ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೂವರುವಿದ್ಯಾರ್ಥಿಗಳು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ರಾಜ್ಯ ಸರ್ಕಾರ ನೀಡುವ ಕ್ರೀಡಾ ರತ್ನ ಪ್ರಶಸ್ತಿಯನ್ನು ಸೋಮವಾರ ಸ್ವೀಕರಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಬಾಲ್ ಬ್ಯಾಡ್ಮಿಂಟನ್ ಆಟಗಾರ ಕಿರಣ್ ಕುಮಾರ್, ಕುಸ್ತಿಪಟು ಲಕ್ಷ್ಮಿ ರೇಡೇಕರ್ ಹಾಗೂ ಕೊಕ್ಕೊ ಆಟಗಾರ್ತಿ ದೀಕ್ಷಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದೊಡ್ಡಬಳ್ಳಾಪುರದ ಕಿರಣ್ ಕುಮಾರ್ ಆಳ್ವಾಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದು ರಾಜ್ಯ ಬಾಲ್ ಬ್ಯಾಡ್ಮಿಂಟನ್ ತಂಡದ ನಾಯಕನಾಗಿದ್ದಾರೆ. ಅಂತರ ರಾಜ್ಯ ಮತ್ತು ಫೆಡರೇಷನ್ ಕಪ್ ಟೂರ್ನಿಗಳಲ್ಲಿ ಅವರು 16 ಬಾರಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದು ತಲಾ 4 ಚಿನ್ನ ಮತ್ತು ಬೆಳ್ಳಿ, 8 ಕಂಚಿನ ಪದಕ ಗಳಿಸಿದ್ದಾರೆ. ಅಖಿಲ ಭಾರತ ಅಂತರ ವಿ.ವಿ ಕೂಟದಲ್ಲಿ 4 ಬಾರಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ್ದಾರೆ. ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡದ ನಾಯಕನಾಗಿ ಉತ್ತಮ ಆಟಗಾರ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಲಕ್ಷ್ಮಿ ರೇಡೇಕರ್ 5 ಬಾರಿ ರಾಷ್ಟ್ರೀಯ ಸೀನಿಯರ್ ಹಾಗೂ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಜೂನಿಯರ್ ಕೂಟದಲ್ಲಿ ಕಂಚಿನ ಪದಕ ಅವರಿಗೆ ಒಲಿದಿದೆ. ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ2 ಹಾಗೂ ಖೇಲೊ ಇಂಡಿಯಾ ಕೂಟದಲ್ಲಿ ಒಂದು ಕಂಚಿನ ಪದಕ ಗಳಿಸಿದ್ದಾರೆ. 2018ರಲ್ಲಿ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾಗಿದ್ದರು. ಅಖಿಲ ಭಾರತ ಅಂತರ ವಿವಿ ಕುಸ್ತಿಯಲ್ಲಿ 3 ಬಾರಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ್ದಾರೆ.
ಪುತ್ತೂರಿನ ದೀಕ್ಷಾ 8 ಬಾರಿ ರಾಷ್ಟ್ರೀಯ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದು ತಲಾ 4 ಬೆಳ್ಳಿ ಹಾಗೂ ಕಂಚಿನ ಪದಕ ಗಳಿಸಿದ್ದಾರೆ. ಅಖಿಲ ಭಾರತ ಅಂತರ ವಿ.ವಿ ಕೂಟಗಳಲ್ಲಿ 4 ಬಾರಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ್ದು ತಲಾ 1 ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಆಹ್ವಾನಿತ ಕೊಕ್ಕೊ ಟೂರ್ನಿಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಪ್ರಶಸ್ತಿ ಗಳಿಸಿದ ಮೂವರೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಚಿತ ಶಿಕ್ಷಣದ ವಿದ್ಯಾರ್ಧಿಗಳಾಗಿದ್ದಾರೆ. ಇವರೆಲ್ಲರನ್ನೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು ಅಭಿನಂದಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.