ಶನಿವಾರ, ಸೆಪ್ಟೆಂಬರ್ 25, 2021
22 °C
ದಕ್ಷಿಣ ಕೊರಿಯಾದ ಆ್ಯನ್‌ ಸಾನ್‌ ಮತ್ತು ಕಿಮ್‌ ಜೆ ಡಿಯೊಕ್‌ಗೆ ಚಿನ್ನ

Tokyo Olympics: ಆರ್ಚರಿ- ಕ್ವಾರ್ಟರ್‌ನಲ್ಲಿ ಎಡವಿದ ದೀಪಿಕಾ–ಪ್ರವೀಣ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಆರ್ಚರಿ ಸ್ಪರ್ಧೆಯ ಮಿಶ್ರ ತಂಡ ವಿಭಾಗದಲ್ಲಿ ಭಾರತದ ಪದಕದ ಕನಸು ಕಮರಿದೆ.

ಅನುಭವಿ ದೀಪಿಕಾ ಕುಮಾರಿ ಹಾಗೂ ಪ್ರವೀಣ್ ಜಾಧವ್‌, ಬಲಿಷ್ಠ ದಕ್ಷಿಣ ಕೊರಿಯಾ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ ಶನಿವಾರ 2–6ರಿಂದ ಸೋತರು.

ದೀಪಿಕಾ ಮತ್ತು ಪ್ರವೀಣ್‌ ಅಂತರರಾಷ್ಟ್ರೀಯ ಕೂಟದಲ್ಲಿ ಮೊದಲ ಬಾರಿ ಜೊತೆಯಾಗಿ ಕಣಕ್ಕಿಳಿದಿದ್ದರು. 

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ದೀಪಿಕಾ ಎಂಟು ಅವಕಾಶಗಳ ಪೈಕಿ ಒಮ್ಮೆಯೂ ‘ಪರ್ಫೆಕ್ಟ್‌ 10’ಗೆ ಗುರಿ ಇಡಲಿಲ್ಲ. ಮೊದಲ ಬಾರಿ ಒಲಿಂಪಿಕ್ಸ್‌ ಅಂಗಳಕ್ಕಿಳಿದಿರುವ ಪ್ರವೀಣ್‌ ಆರು ಬಾರಿ ಗುರಿತಪ್ಪಿದರು. 

ಇದನ್ನೂ ಓದಿ: 

ಯುಮೆನೊಶಿಮಾ ಪಾರ್ಕ್‌ನಲ್ಲಿ ನಡೆದ ಪೈಪೋಟಿಯಲ್ಲಿ ಕೊರಿಯಾದ ಅಗ್ರಶ್ರೇಯಾಂಕಿತ ಜೋಡಿ ಆ್ಯನ್‌ ಸಾನ್‌ ಮತ್ತು ಕಿಮ್‌ ಜೆ ಡಿಯೊಕ್‌ ನಿಖರ ಗುರಿ ಹಿಡಿಯಿತು. ಆ ಮೂಲಕ 35–32ರಿಂದ ಮೊದಲ ಸೆಟ್‌ ಜಯಿಸಿತು.

ಎರಡನೇ ಸೆಟ್‌ನಲ್ಲಿ ಪ್ರವೀಣ್‌ ಮಿಂಚಿದರು. ಎರಡು ಬಾರಿಯೂ 10 ಪಾಯಿಂಟ್ಸ್‌ಗೆ ಗುರಿ ಇಟ್ಟರು. ಆದರೆ ದೀಪಿಕಾ ಬಿಟ್ಟ ಬಾಣಗಳು 8 ಮತ್ತು 9ನೇ ಪಾಯಿಂಟ್ಸ್‌ನ ವೃತ್ತದೊಳಗೆ ನಾಟಿದವು. ಹೀಗಾಗಿ ಭಾರತದ ಜೋಡಿ ಒಂದೇ ಪಾಯಿಂಟ್‌ನಿಂದ (37–38) ಸೆಟ್‌ ಸೋತಿತು.

ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಭಾರತದ ಜೋಡಿ ಮೂರು ಬಾರಿ 9 ಹಾಗೂ ಒಮ್ಮೆ 8 ಪಾಯಿಂಟ್ಸ್‌ಗೆ ಗುರಿ ಇಟ್ಟಿತು. ಕೊರಿಯಾ ತಂಡದ ಆ್ಯನ್‌ ಸಾನ್‌ ತಮ್ಮ ಪಾಲಿನ ಕೊನೆಯ ಅವಕಾಶದಲ್ಲಿ 8 ಪಾಯಿಂಟ್ಸ್‌ ಪಡೆಯಲಷ್ಟೇ ಶಕ್ತರಾದರು. ಹೀಗಾಗಿ ಸೆಟ್‌ ಭಾರತದ ತೆಕ್ಕೆಗೆ ಜಾರಿತು.

ಇದನ್ನೂ ಓದಿ: 

ನಾಲ್ಕನೇ ಸೆಟ್‌ನಲ್ಲೂ ದೀಪಿಕಾ ಮತ್ತು ಪ್ರವೀಣ್‌ ಮಿಂಚಬಹುದೆಂಬ ನಿರೀಕ್ಷೆ ಹುಸಿಯಾಯಿತು. ಇವರು ನೀರಸ ಸಾಮರ್ಥ್ಯ ತೋರಿ ಪದಕದ ರೇಸ್‌ನಿಂದ ಹೊರಬಿದ್ದರು. ಇದಕ್ಕೂ ಮುನ್ನ ಭಾರತದ ಜೋಡಿ 5–3ರಿಂದ ಚೀನಾ ತೈಪೆಯ ಚಿಯಾ ಎನ್‌ ಲಿನ್‌ ಹಾಗೂ ಚಿಹ್‌ ಚುನ್‌ ಟಾಂಗ್‌ ಅವರನ್ನು ಸೋಲಿಸಿತ್ತು.

ಕೊರಿಯಾ ಜೋಡಿಗೆ ಚಿನ್ನ: ಆ್ಯನ್‌ ಸಾನ್‌ ಮತ್ತು ಕಿಮ್‌ ಜೆ ಡಿಯೊಕ್‌ ಸೆಮಿಫೈನಲ್‌ ಮತ್ತು ಫೈನಲ್‌ನಲ್ಲೂ ಪ್ರಾಬಲ್ಯ ಮೆರೆದು ಚಿನ್ನದ ಪದಕ ಪಡೆದರು.

ಫೈನಲ್‌ನಲ್ಲಿ ಇವರು 5–3ರಿಂದ ನೆದರ್ಲೆಂಡ್ಸ್‌ನ ಗೇಬ್ರಿಯೆಲಾ ಮತ್ತು ಸ್ಟೀವ್‌ ವಿಜ್ಲರ್‌ ಅವರನ್ನು ಮಣಿಸಿದರು.

ಕಂಚಿನ ಪದಕದ ಪೈಪೋಟಿಯಲ್ಲಿ ಮೆಕ್ಸಿಕೊ 6–2ರಿಂದ ಟರ್ಕಿ ಎದುರು ಜಯಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು