ಮಂಗಳವಾರ, ಜನವರಿ 28, 2020
25 °C
ಸೂರಜ್ ನರೇಡು ಅಂತರಾಳ

ಈ ಆಟದಲ್ಲಿ ದೇಹತೂಕವೇ ಪ್ರತಿಸ್ಪರ್ಧಿ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

34 ವರ್ಷದ ಸೂರಜ್ ಈಚೆಗೆ ಹೈದರಾಬಾದ್‌ನಲ್ಲಿ ನಡೆದ ರೇಸ್‌ ಗೆದ್ದು ಮೈಲುಗಲ್ಲು ಸ್ಥಾಪಿಸಿದರು. ರೋಮಾಂಚಕಾರಿ ಮತ್ತು  ಅಪಾಯಕಾರಿ ಕ್ರೀಡೆಯಲ್ಲಿ ಇರುವ ಜಾಕಿಗಳು ಮಾನಸಿಕವಾಗಿ ಎಷ್ಟೇ ಧೈರ್ಯಶಾಲಿಗಳಾಗಿದ್ದರೂ ದೈಹಿಕವಾಗಿ ನೀಳಕಾಯ ಮತ್ತು ಲಘುತೂಕದ ವ್ಯಕ್ತಿಗಳಾಗಿ ಇರುವುದೇ ಮುಖ್ಯ. ಈ ಸವಾಲಿನ ಬಗ್ಗೆ  ಸೂರಜ್ ‘ಪ್ರಜಾವಾಣಿ‘ಯೊಂದಿಗೆ ಮಾತನಾಡಿದ್ದಾರೆ.

ಈ ಕ್ರೀಡೆಯಲ್ಲಿ ನಿಮ್ಮ ಫಿಟ್‌ನೆಸ್‌ ಅಭ್ಯಾಸಗಳು ಮತ್ತು ಅದರ ಸವಾಲುಗಳು ಯಾವವು?

ಈ ಕ್ರೀಡೆಯಲ್ಲಿ ದೇಹತೂಕವನ್ನು ಹತೋಟಿಯಲ್ಲಿಟ್ಟುಕೊಳ್ಳುವುದೇ ದೊಡ್ಡ ಸವಾಲು. ನನ್ನ ತೂಕ 53 ರಿಂದ 54 ಕೆ.ಜಿ. ಒಳಗೆ ನಿರ್ವಹಿಸಿಕೊಳ್ಳುತ್ತೇನೆ. ಇದಕ್ಕಾಗಿ ಜೀವನದಲ್ಲಿ ಬಹಳಷ್ಟು ರಾಜೀ ಮಾಡಿಕೊಳ್ಳಬೇಕಾಗುತ್ತದೆ. ರಾತ್ರಿಯ ಯಾವುದೇ ಸಮಾರಂಭಗಳಿಗೂ ಹೋಗುವುದಿಲ್ಲ. ಬೇಗ ಮಲಗಿ, ಬೆಳಗಿನ ಜಾವವೇ ಅಭ್ಯಾಸ ಮತ್ತು ವ್ಯಾಯಾಮಕ್ಕೆ ಹೋಗುತ್ತೇನೆ. ವಾರದಲ್ಲಿ ನಾಲ್ಕು ದಿವಸ ಜಿಮ್ನಾಶಿಯಂನಲ್ಲಿ ಕಸರತ್ತು. ಅಲ್ಲಿಯೂ ಕೂಡ ಸ್ನಾಯುಗಳನ್ನು ಬೆಳೆಸುವ ವ್ಯಾಯಾಮ ಮಾಡುವುದಿಲ್ಲ. ಹಾಗೋಮ್ಮೆ ಮಾಡಿದರೆ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಾರ್ಡಿಯೊ ಮತ್ತು ಫ್ರೀಹ್ಯಾಂಡ್ ವ್ಯಾಯಾಮಗಳಿಗೆ ಆದ್ಯತೆ.  ಏಕತಾನತೆ ತಡೆಯಲು ಯೋಗ, ಜಾಗಿಂಗ್, ಟ್ರೆಡ್‌ ಮಿಲ್‌ ಮತ್ತಿತರ ಬಗೆಯ ವ್ಯಾಯಾಮಗಳನ್ನು ಮಿಶ್ರಣ ಮಾಡಿಕೊಳ್ಳುತ್ತೇನೆ. ಬಾಯಿರುಚಿಗಾಗಿ ಸಿಕ್ಕಿದ್ದೆಲ್ಲ ತಿನ್ನುವಂತಿಲ್ಲ.

ನಿಮ್ಮ ಆಹಾರ ಪದ್ಧತಿ ಯಾವ ರೀತಿ ಇರುತ್ತದೆ?

ನಾನು ಬೆಳಗಿನ ತಿಂಡಿ ತಿನ್ನುವುದಿಲ್ಲ. ಬೆಳಗ್ಗೆ ಮತ್ತು ಮಧ್ಯಾಹದ ಮಧ್ಯದಲ್ಲಿ ‘ಬ್ರಂಚ್’ ಮಾಡುತ್ತೇನೆ. ಅದೂ ಕೂಡ  ಪ್ರೋಟಿನ್‌ಯುಕ್ತ ಆಹಾರಕ್ಕೆ ಆದ್ಯತೆ. ಮೀನು, ಚಿಕನ್ ಖಾದ್ಯಗಳು ಮತ್ತು ತರಕಾರಿ ಹೆಚ್ಚು ಸೇವಿಸುತ್ತೇನೆ. ಇಡೀ ದಿನ ದ್ರವಾಹಾರವನ್ನು ತೆಗೆದುಕೊಳ್ಳುತ್ತೇನೆ. ನೀರು, ಹಣ್ಣಿನ ರಸ, ತರಕಾರಿ ರಸ ಕುಡಿಯುತ್ತೇನೆ. ದೇಹದಲ್ಲಿ ನೀರಿನ ಅಂಶ ಹೆಚ್ಚಿರುವಂತೆ ನೋಡಿಕೊಳ್ಳುತ್ತೇನೆ.  ರಾತ್ರಿ ಊಟದಲ್ಲಿ ಒಂದು ಚಪಾತಿ, ಸ್ವಲ್ಪ ತರಕಾರಿ ಅಥವಾ ಚಿಕನ್ ಖಾದ್ಯದೊಂದಿಗೆ ತಿನ್ನುತ್ತೇನೆ. ಎಣ್ಣೆ ಪದಾರ್ಥಗಳಿಂದ ಸದಾ ದೂರ ಇರುತ್ತೇನೆ. ಒಂದೊಮ್ಮೆ ನಿಗದಿಯ ಪ್ರಮಾಣಕ್ಕಿಂತ ತುಸು ಹೆಚ್ಚು ತಿಂದರೆ ಮರುದಿವಸ ಹೆಚ್ಚು ವರ್ಕ್‌ ಔಟ್ ಮಾಡಿ ಅದನ್ನು ಕರಗಿಸುತ್ತೇನೆ.

ರೇಸ್‌ಗಳಲ್ಲಿ ಸ್ಪರ್ಧಿಸುವ ದಿನವೂ ಯಾವ ರೀತಿಯ ಆಹಾರ ತೆಗೆದುಕೊಳ್ಳುತ್ತೀರಿ?

ಕುದುರೆ ಎಷ್ಟೇ ಸಮರ್ಥವಾಗಿದ್ದರೂ ನಮ್ಮ ದೇಹತೂಕದ ಆಧಾರದಲ್ಲಿಯೇ ಅದರ ಓಟ ಅವಲಂಬಿತವಾಗಿರುತ್ತದೆ. ಆದ್ದರಿಂದ ರೇಸ್ ದಿನ ನಮ್ಮ ಎಂದಿನ ತೂಕಕ್ಕಿಂತ ಎರಡು–ಮೂರು ಕೆಜಿ ಕಡಿಮೆಯಾಗುವಂತೆ ನೋಡಿಕೊಳ್ಳುತ್ತೇವೆ. ಅದಕ್ಕಾಗಿ ಬೆಳಿಗ್ಗೆ ಒಂದು ಕಪ್ ಚಹಾ ಮತ್ತು ಒಂದೆರಡು ಬಿಸ್ಕತ್ ತೆಗೆದುಕೊಳ್ಳುತ್ತೇನೆ. ಆನಂತರ ನೀರನ್ನೂ ಕುಡಿಯುವುದಿಲ್ಲ. ಏಕೆಂದರೆ  ನೀರಿನಿಂದ ದೇಹತೂಕ ತಾತ್ಕಾಲಿಕವಾಗಿಯೂ ಹೆಚ್ಚುತ್ತದೆ. ಅದು ತೂಕದ ಯಂತ್ರದ ಮೇಲೆ ನಿಂತಾಗ ಕಾಣಿಸಿಕೊಂಡರೆ ರೇಸ್‌ನಲ್ಲಿ ಭಾಗವಹಿಸಲಾಗುವುದಿಲ್ಲ.

ಇಷ್ಟೆಲ್ಲ ಸವಾಲುಗಳು ಇರುವ ಮತ್ತು ಅಪಾಯಕಾರಿಯಾಗಿರುವ ಇದೇ ಕ್ರೀಡೆಯನ್ನು  ಏಕೆ ಆಯ್ಕೆ ಮಾಡಿಕೊಂಡಿರಿ?

ನನ್ನ ತಂದೆ ಮತ್ತು ಚಿಕ್ಕಪ್ಪ ಇಬ್ಬರೂ ಅತ್ಯುತ್ತಮ ಜಾಕಿಗಳಾಗಿದ್ದವರು. ಅವರನ್ನು ನೋಡಿ ಸ್ಪೂರ್ತಿಗೊಂಡು ಈ ಕ್ರೀಡೆ ಆಯ್ಕೆ ಮಾಡಿಕೊಂಡೆ. ಸವಾಲುಗಳನ್ನು ಮೆಟ್ಟಿ ನಿಲ್ಲುವುದು ನನ್ನ ಹವ್ಯಾಸ. 17 ವರ್ಷಗಳಿಂದ ಈ ಆಟವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದೇನೆ. ನನ್ನ ಪತ್ನಿ, ಮಕ್ಕಳು ಕೂಡ ಇದರಿಂದ ಬಹಳ ಖುಷಿಯಾಗಿದ್ದಾರೆ.

ನಿಮ್ಮ ಕುದುರೆಯ ಬಗ್ಗೆ ಹೇಳಿ? 

ನನ್ನದೇ ಆದ ಕುದುರೆ ಇಲ್ಲ. ಫ್ರೀಲ್ಯಾನ್ಸ್‌ ಜಾಕಿ ಆಗಿದ್ದೇನೆ. ರೇಸ್‌ಗಳಲ್ಲಿ ಕ್ಲಬ್‌ಗಳಿಂದ ಕುದುರೆಗಳು ಇರುತ್ತವೆ. ಅವುಗಳನ್ನು ರೈಡ್ ಮಾಡುತ್ತೇನೆ. 2000ನೇ ರೇಸ್‌ ವಿಜಯದಲ್ಲಿ ಸವಾರಿ ಮಾಡಿದ್ದ ಗೈಡಿಂಗ್ ಫೊರ್ಸ್‌ ಕುದುರೆ ಈಗಿನ ನನ್ನ ಪಾಲಿಗೆ ವಿಶೇಷವಾಗಿದೆ. ಹೈದರಾಬಾದ್‌ನಲ್ಲಿ ಅದೇ ದಿನ ನನ್ನ ಪತ್ನಿ ಮತ್ತು ಮಕ್ಕಳೂ ಇದ್ದಿದ್ದು ಇನ್ಣೂ ವಿಶೇಷ.

ನಿಮ್ಮ ಭವಿಷ್ಯದ ಯೋಜನೆಗಳು ಏನು?

ಕಡಿಮೆ ದೇಹತೂಕ ನನ್ನ ಹತೋಟಿಯಲ್ಲಿರುವವರೆಗೆ ಮತ್ತು ಗಾಯದಿಂದ ಮುಕ್ತರಾಗಿ ಇರುವವರೆಗೆ ರೇಸ್‌ನಲ್ಲಿ ಇರುತ್ತೇನೆ. ಕನಿಷ್ಠ ಹತ್ತು ವರ್ಷಗಳಾದರೂ ಸ್ಪರ್ಧಿಸುತ್ತೇನೆ. ಅವಕಾಶ ಲಭಿಸಿದರೆ ವಿದೇಶದ ರೇಸ್‌ಗಳಲ್ಲಿಯೂ ಸ್ಪರ್ಧೆ ಮಾಡುತ್ತೇನೆ. ಹೆಚ್ಚು ಹೆಚ್ಚು ಕ್ಲಾಸಿಕ್ ರೇಸ್‌ಗಳಲ್ಲಿ ಗೆಲ್ಲುವುದು ನ್ನನ ಗುರಿ. 

ಪ್ರತಿಕ್ರಿಯಿಸಿ (+)