ಸೋಮವಾರ, ಜೂಲೈ 6, 2020
22 °C

ಕ್ರೀಡಾಪಟುಗಳ ಮೇಲೆ ನಾಡಾ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಲಾಕ್‌ಡೌನ್‌ ಅವಧಿಯಲ್ಲಿ ನಮ್ಮನ್ನು ಯಾರೂ ಕೇಳುವುದಿಲ್ಲ ಎನ್ನುವ ಮನೋಭಾವನೆಯಿಂದ ಕ್ರೀಡಾಪಟುಗಳು ನಿಷೇಧಿತ ಉದ್ದೀಪನ ಮದ್ದು ಸೇವಿಸಿದರೆ ಅದಕ್ಕೆ ತಕ್ಕ ಶಿಕ್ಷೆ ಎದುರಿಸಬೇಕಾಗುತ್ತದೆ...’

– ಬಿಸಿಸಿಐ, ಫಿಫಾ ಮತ್ತು ಎಎಫ್‌ಸಿ ಉದ್ದೀಪನ ಮದ್ದುಸೇವನೆ ನಿಯಂತ್ರಣ ಅಧಿಕಾರಿಯಾಗಿರುವ ಧಾರವಾಡ ಕ್ರೀಡಾ ವೈದ್ಯ ಕಿರಣ ಕುಲಕರ್ಣಿ ಅವರು ನೀಡಿದ ಎಚ್ಚರಿಕೆಯಿದು.

ಹುಬ್ಬಳ್ಳಿಯಲ್ಲಿ ನಡೆದ ‘ಪ್ರಜಾವಾಣಿ’ ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮದಲ್ಲಿ ಫಿಟ್‌ನೆಸ್‌ ಮಾರ್ಗದರ್ಶನ ಕುರಿತು ಒಂದೂವರೆ ಗಂಟೆ ಲೀಲಾಜಾಲವಾಗಿ ಕಿರಣ ಕುಲಕರ್ಣಿ ಮಾತನಾಡಿದರು. ಅವರು ಕ್ರೀಡಾ ಶಿಸ್ತು, ಫಿಟ್‌ನೆಸ್‌ ವಿಧಗಳು, ಕ್ರೀಡಾಪಟುಗಳಿಗೆ ಅಗತ್ಯವಿರುವ ಕೌಶಲ, ನಿಷೇಧಿತ ಉದ್ದೀಪನ ಮದ್ದು ಸೇವಿಸುವುದರಿಂದ ಆಗುವ ಅಪಾಯಗಳ ಬಗ್ಗೆ ವೀಕ್ಷಕರಿಗೆ ಸವಿಸ್ತಾರವಾಗಿ ತಿಳಿಸಿದರು.

‘ಕ್ರೀಡಾಪಟುಗಳ ಮೇಲೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಹದ್ದಿನ ಕಣ್ಣು ನೆಟ್ಟಿದೆ. ಕ್ರೀಡಾಪಟುಗಳ ಚಲನವಲನಗಳು, ಆಹಾರ ಮತ್ತು ನಿಷೇಧಿತ ಮಾತ್ರೆಗಳ ಸೇವನೆ ಬಗ್ಗೆ ನಿರಂತರವಾಗಿ ಮಾಹಿತಿ ಕಲೆಹಾಕುತ್ತಿದೆ. ಜೂನ್‌ 1ರಿಂದ ನಾಡಾ ಅಧಿಕಾರಿಗಳು ರಕ್ತದ ಮಾದರಿ ಸಂಗ್ರಹಿಸಲು ಕ್ರೀಡಾಪಟುಗಳ ಬಳಿ ಯಾವಾಗ ಬೇಕಾದರೂ ಬರಬಹುದು’ ಎಂದು ತಿಳಿಸಿದರು.

ಮುನ್ನೆಚ್ಚರಿಕೆಯೇ ಮದ್ದು 

ಕ್ರೀಡೆಯಲ್ಲಿ ಎತ್ತರದ ಸಾಧನೆಯ ಕನಸು ಹೊತ್ತ ಪ್ರತಿ ಕ್ರೀಡಾಪಟುವಿನ ಯಶಸ್ಸು ಹಾಗೂ ಸೋಲು ಅವಲಂಬಿತವಾಗಿರುವುದೇ ಅವರ ಫಿಟ್‌ನೆಸ್‌ ಮೇಲೆ. ಗಾಯವಾದ ಬಳಿಕ ಚೇತರಿಸಿಕೊಳ್ಳಲು ಸಾಧ್ಯವೆ ಹೊರತು; ಪೂರ್ಣ ಗುಣಮುಖರಾಗುವುದು ಬಹಳ ಕಷ್ಟ. ಆದ್ದರಿಂದ ಕ್ರೀಡಾಪಟುಗಳು ಗಾಯಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಇದೇ ಅವರ ಯಶಸ್ಸಿನ ಗುಟ್ಟು ಕೂಡ ಎಂದರು.

ಪ್ರತಿ ಕ್ರೀಡೆಗೂ ಪ್ರತ್ಯೇಕವಾದ ಫಿಟ್‌ನೆಸ್‌ ಬೇಕು. ಕ್ರೀಡಾಪಟುಗಳಲ್ಲಿ ಕಷ್ಟ ಸಹಿಷ್ಣುತೆ ಎಷ್ಟಿದೆಯೋ ಇದರ ಆಧಾರದ ಮೇಲೆ ಅವರ ಫಿಟ್‌ನೆಸ್‌ ಹಾಗೂ ಯಶಸ್ಸು ಅವಲಂಬನೆಯಾಗಿರುತ್ತದೆ. ಯಾವುದೇ ಕ್ರೀಡಾಪಟುವಾದರೂ ರಾತ್ರೋರಾತ್ರಿ ಎಲ್ಲವೂ ಆಗಬೇಕು ಎಂದು ಬಯಸದೇ ಹಂತಹಂತವಾಗಿ ಮೇಲಕ್ಕೇರುವ, ವ್ಯಾಯಾಮದ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ಜಿಮ್ನಾಸ್ಟಿಕ್‌ನಲ್ಲಿ ಕ್ರೀಡಾಪಟುಗಳು ಮೈ ನವಿರೇಳಿಸುವಂತೆ ದೇಹವನ್ನು ಭಾಗಿಸಬಹುದು. ಅವರ ಸೊಗಸಾದ ದೇಹದ ಸಮತೋಲನ ನೋಡುಗರಿಗೆ ಆಕರ್ಷಕವಾಗಿ ಕಾಣಬಹುದು. ಇದನ್ನೇ ಅನುಕರಿಸಲು ಹೋದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇದರ ಹಿಂದೆ ಅಪಾರ ಶ್ರಮವಿರುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.

ಅಡ್ಡಹಾದಿ ಹಿಡಿಯಬೇಡಿ

ಕ್ರೀಡಾ ಕ್ಷೇತ್ರದಲ್ಲಿ ಕಡಿಮೆ ಅವಧಿಯಲ್ಲಿ ಉತ್ತುಂಗಕ್ಕೆ ಏರುವ ದುರಾಸೆಯಿಂದ ಬಹಳಷ್ಟು ಕ್ರೀಡಾಪಟುಗಳು ಅಡ್ಡದಾರಿ ಹಿಡಿಯುತ್ತಾರೆ. ಇದಕ್ಕಾಗಿ ನಿಷೇಧಿತ ಮದ್ದು ಸೇವನೆ ಮಾಡಿ ದೇಹದ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದ ಅಡ್ಡ ಪರಿಣಾಮಗಳೇ ಹೆಚ್ಚು.

ಮದ್ದು ಸೇವನೆಯಿಂದ ದೇಹದ ಆರೋಗ್ಯ ಹಾಳಾಗಿ ಮುಖದಲ್ಲಿ ಗುಳ್ಳೆಗಳಾಗುತ್ತವೆ. ಗಂಡಸರಲ್ಲಿ ಸ್ತನಗಳು ಬೆಳೆದು ಶಕ್ತಿ ಕಡಿಮೆಯಾಗುತ್ತದೆ. ಮಹಿಳಾ ಕ್ರೀಡಾಪಟುಗಳಲ್ಲಿ ಮೀಸೆ ಬೆಳೆದು, ಗಡ್ಡ ಬರುತ್ತವೆ. ಆದ್ದರಿಂದ ಯಶಸ್ಸಿಗಾಗಿ ಮದ್ದು ಸೇವನೆಯ ಅಡ್ಡದಾರಿ ಹಿಡಿಯಬಾರದು. ಯಶಸ್ಸು ಯಾವಾಗಲೂ ನೇರದಾರಿಯಲ್ಲೇ ಇರಬೇಕು ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು. ವಿಡಿಯೋ ವೀಕ್ಷಿಸಲು ಈ ಕೊಂಡಿಯನ್ನು ಬಳಸಿ..

https://www.facebook.com/watch/live/?v=720701045400512&ref=watch_permalink

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು