ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ: ಯುವ ಟೆನಿಸ್‌ ಆಟಗಾರ ಜರ್ಮನಿಯ ಜ್ವೆರೆವ್‌ ಚಿನ್ನದ ಸಾಧನೆ

Last Updated 1 ಆಗಸ್ಟ್ 2021, 16:50 IST
ಅಕ್ಷರ ಗಾತ್ರ

ಟೋಕಿಯೊ: ಯುವ ಟೆನಿಸ್‌ ಆಟಗಾರ ಅಲೆಕ್ಸಾಂಡರ್‌ ಜ್ವೆರೆವ್‌ ಭಾನುವಾರ ಟೋಕಿಯೊ ಅಂಗಳದಲ್ಲಿ ಚಿನ್ನದ ಸಂಭ್ರಮ ಆಚರಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ 6–3, 6–1 ನೇರ ಸೆಟ್‌ಗಳಿಂದ ರಷ್ಯಾ ಒಲಿಂಪಿಕ್‌ ಸಮಿತಿಯ (ಆರ್‌ಒಸಿ) ಕರೆನ್‌ ಕಚಾನೊವ್‌ ಅವರನ್ನು ಮಣಿಸಿದರು. ಇದರೊಂದಿಗೆ ಈ ಸಾಧನೆ ಮಾಡಿದ ಜರ್ಮನಿಯ ಮೊದಲ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿರುವ ಜ್ವೆರೆವ್‌, ಸೆಮಿಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ನೊವಾಕ್‌ ಜೊಕೊವಿಚ್‌ಗೆ ಆಘಾತ ನೀಡಿದ್ದರು. ಹೀಗಾಗಿ ಕರೆನ್‌ ವಿರುದ್ಧವೂ ವಿಶ್ವಾಸದಿಂದಲೇ ಹೋರಾಡಿದರು. ಮಿಂಚಿನ ಸರ್ವ್‌ ಹಾಗೂ ರಿಟರ್ನ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ಮೊದಲ ಸೆಟ್‌ನಲ್ಲಿ ಜ್ವೆರೆವ್‌ಗೆ ಅಲ್ಪ ಪ್ರತಿರೋಧ ಒಡ್ಡಿದ ಕರೆನ್‌, ಎರಡನೇ ಸೆಟ್‌ನಲ್ಲಿ ಮಂಕಾದರು. ತಾವು ಮಾಡಿದ ಸರ್ವ್‌ಗಳನ್ನು ಉಳಿಸಿಕೊಳ್ಳಲೂ ವಿಫಲರಾದರು.

‘ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದು ಅತೀವ ಸಂತಸ ನೀಡಿದೆ. ಹಲವು ಟೂರ್ನಿಗಳಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದೇನೆ. ಆದರೆ ಟೋಕಿಯೊದಲ್ಲಿ ಗೆದ್ದ ಚಿನ್ನ ಅವೆಲ್ಲಕ್ಕಿಂತಲೂ ವಿಶೇಷವಾದುದು’ ಎಂದು ಜ್ವೆರೆವ್‌ ಪ್ರತಿಕ್ರಿಯಿಸಿದ್ದಾರೆ.

ಬಾರ್ಬೊರಾ ಜೋಡಿಗೆ ಚಿನ್ನ: ಮಹಿಳಾ ಡಬಲ್ಸ್‌ ವಿಭಾಗದ ಚಿನ್ನದ ಪದಕವು ಜೆಕ್‌ ಗಣರಾಜ್ಯದ ಬಾರ್ಬೊರಾ ಕ್ರೆಜಿಸಿಕೊವಾ ಮತ್ತು ಕ್ಯಾಥರಿನಾ ಸಿನಿಯಾಕೊವಾ ಅವರ ಪಾಲಾಯಿತು.

ಬಾರ್ಬೊರಾ ಮತ್ತು ಕ್ಯಾಥರಿನಾ ಫೈನಲ್‌ನಲ್ಲಿ 7–5, 6–1ರಿಂದ ಸ್ವಿಟ್ಜರ್ಲೆಂಡ್‌ನ ಬೆಲಿಂಡಾ ಬೆನ್‌ಸಿಚ್‌ ಮತ್ತು ವಿಕ್ಟೋರಿಯಾ ಗೊಲುಬಿಚ್‌ ಎದುರು ಗೆದ್ದರು.

ಮಿಶ್ರ ಡಬಲ್ಸ್‌ ವಿಭಾಗದ ಚಿನ್ನ ಮತ್ತು ಬೆಳ್ಳಿಯ ಪದಕಗಳು ರಷ್ಯಾ ಒಲಿಂಪಿಕ್‌ ಸಮಿತಿಯ ಪಾಲಾದವು.

ಫೈನಲ್‌ನಲ್ಲಿ ಆ್ಯಂಡ್ರೆ ರುಬಲೆವ್‌ ಮತ್ತು ಅನಸ್ತೇಸಿಯಾ ಪ್ಯಾವಲ್ಯುಚೆಂಕೊವಾ 6–3, 6–7ರಿಂದ ತಮ್ಮದೇ ದೇಶದ ಎಲಿನಾ ವೆಸ್ನಿನಾ ಮತ್ತು ಅಸ್ಲಾನ್‌ ಕರಾತ್ಸೇವ್‌ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT