ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾಲಿಂಪಿಕ್ಸ್: ಭಾವಿನಾ ಚಿನ್ನಕ್ಕೆ ಒಂದೇ ಹೆಜ್ಜೆ ಬಾಕಿ

Last Updated 29 ಆಗಸ್ಟ್ 2021, 2:43 IST
ಅಕ್ಷರ ಗಾತ್ರ

ಟೋಕಿಯೊ (ಪಿಟಿಐ): ಜನಿಸಿದ 12ನೇ ತಿಂಗಳಿಗೇ ಪೋಲಿಯೊದಿಂದಾಗಿ ಕಾಲು ಗಳ ಬಲ ಕಳೆದುಕೊಂಡ ಭಾವಿನಾ ಬೆನ್‌ ಬದುಕಿನಲ್ಲಿ ಛಲ ಕಳೆದುಕೊಳ್ಳಲಿಲ್ಲ. ಈ ಆತ್ಮವಿಶ್ವಾಸ ಅವರನ್ನು ದೇಶಕ್ಕೆ ಐತಿಹಾಸಿಕ ಚಿನ್ನ ತಂದುಕೊಡುವತ್ತ ದಾಪುಗಾಲಿಡುವಂತೆ ಮಾಡಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಫೈನಲ್‌ ತಲುಪಿರುವ ಅವರು ಪ್ರಶಸ್ತಿಗೆ ಇನ್ನೊಂದೇ ಹೆಜ್ಜೆ ದೂರ ಇದ್ದಾರೆ.

34 ವರ್ಷದ ಭಾವಿನಾ ಬೆನ್‌, ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಕ್ಲಾಸ್‌ ಫೋರ್‌ ವಿಭಾಗದ ನಾಲ್ಕರಘಟ್ಟದ ಹಣಾಹಣಿಯಲ್ಲಿ 7-11, 11-7, 11-4, 9-11, 11-8ರಿಂದ ಚೀನಾದ ಮಿಯಾವೊ ಜಾಂಗ್ ಅವರನ್ನು ಪರಾಭವಗೊಳಿಸಿದರು. ವೀಲ್‌ಚೇರ್‌ನಲ್ಲಿ ಆಡುವ ಭಾವಿನಾ, ಸೆಮಿಫೈನಲ್ ಪಂದ್ಯದ ಮೊದಲ ಗೇಮ್‌ ಕೈಚೆಲ್ಲಿದರು. ಆದರೆ ಪುಟಿದೆದ್ದು ನಂತರದ ಎರಡು ಗೇಮ್‌ಗಳನ್ನು ತಮ್ಮದಾಗಿಸಿಕೊಂಡರು.

ಮೂರನೇ ಗೇಮ್‌ ಅನ್ನು ಕೇವಲ ನಾಲ್ಕು ನಿಮಿಷ ಗಳಲ್ಲೇ ಜಯಿಸಿದರು. ಆದರೆ ನಾಲ್ಕನೇ ಗೇಮ್‌ನಲ್ಲಿ ತಿರುಗೇಟು ನೀಡಿದ ಜಾಂಗ್‌ ಗೆದ್ದು ಬೀಗಿದರು. ನಿರ್ಣಾಯಕ ಐದನೇ ಗೇಮ್‌ನಲ್ಲಿ ಭಾವಿನಾ 5–0 ಮುನ್ನಡೆ ಗಳಿಸಿದರು. ಆದರೆ ಪುಟಿದೆದ್ದ ಜಾಂಗ್‌ ಸ್ಕೋರ್‌ಅನ್ನು 5–9ಕ್ಕೆ ತಂದರು. ಮತ್ತೆ ಸತತ ಮೂರು ಪಾಯಿಂಟ್ಸ್ ಗಳಿಸಿ ಹಿನ್ನಡೆಯನ್ನು 8–9ಕ್ಕೆ ತಗ್ಗಿಸಿಕೊಂಡರು. ಈ ವೇಳೆ ಸ್ವಲ್ಪ ವಿರಾಮ ತೆಗೆದುಕೊಂಡ ಭಾವಿನಾ ಬಳಿಕ ಚೇತೋಹಾರಿ ಆಟವಾಡಿದರು. ಸತತ ಎರಡು ಪಾಯಿಂಟ್ಸ್ ಸಂಗ್ರಹಿಸಿ ಗೇಮ್‌ ಹಾಗೂ ಪಂದ್ಯ ಜಯಿಸಿ ಸಂಭ್ರಮದಲ್ಲಿ ಮಿಂದೆದ್ದರು.

ಪ್ರಧಾನಿ ಅಭಿನಂದನೆ:
ಭಾವಿನಾ ಬೆನ್ ಪಟೇಲ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಭಾವಿನಾಬೆನ್ ಎಂಟರಘಟ್ಟದಲ್ಲಿ ಹಣಾಹಣಿಯಲ್ಲಿ 11-5 11-6 11-7ರಿಂದ ಹಾಲಿ ಚಾಂಪಿಯನ್‌, ಸರ್ಬಿಯಾದ ಬೊರಿಸ್ಲಾವಾ ಪೆರಿಚ್‌ ರ‍್ಯಾಂಕೊವಿಚ್‌ ಅವರನ್ನು ಪರಾಭಗೊಳಿಸಿದರು. ಇದಕ್ಕೂ ಮೊದಲು 16ರ ಘಟ್ಟದ ಪಂದ್ಯದಲ್ಲಿ ಭಾರತದ ಆಟಗಾರ್ತಿಯು 12–10, 13–11, 11–6ರಿಂದ ಬ್ರೆಜಿಲ್‌ನ ಜಾಯ್ಸ್ ಡಿ ಒಲಿವೆರಾ ಅವರನ್ನು ಮಣಿಸಿದ್ದರು.

ಅತ್ತ ತಮ್ಮನ್ನು ತಾವು ದೈಹಿಕ ಅಸಮರ್ಥಳೆಂದು ಪರಿಗಣಿಸುವುದಿಲ್ಲ ಎಂದು ಭಾವಿನಾಬೆನ್ ಅಭಿಪ್ರಾಯಪಟ್ಟಿದ್ದಾರೆ.

ಜಾವೆಲಿನ್ ಥ್ರೊನಲ್ಲಿ ಭಾಟಿ ವಿಫಲ:
ಭಾರತದ ಜಾವೆಲಿನ್ ಥ್ರೊ ಸ್ಪರ್ಧಿ ರಂಜೀತ್ ಭಾಟಿ ಪ್ಯಾರಾಲಿಂಪಿಕ್ಸ್‌ನಿಂದ ಹೊರಬಿದ್ದರು. ಪುರುಷರ ಎಫ್‌57 ವಿಭಾಗದಲ್ಲಿ ಅವರು ಸ್ಪರ್ಧಿಸಿದ್ದರು.

ಪ್ರೀಕ್ವಾರ್ಟರ್‌ ಫೈನಲ್‌ಗೆ ರಾಕೇಶ್

ಭಾರತದ ರಾಕೇಶ್ ಕುಮಾರ್ ಅವರು ಆರ್ಚರಿ ಸ್ಪರ್ಧೆಯಲ್ಲಿ ಪ್ರೀಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಆದರೆ ಇನ್ನೊಬ್ಬ ಸ್ಪರ್ಧಿ ಶ್ಯಾಮಸುಂದರ್ ಸ್ವಾಮಿ ಎರಡನೇ ಸುತ್ತಿನಲ್ಲಿ ಸೋತು ಹೊರನಡೆದರು. ರಾಕೇಶ್‌ 144–131ರಿಂದ ಹಾಂಗ್‌ಕಾಂಗ್‌ನ ಕ ಚೆನ್‌ ಎನ್‌ಗಾಯ್ ಎದುರು ಗೆಲುವು ಸಾಧಿಸಿದರು.

ಮುಂದಿನ ಪಂದ್ಯದಲ್ಲಿ ಅವರು ಮಂಗಳವಾರ ಸ್ಲೋವೆಕಿಯಾದ ಮರಿಯನ್ ಮ್ಯಾರೆಸಾಕ್‌ ಅವರನ್ನು ಎದುರಿಸುವರು.

ಎರಡನೇ ಸುತ್ತಿನಲ್ಲಿ ಬೈ ಪಡೆದಿದ್ದ ಶ್ಯಾಮಸುಂದರ್ ಅವರು 139-142ರಿಂದ ಅಮೆರಿಕದ, ಎರಡೂ ಕೈಗಳಿರದ ಮ್ಯಾಟ್‌ ಸ್ಟಟ್‌ಮನ್‌ ಎದುರು ಸೋಲು ಅನುಭವಿಸಿದರು. ಮ್ಯಾಟ್‌ ಅವರು ಕಾಲಿನ ಸಹಾಯದಿಂದಲೇ ಆರ್ಚರಿಯಲ್ಲಿ ಸ್ಪರ್ಧಿಸುತ್ತಾರೆ.

ತತಿಯಾನಗೆ 18ನೇ ಪದಕ

ಅಮೆರಿಕದ ವೀಲ್‌ಚೇರ್ ರೇಸಿಂಗ್ ದಂತಕತೆ ತತಿಯಾನ ಮ್ಯಾಕ್‌ಫ್ಯಾಡನ್‌ ಪ್ಯಾರಾಲಿಂಪಿಕ್‌ ಇತಿಹಾಸದಲ್ಲಿ 18ನೇ ಪದಕ ತಮ್ಮದಾಗಿಸಿಕೊಂಡರು.

ಮಹಿಳೆಯರ ಟಿ54 ವಿಭಾಗದ 5 ಸಾವಿರ ಮೀಟರ್ಸ್ ಸ್ಪರ್ಧೆಯಲ್ಲಿ ಶನಿವಾರ ಅವರು ಕಂಚಿನ ಪದಕ (ಕಾಲ: 11 ನಿಮಿಷ 0.5 ಸೆಕೆಂಡು) ಗೆದ್ದರು. 2008ರಿಂದ ಅವರು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಚಿನ್ನವು ಅಮೆರಿಕದ ಸುಸಾನ್ನಾ ಸ್ಕ್ಯಾರೋನಿ ಅವರ ಪಾಲಾಯಿತು. ಅವರು 10 ನಿಮಿಷ. 52.57 ಸೆಕೆಂಡು (ಪ್ಯಾರಾಲಿಂಪಿಕ್ಸ್ ದಾಖಲೆ) ಸಾಧನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT