ಸೋಮವಾರ, ಸೆಪ್ಟೆಂಬರ್ 20, 2021
24 °C

‘ಎಂಟು ವರ್ಷ ಮನೆಯ ಕಡೆ ತಿರುಗಿಯೂ ನೋಡಿಲ್ಲ’: ಲವ್ಲಿನಾ ಬೊರ್ಗೊಹೈನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಬರೋಬ್ಬರಿ ಎಂಟು ವರ್ಷ ಮನೆಯಿಂದ ದೂರ ಇದ್ದೆ. ಅಪ್ಪ, ಅಮ್ಮ, ಕುಟುಂಬದವರ ಕಷ್ಟ ಸುಖದಲ್ಲಿ ಭಾಗಿಯಾಗಲೂ ಆಗಿರಲಿಲ್ಲ. ದೂರದಿಂದಲೇ ಎಲ್ಲವನ್ನು ನೋಡಬೇಕಾಗಿತ್ತು. ಇದು ನಾನು ಮಾಡಿದ ಬಹುದೊಡ್ಡ ತ್ಯಾಗ’..

ಒಲಿಂಪಿಕ್ಸ್‌ನ ಮಹಿಳೆಯರ ಬಾಕ್ಸಿಂಗ್‌ನಲ್ಲಿ ಕಂಚಿನ ಸಾಧನೆ ಮಾಡಿರುವ ಲವ್ಲಿನಾ ಬೊರ್ಗೊಹೈನ್‌ ಅವರ ನುಡಿಗಳಿವು.

‘ಹೊರಗಡೆ ಸುತ್ತಾಡಬೇಕು, ನೋಡಿದ್ದನ್ನೆಲ್ಲಾ ತಿನ್ನಬೇಕು ಹೀಗೆ ನನ್ನ ವಯೋಮಾನದವರಿಗೆ ಸಾಕಷ್ಟು ಆಸೆಗಳಿರುತ್ತವೆ. ಅದನ್ನೆಲ್ಲಾ ಬದಿಗೊತ್ತಿದ್ದೆ. ಎಂಟು ವರ್ಷಗಳಲ್ಲಿ ಒಂದೇ ಒಂದು ದಿನವೂ ತರಬೇತಿಯಿಂದ ದೂರ ಉಳಿದಿಲ್ಲ. ಕುಳಿತರೂ, ನಿಂತುಕೊಂಡರೂ ಬಾಕ್ಸಿಂಗ್‌ ಬಗ್ಗೆಯೇ ಯೋಚಿಸುತ್ತಿದ್ದೆ’ ಎಂದು 23 ವರ್ಷದ ಲವ್ಲಿನಾ ಸಂದರ್ಶನದಲ್ಲಿ ತಿಳಿಸಿದ್ದಾರೆ.  

‘ಟೋಕಿಯೊ ಕೂಟ ಮುಗಿದ ಅಧ್ಯಾಯ. 2024ರಲ್ಲಿ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ ನಿಗದಿಯಾಗಿದೆ. ಅಲ್ಲಿ ಪದಕ ಗೆಲ್ಲಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಈ ಬಾರಿ ಏನೆಲ್ಲಾ ತಪ್ಪುಗಳನ್ನು ಮಾಡಿದ್ದೇನೆ ಎಂಬುದನ್ನು ಪತ್ತೆಹಚ್ಚಿ ತಿದ್ದಿಕೊಳ್ಳಬೇಕು. ಜೊತೆಗೆ ಇನ್ನಿತರ ಹೊಸ ತಂತ್ರಗಳನ್ನು ಕಲಿಯಬೇಕು. ಅದಕ್ಕೂ ಮುನ್ನ ಚಿಕ್ಕ ಬಿಡುವು ಪಡೆಯುತ್ತೇನೆ’ ಎಂದಿದ್ದಾರೆ. 

‘ಒಲಿಂಪಿಕ್ಸ್‌ಗೆ ನಾಲ್ಕು ತಿಂಗಳು ಇದ್ದಾಗ ಸ್ಟ್ರೆಂತ್‌ ಮತ್ತು ಕಂಡಿಷನಿಂಗ್‌ಗೆ ಒತ್ತು ನೀಡಿದ್ದೆ. ಈ ಕೆಲಸ ನಾಲ್ಕು ವರ್ಷವೂ ಆಗಬೇಕು. ಹಾಗಾದಾಗ ಮಾತ್ರ ಒಲಿಂಪಿಕ್ಸ್‌ನಂತಹ ಮಹಾಕೂಟದಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಲು ಸಾಧ್ಯ. ಭಾವನೆಗಳನ್ನೆಲ್ಲಾ ನನ್ನೊಳಗೆ ಕಟ್ಟಿಹಾಕಿದ್ದೆ. ಅಂತರಂಗದಲ್ಲಿ ಹುದುಗಿದ್ದ ಅವು ಪಂದ್ಯ ಗೆದ್ದಾಗ ಒಂದೊಂದಾಗಿಯೇ ಅಭಿವ್ಯಕ್ತಗೊಳ್ಳುತ್ತಿದ್ದವು’ ಎಂದು ತಿಳಿಸಿದ್ದಾರೆ.

‘ಈ ಹಿಂದೆ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ನಿಯೆನ್‌ ಚಿನ್‌ ಚೆನ್‌ ವಿರುದ್ಧ ನಾಲ್ಕು ಬಾರಿ ಸೋತಿದ್ದೆ. ಒಲಿಂಪಿಕ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಅವರನ್ನು ಮಣಿಸಿಬಿಟ್ಟೆ. ಆ ಗೆಲುವು ನನ್ನ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ಕತಾರ್‌ನ ಮುಸ್ತಾಜ್‌ ಬಾರ್ಸಿಂ ಮತ್ತು ಇಟಲಿಯ ಜಿಯಾನ್‌ಮಾರ್ಕೊ ಟಾಂಬೆರಿ ಅವರು 2.37 ಮೀಟರ್ಸ್‌ ಸಾಮರ್ಥ್ಯ ತೋರಿ ಪುರುಷರ ಹೈಜಂಪ್‌ ಸ್ಪರ್ಧೆಯ ಚಿನ್ನದ ಪದಕ ಹಂಚಿಕೊಂಡಿದ್ದು ಎಲ್ಲರ ಗಮನ ಸೆಳೆಯಿತು. ಮಾನವೀಯತೆ ಇನ್ನೂ ಮರೆಯಾಗಿಲ್ಲ ಎಂಬುದಕ್ಕೆ ಆ ಕ್ಷಣ ಸಾಕ್ಷಿಯಂತಿತ್ತು. ಕ್ರೀಡೆಯು ಭಾವನೆಗಳನ್ನು ಬೆಸೆಯುವ ಸೇತುವೆ ಎಂಬುದಕ್ಕೂ ಅದು ನಿದರ್ಶನವಾಗಿತ್ತು’ ಎಂದು ನುಡಿದರು.    

‘ನನ್ನಲ್ಲಿ ಯಾವ ಬದಲಾವಣೆಗಳನ್ನೂ ಮಾಡಿಕೊಳ್ಳುವುದಿಲ್ಲ. ಮುಂದಿನ ಒಲಿಂಪಿಕ್ಸ್‌ನಲ್ಲಿ ಪದಕದ ಬಣ್ಣ ಬದಲಿಸುತ್ತೇನೆ. ನಾನು ಬಾಕ್ಸಿಂಗ್‌ನ ವಿಧೇಯ ವಿದ್ಯಾರ್ಥಿ. ಅದನ್ನು ಎಂದಿಗೂ ಮರೆಯುವುದಿಲ್ಲ’ ಎಂದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು