ಬುಧವಾರ, ಜುಲೈ 6, 2022
22 °C
ಖೇಲೊ ಇಂಡಿಯಾ ಯೋಜನೆಯಡಿ ನೆರವು ನೀಡಲು ಕೇಂದ್ರ ಕ್ರೀಡಾ ಸಚಿವಾಲಯ ನಿರ್ಧಾರ

500 ಖಾಸಗಿ ಅಕಾಡೆಮಿಗಳಿಗೆ ಪ್ರೋತ್ಸಾಹಧನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಖೇಲೊ ಇಂಡಿಯಾ ಯೋಜನೆಯ ಮೂಲಕ, 500 ಖಾಸಗಿ ಅಕಾಡೆಮಿಗಳಿಗೆ ವಿತ್ತೀಯ ನೆರವು ವಿಸ್ತರಿಸುವ ಉದ್ದೇಶದಿಂದ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮವನ್ನು ಕೇಂದ್ರ ಕ್ರೀಡಾ ಸಚಿವಾಲಯ ಶನಿವಾರ ಪ್ರಕಟಿಸಿದೆ. 2020–21ರ ಸಾಲಿನಿಂದ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಹಣಕಾಸು ನೆರವು ನೀಡುವ ಯೋಜನೆ ಇದಾಗಿದೆ.

ಈ ಮಾದರಿಯಲ್ಲಿ ಖಾಸಗಿ ಅಕಾಡೆಮಿಗಳನ್ನು, ಅಲ್ಲಿ ತರಬೇತಿ ಪಡೆದ ಆಟಗಾರರ ಗುಣಮಟ್ಟ ಮತ್ತು ಸಾಧನೆ, ಅಕಾಡೆಮಿಯಲ್ಲಿ ಲಭ್ಯವಿರುವ ತರಬೇತುದಾರರ ಮಟ್ಟ, ಕ್ರೀಡಾಂಗಣದ ಗುಣಮಟ್ಟ ಮತ್ತು ಸಂಬಂಧಿತ ಮೂಲಸೌಕರ್ಯ, ಕ್ರೀಡಾ ವಿಜ್ಞಾನ ಸೌಲಭ್ಯಗಳ ಲಭ್ಯತೆ ಮತ್ತು ಸಿಬ್ಬಂದಿಯ ಆಧಾರದ ಮೇಲೆ ವಿವಿಧ ವಿಭಾಗಗಳಾಗಿ ವರ್ಗೀಕರಿಸಲಾಗುತ್ತದೆ.

2028ರ ಒಲಿಂಪಿಕ್ಸ್‌ಗಾಗಿ ಶ್ರೇಷ್ಠವೆಂದು ಗುರುತಿಸಲಾದ 14 ವಿಭಾಗಗಳ ಅಕಾಡೆಮಿಗಳು ಮೊದಲ ಹಂತದಲ್ಲಿ ಹಣಕಾಸು ನೆರವು ಪಡೆಯಲು ಅರ್ಹವಾಗುತ್ತವೆ.

ಸರ್ಕಾರದ ನಿರ್ಧಾರದ ಕುರಿತು ಮಾತನಾಡಿದ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ‘ದೇಶದ ಅತ್ಯಂತ ಕುಗ್ರಾಮಗಳಿಂದಲೂ ಪ್ರತಿಭೆಗಳನ್ನು ಶೋಧಿಸುವ ಉದ್ದೇಶದಿಂದ ಖಾಸಗಿ ಸಂಸ್ಥೆಗಳಿಗೂ ಈ ನೆರವನ್ನು ವಿಸ್ತರಿಸುವುದು ಮುಖ್ಯವಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿರುವ ಹಲವು ಸಣ್ಣ ಅಕಾಡೆಮಿಗಳು ಅಥ್ಲೀಟ್‌ಗಳನ್ನು ಗುರುತಿಸಿ ತರಬೇತುಗೊಳಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ‘ ಎಂದಿದ್ದಾರೆ.

‘ಎಲ್ಲ ಅಕಾಡೆಮಿಗಳನ್ನು, ವಿಶೇಷವಾಗಿ ಖಾಸಗಿ ಅಕಾಡೆಮಿಗಳ ಮೂಲಸೌಕರ್ಯ, ಸಂಪನ್ಮೂಲಗಳನ್ನು ಹೆಚ್ಚಿಸುವುದರಿಂದ  ಅಥ್ಲೀಟ್‌ಗಳ ತರಬೇತಿ ಗುಣಮಟ್ಟವೂ ವೃದ್ಧಿಸುತ್ತದೆ‘ ಎಂದು ರಿಜಿಜು ನುಡಿದರು.

‘ಖಾಸಗಿ ಅಕಾಡೆಮಿಗಳಿಗೆ ಇದು ಬಹಳಷ್ಟು ಉತ್ತೇಜನ ನೀಡುತ್ತದೆ. ವಿಶ್ವದರ್ಜೆಯ ಮೂಲಸೌಕರ್ಯಗಳು ಹಾಗೂ ಕ್ರೀಡಾಪಟುಗಳ ಬೆಳವಣಿಗೆಗೆ ಅಗತ್ಯವಾದ ಹೆಚ್ಚಿನ ಸಂಪನ್ಮೂಲಗಳನ್ನು ಹೊಂದುವುದನ್ನು ಖಾತರಿಪಡಿಸಿಕೊಳ್ಳಲು ಇದು ಪ್ರೇರೇಪಿಸುತ್ತದೆ‘ ಎಂದು ಸಚಿವಾಲಯದ ನಿರ್ಧಾರದ ಕುರಿತು ಒಲಿಂಪಿಕ್ಸ್ ಪದಕ ವಿಜೇತ ಶೂಟಿಂಗ್ ಪಟು ಗಗನ್‌ ನಾರಂಗ್‌ ಪ್ರತಿಕ್ರಿಯಿಸಿದ್ದಾರೆ.

ಗಗನ್‌ ಅವರು ‘ಗನ್‌ ಫಾರ್‌ ಗ್ಲೋರಿ‘ ಎಂಬ ಖಾಸಗಿ ಅಕಾಡೆಮಿಯನ್ನು ನಡೆಸುತ್ತಿದ್ದಾರೆ.

ಈ ಯೋಜನೆಯಡಿ ಭಾರತದ ಕ್ರೀಡಾ ಪ್ರಾಧಿಕಾರ (ಸಾಯ್‌) ಮತ್ತು ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು (ಎನ್‌ಎಸ್ಎಫ್‌) ಒಟ್ಟಾಗಿ ಕಾರ್ಯನಿರ್ವಹಿಸಲಿವೆ. ಸಾಯ್‌, ಎನ್‌ಎಸ್‌ಎಫ್‌ಗಳೊಂದಿಗೆ ಚರ್ಚಿಸಿ, ಅಕಾಡೆಮಿಗಳ ವರ್ಗೀಕರಣವನ್ನು ಮಾಡಲಿದೆ.

ತರಬೇತಿಯ ಒಟ್ಟಾರೆ ಗುಣಮಟ್ಟವನ್ನು ಸುಧಾರಿಸಲು ಎಲ್ಲಾ ಅಕಾಡೆಮಿಗಳಲ್ಲಿ ಕ್ರೀಡಾ ವಿಜ್ಞಾನ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತದೆ.

‘ಇದು ದೇಶದ ಕ್ರೀಡೆಗಳಿಗೆ ಒಂದು ದೊಡ್ಡ ಉಪಕ್ರಮ. ಇದರಿಂದ ಎಲ್ಲ ವರ್ಗದ ಕ್ರೀಡಾಪಟುಗಳಿಗೆ ಮತ್ತು ಕ್ರೀಡಾ ವ್ಯವಸ್ಥೆಗೆ ಬಹಳಷ್ಟು ಅನುಕೂಲವಾಗುತ್ತದೆ‘ ಎಂದು ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್‌ ಪುಲ್ಲೇಲ ಗೋಪಿಚಂದ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು