ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ತೃತ ವರದಿಗೆ ಕ್ರೀಡಾ ಸಚಿವಾಲಯ ಬೇಡಿಕೆ

ಕ್ರೀಡಾಂಗಣಗಳ ನಿರ್ವಹಣೆ ಖಾಸಗಿ ಸಹಭಾಗಿತ್ವದಡಿ ತರುವ ಪ್ರಸ್ತಾವ
Last Updated 9 ಜುಲೈ 2019, 20:00 IST
ಅಕ್ಷರ ಗಾತ್ರ

ನವದೆಹಲಿ:ಜವಾಹರಲಾಲ್‌ ನೆಹರೂ ಕ್ರೀಡಾಂಗಣ (ಜೆಎಲ್‌ಎನ್‌) ಸೇರಿದಂತೆ ದೇಶದ ಪ್ರಮುಖ ಕ್ರೀಡಾಂಗಣಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವ ಸರ್ಕಾರದ ಪ್ರಸ್ತಾವಕ್ಕೆ ಸಂಬಂಧಿಸಿ ಕ್ರೀಡಾ ಸಚಿವಾಲಯವು ಕೇಂದ್ರ ಸರ್ಕಾರದಿಂದ ವಿಸ್ತೃತ ವಿವರಕ್ಕೆ ಬೇಡಿಕೆ ಇಟ್ಟಿದೆ.

ಭಾರತೀಯ ರೈಲ್ವೆಯ ಪಾರಂಪರಿಕ ಮಾರ್ಗ ಮತ್ತು ಆಯ್ದ ಕ್ರೀಡಾಂಗಣಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವಮೂಲಕ ₹ 1.05 ಲಕ್ಷ ಕೋಟಿ ಸಂಗ್ರಹಿಸುವ ಮಹತ್ಷಾಕಾಂಕ್ಷಿ ಯೋಜನೆಯನ್ನು ಸರ್ಕಾರ ಹೊಂದಿದೆ.

‘ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ ನೀತಿ ಆಯೋಗದ ಸದಸ್ಯರೊಬ್ಬರು ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಆದರೆ ಕ್ರೀಡಾಂಗಣಗಳು ಕ್ರೀಡಾಪಟುಗಳ ಬಳಕೆಗೆ ಮಾತ್ರ ಲಭ್ಯವಾಗಬೇಕು ಎಂಬುದು ನಮ್ಮ ಸ್ಪಷ್ಟ ನಿಲುವಾಗಿದೆ’ ಎಂದು ಕ್ರೀಡಾ ಸಚಿ ವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಜೆಎಲ್‌ಎನ್‌ ಕ್ರೀಡಾಂಗಣದ ಜೊತೆಗೆ ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾ ಸಂಕೀರ್ಣ (ಐಜಿಐ) ಹಾಗೂ ಕರ್ನೈಲ್‌ ಸಿಂಗ್‌ ಕ್ರೀಡಾಂಗಣಗಳನ್ನೂ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ)ದಡಿ ತರಲು ಸರ್ಕಾರ ಸಲಹೆ ಮಾಡಿದೆ. ಜೆಎಲ್‌ಎನ್‌ ಬಹುಪಯೋಗಿ ಸೌಲಭ್ಯಗಳನ್ನು ಹೊಂದಿದೆ. 2010ರ ಕಾಮನ್‌ವೆಲ್ತ್‌ ಗೇಮ್ಸ್ ಹಾಗೂ 2017ರಲ್ಲಿ 17 ವರ್ಷದೊಳಗಿನವರ ಫುಟ್‌ಬಾಲ್‌ ವಿಶ್ವಕಪ್‌ ಟೂರ್ನಿಯನ್ನೂ ಅಲ್ಲಿ ಆಯೋಜಿಸಲಾಗಿತ್ತು.

ಐಜಿಐ ಕ್ರೀಡಾಂಗಣವು ಒಳಾಂಗಣ ವ್ಯವಸ್ಥೆ ಹೊಂದಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಬಾಕ್ಸಿಂಗ್‌ ಹಾಗೂ ಕುಸ್ತಿ ಟೂರ್ನಿಗಳನ್ನು ಆಯೋಜಿಸಲಾಗಿದೆ. ಕರ್ನೈಲ್‌ ಸಿಂಗ್‌ ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಗಳನ್ನು ನಡೆಸಲಾಗುತ್ತದೆ. ರೈಲ್ವೇಸ್‌ ತಂಡದ ತವರು ಮೈದಾನ ಇದು.

ಒಂದು ವೇಳೆ ಖಾಸಗಿಯವರಿಗೆ ವಹಿಸಿಕೊಟ್ಟರೆ ಕ್ರೀಡಾಂಗಣಗಳು ಯಾವ ರೀತಿ ಬಳಕೆ ಮಾಡಿಕೊಳ್ಳಲಾಗುತ್ತವೆ ಎಂಬ ಬಗ್ಗೆ ಸರ್ಕಾರದ ಯೋಚನೆಗಳನ್ನು ತಿಳಿಯಲು ಸಚಿವಾ ಲಯ ಬಯಸಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ರೀಡಾ ಸಚಿವಾಲಯವು ಅಥ್ಲೀಟ್‌ಗಳ ಹಿತಾಸಕ್ತಿ ವಿಷಯದಲ್ಲಿ ರಾಜಿಯಾಗುವುದಿಲ್ಲ. ಈ ಕುರಿತು ಪ್ರಸ್ತಾ ವವನ್ನು ಪರಿಶೀಲಿಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಈ ಕುರಿತು ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆದಿವೆ. ಆದರೆ ಮುಂದಿನ ಚರ್ಚೆಗಳಿಗೆ ಸಮಯ ನಿಗದಿಪಡಿಸಿಲ್ಲ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT