನಗೊಂಡಿದೆ. ಯುಜಿಡಿ ಜಾಲ ಶೇ 70ರಷ್ಟು ಪೂರ್ಣಗೊಂಡಿದೆ. ಗಾಜನೂರು ತುಂಗಾ ಜಲಾಶಯದಿಂದ ನಗರಕ್ಕೆ ನಿರಂತರ ನೀರು ಸರಬರಾಜು ಯೋಜನೆ ₹ 14 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ. ನಗರದೊಳಗೆ ಹಾದು ಹೋಗಿದ್ದು, ಕೊಳಚೆ ತಾಣವಾಗಿದ್ದ ತುಂಗಾ ನಾಲೆಗೆ ಆಧುನೀಕರಣದ ಸ್ಪರ್ಶ ನೀಡಲಾಗಿದೆ. ₹ 220 ಕೋಟಿ ವೆಚ್ಚದಲ್ಲಿ ತುಂಗಾ ನಾಲೆಗೆ ತಡೆಗೋಡೆ, ನೂತನ ಸೇತುವೆ ನಿರ್ಮಿಸಲಾಗಿದೆ.

ಗಾಂಧಿ ಪಾರ್ಕ್‌ನಲ್ಲಿ 100 ಅಡಿ ಎತ್ತರದ ಧ್ವಜಸ್ತಂಭ, ₹ 1.47 ಕೋಟಿ ವೆಚ್ಚದಲ್ಲಿ ಆಚಾರ್ಯತ್ರಯರ ಭವನ ನಿರ್ಮಾಣ, ₹ 143 ಕೋಟಿ ವೆಚ್ಚದಲ್ಲಿ ಪಶುವೈದ್ಯಕೀಯ ಕಾಲೇಜಿನ ಮೂಲ ಸೌಕರ್ಯ ಅಭಿವೃದ್ಧಿ, ಪರಿಶಿಷ್ಟರು ವಾಸಿಸುವ ಪ್ರದೇಶದಲ್ಲಿ ₹ 37.25 ಕೋಟಿ ವೆಚ್ಚದಲ್ಲಿ ಬಾಕ್ಸ್ ಚರಂಡಿ ನಿರ್ಮಾಣ, ಎಪಿಎಂಸಿಯಲ್ಲಿ ₹1.42 ಕೋಟಿ ವೆಚ್ಚದ ಶೀತಲೀಕರಣ ಘಟಕ, ನೆಹರೂ ಕ್ರೀಡಾಂಗಣದ ಕಟ್ಟಡ ದುರಸ್ತಿ
ಮಾಡಲಾಗಿದೆ.

ಕೊಳಚೆ ನಿರ್ಮೂಲನಾ ಮಂಡಳಿಯಿಂದ ₹ 23.85 ಕೋಟಿ ವೆಚ್ಚದಲ್ಲಿ 1,590 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ವಾಜಪೇಯಿ ವಸತಿ ಯೋಜನೆಯಲ್ಲಿ ತಲಾ ₹ 5 ಲಕ್ಷದ ವೆಚ್ಚದಲ್ಲಿ 6,144 ಆಶ್ರಯ ಮನೆಗಳನ್ನು ಕಟ್ಟಿಕೊಡಲು ಆರ್ಥಿಕವಾಗಿ ಹಿಂದುಳಿದ ಫಲಾನುಭವಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ.

‘ಶಾಸಕರಾಗಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ, ಅದರಲ್ಲಿ ಬಹುತೇಕ ಅನುದಾನ ಬಿಜೆಪಿಯ ಅವಧಿಯಲ್ಲೇ ಬಿಡುಗಡೆಯಾಗಿತ್ತು. ಆ ಕಾಮಗಾರಿಗಳು ಮುಂದುವರಿದಿವೆ ಅಷ್ಟೆ’ ಎಂದು ಬಿಜೆಪಿ ಮುಖಂಡರು ಟೀಕಿಸುತ್ತಾರೆ.

ಕೊನೆಗೂ ಬಂದ ಸರ್ಕಾರಿ ಬಸ್: ನಗರದಲ್ಲಿ ಖಾಸಗಿ ಬಸ್‌ಗಳದ್ದೇ ಪಾರುಪತ್ಯವಿತ್ತು. ಕಳೆದ ಒಂದು ವರ್ಷದಿಂದ ಜೆ–ನರ್ಮ್‌ ಯೋಜನೆಯಡಿ 65 ಬಸ್‌ಗಳು ಸೇವೆ ನೀಡುತ್ತಿವೆ. ಹಾಗಾಗಿ, ನಗರದ ಬಹುತೇಕ ಭಾಗಗಳಿಗೆ ಈಗ ಬಸ್‌ ಸೇವೆ ಲಭಿಸಿದೆ. ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ತೆರೆಯಲಾಗಿದೆ. ₹ 180 ಕೋಟಿ ವೆಚ್ಚದಲ್ಲಿ ವಿದ್ಯುತ್ ಜಾಲ ಹೆಣೆಯಲಾಗಿದೆ.

ವಿಮಾನ ನಿಲ್ದಾಣ ನನೆಗುದಿಗೆ: ಸಮೀಪದ ಸೋಗಾನೆ ಬಳಿ ₹ 79.76 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕೇಂದ್ರ ಕಾರಾಗೃಹ ನಿರ್ಮಿಸಲಾಗಿದೆ. ಆದರೆ, ಬಹು ನಿರೀಕ್ಷಿತ ವಿಮಾನ ನಿಲ್ದಾಣ ನಿರ್ಮಾಣ ತಾಂತ್ರಿಕ ಕಾರಣಗಳಿಗಾಗಿ ನನೆಗುದಿಗೆ ಬಿದ್ದಿದೆ. ರೈತರ ತೀವ್ರ ವಿರೋಧದ ನಡುವೆಯೂ ವಶಪಡಿಸಿಕೊಂಡ ನೂರಾರು ಎಕರೆ ಭೂಮಿ ವ್ಯರ್ಥವಾಗಿದೆ. ತುಂಗಾ ನದಿಗೆ ನಗರದ ಕೊಳಚೆ ನೀರು ಸೇರುವುದನ್ನು ತಡೆಯಲು ಸೂಕ್ತ ಯೋಜನೆ ರೂಪಿಸಿಲ್ಲ. ಇಲ್ಲಿನ ಜನರಿಗೆ ಉದ್ಯೋಗ ನೀಡುವ, ಕೃಷಿಗೆ ಪೂರಕ ಕೈಗಾರಿಕೆಗಳ ಸ್ಥಾಪನೆಗೆ ಇದುವರೆಗೂ ಗಂಭೀರ ಪ್ರಯತ್ನ ನಡೆದಿಲ್ಲ.

ಮತಗಳ ಕ್ರೋಡೀಕರಣದ ಲೆಕ್ಕಾಚಾರ

ಬಿಜೆಪಿಯಿಂದ ಈ ಬಾರಿ ಕೆ.ಎಸ್. ಈಶ್ವರಪ್ಪ ಹಾಗೂ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌. ರುದ್ರೇಗೌಡರ ನಡುವೆ ಟಿಕೆಟ್‌ಗಾಗಿ ಸ್ಪರ್ಧೆ ಇದೆ. ಕಳೆದ ಬಾರಿ ಇಬ್ಬರೂ ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಎದುರು ಇಬ್ಬರೂ ಕೆಲವೇ ಮತಗಳ ಅಂತರದಿಂದ ಸೋಲು ಕಂಡಿದ್ದರು. ಈಗ ಪಕ್ಷದ ಟಿಕೆಟ್‌ ಯಾರಿಗೇ ಸಿಕ್ಕರೂ ಒಟ್ಟು ಮತಗಳ ಕ್ರೋಡೀಕರಣ ನೆರವಾಗುತ್ತದೆ ಎನ್ನುವ ಲೆಕ್ಕಾಚಾರ ಬಿಜೆಪಿಯದ್ದು.

***

ಶಿವಮೊಗ್ಗ ‘ಸ್ಮಾರ್ಟ್‌ ಸಿಟಿ’ಗೆ ಆಯ್ಕೆಯಾದರೂ ಸರ್ಕಾರಿ ಕಚೇರಿಗಳು, ಬಹು ಮುಖ್ಯ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಿಲ್ಲ. ವಿಶ್ರಾಂತಿ ಕೊಠಡಿಗಳನ್ನು ಮೀಸಲಿಟ್ಟಿಲ್ಲ.

–ಇ. ಪ್ರೇಮಾ, ವಕೀಲೆ

ಎರಡೂವರೆ ದಶಕದ ಹಿಂದೆ ಆರಂಭವಾದ ಯುಜಿಡಿ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ. ಆರ್ಥಿಕ ಪುನಶ್ಚೇತನಕ್ಕೆ ಒತ್ತು ನೀಡುವ ಕೈಗಾರಿಕೆಗಳು ಬಂದಿಲ್ಲ. ‘ನಮ್ಮ ಶಿವಮೊಗ್ಗ ನಾವೇ ಕಟ್ಟೋಣ’ ಎಂಬ ಕನಸೂ ಈಡೇರಿಲ್ಲ.

–ಗೋಪಿನಾಥ್, ಹೋಟೆಲ್‌ ಉದ್ಯಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT