ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಹಾಕಿ 2018: ಆಸ್ಟ್ರೇಲಿಯಾಗೆ ಮಣಿದ ಐರ್ಲೆಂಡ್

ಪಂದ್ಯದ ಮೊದಲ ಗೋಲು ಗಳಿಸಿದ ಗೋವರ್ಸ್ ಬ್ಲೇಕ್‌:
Last Updated 30 ನವೆಂಬರ್ 2018, 20:35 IST
ಅಕ್ಷರ ಗಾತ್ರ

ಭುವನೇಶ್ವರ: ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ಕನಸು ಹೊತ್ತು ಇಲ್ಲಿಗೆ ಬಂದಿರುವ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಕಳಿಂಗ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಪಂದ್ಯದಲ್ಲಿ ಎಡಿ ಒಕೆಂಡೆನ್ ಬಳಗ ಐರ್ಲೆಂಡ್ ವಿರುದ್ಧ 2–1ರಿಂದ ಗೆದ್ದಿತು.

ವಿಶ್ವಕಪ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾದ ಉಭಯ ತಂಡಗಳು ಪ್ರಬಲ ಪೈಪೋಟಿ ಒಡ್ಡಿದ ಕಾರಣ ಮೊದಲ ಕ್ವಾರ್ಟರ್‌ನಲ್ಲೇ ಪಂದ್ಯ ರೋಚಕವಾಯಿತು. ಮೊದಲ ಗೋಲು ಆಸ್ಟ್ರೇಲಿಯಾ ಗಳಿಸಿತು. ಆದರೆ ಎರಡೇ ನಿಮಿಷಗಳಲ್ಲಿ ಐರ್ಲೆಂಡ್‌ ಆಟಗಾರರು ತಿರುಗೇಟು ನೀಡಿ ಸಮಬಲ ಸಾಧಿಸಿದರು.

11ನೇ ನಿಮಿಷದಲ್ಲಿ ತನ್ನದೇ ಆವರಣದಲ್ಲಿ ತಪ್ಪೆಸಗಿದ ಐರ್ಲೆಂಡ್‌ ತಂಡ ಎದುರಾಳಿಗಳಿಗೆ ಪೆನಾಲ್ಟಿ ಕಾರ್ನರ್‌ ಅವಕಾಶ ಒದಗಿಸಿ ಕೈ ಸುಟ್ಟುಕೊಂಡಿತು. ಇದನ್ನು ಸಮರ್ಪಕವಾಗಿ ಬಳಸಿಕೊಂಡ ಗೋವರ್ಸ್ ಬ್ಲೇಕ್‌ ಚೆಂಡನ್ನು ಗುರಿ ಸೇರಿಸಿ ತಂಡದಲ್ಲಿ ಸಂಭ್ರಮ ಮೂಡಿಸಿದರು. ಆದರೆ ಛಲ ಬಿಡದ ಐರ್ಲೆಂಡ್‌ ಎರಡನೇ ನಿಮಿಷಗಳಲ್ಲಿ ತಿರುಗೇಟು ನೀಡಿತು.

ಶೇನ್ ಓಡಾಂಗೊ ಮೋಹಕ ಫೀಲ್ಡ್ ಗೋಲು ಗಳಿಸಿ ಡೇವಿಡ್ ಹಾರ್ಟಿ ಬಳಗ ಕುಣಿದಾಡುವಂತೆ ಮಾಡಿದರು.

ಎರಡನೇ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾ ನಿರೀಕ್ಷಿತ ಫಲ ಕಾಣಲಿಲ್ಲ. ಆ ತಂಡದ ಮುನ್ನಡೆಗೆ ತಡೆ ಹಾಕಲು ಯಶಸ್ವಿಯಾದ ಐರ್ಲೆಂಡ್ ಆಟಗಾರರು ಗೋಲು ಬಿಟ್ಟುಕೊಡಲಿಲ್ಲ. ಹೀಗಾಗಿ 1–1ರ ಸಮಬಲದಲ್ಲಿ ಮೊದಲಾರ್ಧ ಮುಕ್ತಾಯಗೊಂಡಿತು.

ಮಿಂಚಿದ ಟಿಮ್ ಬ್ರ್ಯಾಂಡ್‌: ದ್ವಿತೀಯಾರ್ಧದ ಆರಂಭದಲ್ಲೇ ಆಸ್ಟ್ರೇಲಿಯಾ ಗೋಲು ಗಳಿಸಿ ಮುನ್ನಡೆ ಹೆಚ್ಚಿಸಿತು. ಟಿಮ್‌ ಬ್ರ್ಯಾಂಡ್ ಅವರು ಗೋಲು ಗಳಿಸಿ ಮಿಂಚಿದರು. ಕೊನೆಯ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾ ಭಾರಿ ಸವಾಲು ಎದುರಿಸಿತು. ಐರ್ಲೆಂಡ್ ತಂಡಕ್ಕೆ ಗೋಲು ಗಳಿಸಲು ಸಾಧ್ಯವಾಗದಿದ್ದರೂ ಚಾಂಪಿಯನ್‌ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು.

ವಿಶ್ವಕಪ್‌ ಹಾಕಿ: ಸೋಲು ತಪ್ಪಿಸಿದ ಟಲಾಕೆ
ಭುವನೇಶ್ವರ:
ರೋಚಕ ಘಟ್ಟದಲ್ಲಿ ಗೋಲು ಗಳಿಸಿದ ಡು ಟಲಾಕೆ, ವಿಶ್ವಕಪ್‌ ಹಾಕಿ ಟೂರ್ನಿಯ ಪಂದ್ಯದಲ್ಲಿ ಚೀನಾ ತಂಡವನ್ನು ಸೋಲಿನಿಂದ ಪಾರು ಮಾಡಿದರು.

ಕಳಿಂಗ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಇಂಗ್ಲೆಂಡ್‌ ಮತ್ತು ಚೀನಾ ನಡುವಣ ‘ಬಿ’ ಗುಂಪಿನ ಹೋರಾಟ 2–2 ಗೋಲುಗಳಿಂದ ಡ್ರಾ ಆಯಿತು.

ಚೊಚ್ಚಲ ವಿಶ್ವಕಪ್‌ ಆಡುತ್ತಿರುವ ಚೀನಾ ತಂಡ ಐದನೇ ನಿಮಿಷದಲ್ಲಿ ಖಾತೆ ತೆರೆಯಿತು. ಗುವೊ ಕ್ಸಿಯಾವೊಪಿಂಗ್‌ ಅವರು ಫೀಲ್ಡ್‌ ಗೋಲು ಬಾರಿಸಿ ಗಮನ ಸೆಳೆದರು. 14ನೇ ನಿಮಿಷದಲ್ಲಿ ಇಂಗ್ಲೆಂಡ್‌ ತಿರುಗೇಟು ನೀಡಿತು. ಈ ತಂಡದ ಮಾರ್ಕ್‌ ಗ್ಲೆಗೋರ್ನ್‌ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ 1–1 ಸಮಬಲಕ್ಕೆ ಕಾರಣರಾದರು.

ಎರಡು ಮತ್ತು ಮೂರನೇ ಕ್ವಾರ್ಟರ್‌ಗಳಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ಯಾರಿಗೂ ಮುನ್ನಡೆ ಗೋಲು ಗಳಿಸಲು ಆಗಲಿಲ್ಲ. ಅಂತಿಮ ಕ್ವಾರ್ಟರ್‌ನ ಆರಂಭದಲ್ಲಿ ಆಂಗ್ಲರ ನಾಡಿನ ತಂಡ ಯಶಸ್ಸು ಗಳಿಸಿತು. 48ನೇ ನಿಮಿಷದಲ್ಲಿ ಲಿಯಾಮ್‌ ಅನ್ಸೆಲ್‌ ಫೀಲ್ಡ್‌ ಗೋಲು ಬಾರಿಸಿ ಇಂಗ್ಲೆಂಡ್‌ ಪಾಳಯದಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದರು.

57ನೇ ನಿಮಿಷದವರೆಗೂ ಇಂಗ್ಲೆಂಡ್‌ ಮುನ್ನಡೆ ಹೊಂದಿತ್ತು. ಮಹತ್ವದ್ದೆನಿಸಿದ ಅಂತಿಮ ಮೂರು ನಿಮಿಷಗಳ ಆಟದಲ್ಲಿ ಚೀನಾ ಮೇಲುಗೈ ಸಾಧಿಸಿತು. 59ನೇ ನಿಮಿಷದಲ್ಲಿ ಈ ತಂಡಕ್ಕೆ ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು. ಈ ಅವಕಾಶದಲ್ಲಿ ಡು ಟಲಾಕೆ ಗೋಲು ಬಾರಿಸಿ ಚೀನಾ ತಂಡದ ಸಂಭ್ರಮಕ್ಕೆ ಕಾರಣರಾದರು.

ಇಂದಿನ ಪಂದ್ಯಗಳು
ನೆದರ್ಲೆಂಡ್ಸ್‌–ಮಲೇಷ್ಯಾ
ಆರಂಭ: ಸಂಜೆ 5

*
ಜರ್ಮನಿ–ಪಾಕಿಸ್ತಾನ
ಆರಂಭ: ರಾತ್ರಿ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT